ಕ್ಯಾಬಿನ್‌ನಲ್ಲಿ ಬೆಡ್‌ರೂಮ್, ರೈಲಿನಲ್ಲೇ ಸ್ಪಾ, ರೆಸ್ಟೋರೆಂಟ್; ಮತ್ತೆ ಹಳಿಗಿಳಿದ ಕರ್ನಾಟಕದ ಗೋಲ್ಡನ್ ಚಾರಿಯಟ್ ರೈಲು

Published : Oct 30, 2026, 01:46 PM IST
karnataka golden chariot luxury train 2026 27 Routes Dates

ಸಾರಾಂಶ

ಕರ್ನಾಟಕದ ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' (The Golden Chariot) 2026-27ನೇ ಸಾಲಿನ ಪ್ರವಾಸಿ ಋತುವಿಗೆ ಹೊಸ ರೂಪದಲ್ಲಿ ಮರಳಿದೆ. ನವೀಕರಿಸಿದ ಕ್ಯಾಬಿನ್‌ಗಳು, ಹೊಸ ಸ್ಪಾ ಸೇರಿದಂತೆ ಹಲವು ಸೌಲಭ್ಯಗಳೊಂದಿಗೆ ಈ ರೈಲು ತನ್ನ ಮೊದಲ ಪ್ರಯಾಣವನ್ನು ಅಕ್ಟೋಬರ್ 24ರಂದು ಆರಂಭಿಸಿದೆ.

ಕರ್ನಾಟಕದ ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' (The Golden Chariot) 2026-27ನೇ ಸಾಲಿನ ಪ್ರವಾಸಿ ಋತುವಿಗೆ ಹೊಸ ರೂಪದಲ್ಲಿ ಮರಳಿದೆ. ನವೀಕರಿಸಿದ ಕ್ಯಾಬಿನ್‌ಗಳು, ಹೊಸ ಸ್ಪಾ ಸೇರಿದಂತೆ ಹಲವು ಸೌಲಭ್ಯಗಳೊಂದಿಗೆ ಈ ರೈಲು ತನ್ನ ಮೊದಲ ಪ್ರಯಾಣವನ್ನು ಅಕ್ಟೋಬರ್ 24ರಂದು ಆರಂಭಿಸಿದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ನಿರ್ವಹಿಸುವ ಈ ಐಷಾರಾಮಿ ರೈಲು ಮಾರ್ಚ್ 2027ರವರೆಗೆ ಪ್ರವಾಸಿಗರಿಗೆ ಸೇವೆ ನೀಡಲಿದೆ.

ದಕ್ಷಿಣ ಭಾರತದ ಐತಿಹಾಸಿಕ ತಾಣಗಳು, ಪಾರಂಪರಿಕ ಸ್ಮಾರಕಗಳು ಮತ್ತು ಸುಂದರ ಪ್ರವಾಸಿ ತಾಣಗಳನ್ನು ಒಂದೇ ಪ್ರಯಾಣದಲ್ಲಿ ನೋಡಲು ಬಯಸುವವರಿಗೆ ಗೋಲ್ಡನ್ ಚಾರಿಯಟ್ ವಿಶೇಷ ಅನುಭವ ನೀಡಲಿದೆ. ಬೆಂಗಳೂರಿನಿಂದಲೇ ಆರಂಭವಾಗಿ ಬೆಂಗಳೂರಿನಲ್ಲೇ ಮುಕ್ತಾಯಗೊಳ್ಳುವ ಈ ಪ್ರವಾಸದಲ್ಲಿ ಹಗಲಿನಲ್ಲಿ ಮಾರ್ಗದರ್ಶಕರೊಂದಿಗೆ ಪ್ರವಾಸಿ ತಾಣಗಳ ವೀಕ್ಷಣೆ ಹಾಗೂ ರಾತ್ರಿ ರೈಲಿನಲ್ಲೇ ಐಷಾರಾಮಿ ವಾಸ್ತವ್ಯದ ವ್ಯವಸ್ಥೆ ಇರಲಿದೆ. ಈ ಬಾರಿ ಪ್ರವಾಸಿಗರಿಗೆ ಮೂರು ವಿಭಿನ್ನ ಪ್ಯಾಕೇಜ್‌ಗಳನ್ನು ಪರಿಚಯಿಸಲಾಗಿದೆ. ನಾಲ್ಕು ದಿನಗಳ ಪ್ರವಾಸದಿಂದ ಆರು ದಿನಗಳ ಪ್ರವಾಸದವರೆಗೆ ಆಯ್ಕೆಗಳಿದ್ದು, ಪ್ರತಿ ವ್ಯಕ್ತಿಗೆ ₹2,80,450ರಿಂದ ಟಿಕೆಟ್ ದರ ಆರಂಭವಾಗುತ್ತದೆ. ಹಾಗಾದರೆ ಈ ರೈಲಿನ ಮಾರ್ಗಗಳು ಯಾವುವು? ಟಿಕೆಟ್ ದರ ಎಷ್ಟು? ಯಾವೆಲ್ಲ ಸೌಲಭ್ಯಗಳಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಗೋಲ್ಡನ್ ಚಾರಿಯಟ್‌ನ ಮೂರು ಪ್ರವಾಸ ಪ್ಯಾಕೇಜ್‌ಗಳು

ಗೋಲ್ಡನ್ ಚಾರಿಯಟ್ ರೈಲು ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ಹಲವು ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡ ಮೂರು ಮಾರ್ಗಗಳಲ್ಲಿ ಸಂಚರಿಸಲಿದೆ.

1. ಗ್ಲಿಂಪ್ಸಸ್ ಆಫ್ ಕರ್ನಾಟಕ (3 ರಾತ್ರಿ/4 ದಿನ)

ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳನ್ನು ಕಡಿಮೆ ಅವಧಿಯಲ್ಲಿ ವೀಕ್ಷಿಸಲು ಬಯಸುವವರಿಗಾಗಿ ಈ ಪ್ಯಾಕೇಜ್ ರೂಪಿಸಲಾಗಿದೆ. ಈ ಪ್ರವಾಸದಲ್ಲಿ ಬಂಡೀಪುರ, ಮೈಸೂರು ಮತ್ತು ಹಂಪಿಗೆ ಭೇಟಿ ನೀಡಬಹುದು.

ಅವಧಿ: 3 ರಾತ್ರಿ, 4 ದಿನ

ಟಿಕೆಟ್ ದರ: ಪ್ರತಿ ವ್ಯಕ್ತಿಗೆ ₹2,80,450

2. ಪ್ರೈಡ್ ಆಫ್ ಕರ್ನಾಟಕ (5 ರಾತ್ರಿ/6 ದಿನ)

ಕರ್ನಾಟಕದ ಇತಿಹಾಸ, ವಾಸ್ತುಶಿಲ್ಪ ಮತ್ತು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ ಈ ಪ್ಯಾಕೇಜ್ ಸೂಕ್ತವಾಗಿದೆ. ಬಂಡೀಪುರ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ, ಪಟ್ಟದಕಲ್ಲು ಮತ್ತು ಐಹೊಳೆಗೆ ಭೇಟಿ ನೀಡಿದ ಬಳಿಕ ಪ್ರವಾಸ ಗೋವಾದಲ್ಲಿ ಮುಕ್ತಾಯಗೊಳ್ಳಲಿದೆ.

ಅವಧಿ: 5 ರಾತ್ರಿ, 6 ದಿನ

ಟಿಕೆಟ್ ದರ: ಪ್ರತಿ ವ್ಯಕ್ತಿಗೆ ₹4,20,680

3. ಜ್ಯುವೆಲ್ಸ್ ಆಫ್ ಸೌತ್ (5 ರಾತ್ರಿ/6 ದಿನ)

ದಕ್ಷಿಣ ಭಾರತದ ಹಲವು ರಾಜ್ಯಗಳ ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡಿರುವುದು ಈ ಪ್ಯಾಕೇಜ್‌ನ ವಿಶೇಷತೆ. ಮೈಸೂರು, ಹಂಪಿ, ಮಹಾಬಲಿಪುರಂ, ತಂಜಾವೂರು, ಚೆಟ್ಟಿನಾಡು, ಕೊಚ್ಚಿ ಮತ್ತು ಕುಮಾರಕೋಮ್ ಈ ಪ್ರವಾಸದ ಪ್ರಮುಖ ತಾಣಗಳಾಗಿವೆ.

ಅವಧಿ: 5 ರಾತ್ರಿ, 6 ದಿನ

ಟಿಕೆಟ್ ದರ: ಪ್ರತಿ ವ್ಯಕ್ತಿಗೆ ₹4,20,680

ಈ ಎಲ್ಲಾ ದರಗಳು ಇಬ್ಬರು ಪ್ರಯಾಣಿಕರು ಒಂದೇ ಡಿಲಕ್ಸ್ ಕ್ಯಾಬಿನ್ ಹಂಚಿಕೊಂಡು ಪ್ರಯಾಣಿಸುವ (Twin Sharing) ಆಧಾರದ ಮೇಲೆ ನಿಗದಿಪಡಿಸಲಾಗಿದೆ. ತೆರಿಗೆಗಳು ಹೆಚ್ಚುವರಿಯಾಗಿದ್ದು, ಅಂತಿಮ ಟಿಕೆಟ್ ಮೊತ್ತದಲ್ಲಿ ವ್ಯತ್ಯಾಸವಾಗಬಹುದು.

ಟಿಕೆಟ್ ದರದಲ್ಲಿ ಏನೆಲ್ಲ ಸೌಲಭ್ಯಗಳು ಸಿಗುತ್ತವೆ?

ಗೋಲ್ಡನ್ ಚಾರಿಯಟ್‌ನ ಪ್ಯಾಕೇಜ್‌ನಲ್ಲಿ ರೈಲಿನಲ್ಲಿನ ವಾಸ್ತವ್ಯ, ಊಟ, ಆಯ್ದ ಪಾನೀಯಗಳು ಸೇರಿದಂತೆ ಹಲವು ಸೌಲಭ್ಯಗಳು ಸೇರಿವೆ. ಪ್ರವಾಸದ ವೇಳೆ ಹವಾನಿಯಂತ್ರಿತ ವಾಹನಗಳಲ್ಲಿ ಮಾರ್ಗದರ್ಶಕರೊಂದಿಗೆ ಸ್ಥಳ ವೀಕ್ಷಣೆ, ಸ್ಮಾರಕಗಳ ಪ್ರವೇಶ ಶುಲ್ಕ ಹಾಗೂ ನಿಗದಿತ ಪ್ರವಾಸಿ ತಾಣಗಳಲ್ಲಿ ರೈಲಿನ ಹೊರಗೆ ಊಟದ ವ್ಯವಸ್ಥೆಯೂ ಇರಲಿದೆ. ಹೀಗಾಗಿ ಪ್ರವಾಸದ ಪ್ರಮುಖ ಖರ್ಚುಗಳನ್ನು ಮುಂಚಿತವಾಗಿಯೇ ಅಂದಾಜು ಮಾಡಿಕೊಳ್ಳಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಆದರೆ ಬುಕಿಂಗ್ ಮಾಡುವ ಮೊದಲು ತೆರಿಗೆಗಳು, ಹೆಚ್ಚುವರಿ ಶುಲ್ಕಗಳು ಮತ್ತು ಪ್ಯಾಕೇಜ್‌ನಲ್ಲಿ ಸೇರಿರದ ಸೌಲಭ್ಯಗಳ ಬಗ್ಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸುವುದು ಉತ್ತಮ.

ರೈಲಿನಲ್ಲಿ ಐಷಾರಾಮಿ ಕ್ಯಾಬಿನ್, ಹೊಸ ಸ್ಪಾ ಸೌಲಭ್ಯ

ಗೋಲ್ಡನ್ ಚಾರಿಯಟ್‌ನ ಒಳಾಂಗಣ ವಿನ್ಯಾಸವು ದಕ್ಷಿಣ ಭಾರತದ ದ್ರಾವಿಡ ವಾಸ್ತುಶಿಲ್ಪದಿಂದ ಪ್ರೇರಿತವಾಗಿದೆ. ಮರದ ಅಲಂಕಾರಗಳು, ಸುಂದರ ಕೆತ್ತನೆಗಳು ರೈಲಿಗೆ ರಾಜಮನೆತನದ ವೈಭವದ ಅನುಭವ ನೀಡುತ್ತವೆ.

ನವೀಕರಣದ ಬಳಿಕ ಕ್ಯಾಬಿನ್‌ಗಳಲ್ಲಿ ಹೊಸ ಪೀಠೋಪಕರಣಗಳು, ಸ್ಮಾರ್ಟ್ ಟಿವಿ ಮತ್ತು ವೈ-ಫೈ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಡಬಲ್ ಬೆಡ್ ಮತ್ತು ಟ್ವಿನ್ ಬೆಡ್ ಆಯ್ಕೆಗಳಿವೆ. ವಿಶೇಷ ಚೇತನ ಪ್ರಯಾಣಿಕರಿಗೂ ಅನುಕೂಲವಾಗುವ ಕ್ಯಾಬಿನ್‌ಗಳ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆಗಾಗಿ ಕಣ್ಗಾವಲು ಮತ್ತು ಅಗ್ನಿ ಸುರಕ್ಷತಾ ವ್ಯವಸ್ಥೆಗಳನ್ನೂ ಉನ್ನತೀಕರಿಸಲಾಗಿದೆ.

ಒಟ್ಟು 40 ಕ್ಯಾಬಿನ್‌ಗಳಲ್ಲಿ 80 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಪ್ರತಿಯೊಂದು ಕ್ಯಾಬಿನ್‌ನಲ್ಲೂ ಪ್ರತ್ಯೇಕ ಸ್ನಾನಗೃಹದ ವ್ಯವಸ್ಥೆ ಇದೆ. ರೈಲಿನಲ್ಲಿ 'ಆರೋಗ್ಯ ಸ್ಪಾ ಮತ್ತು ಫಿಟ್‌ನೆಸ್ ಸೆಂಟರ್', 'ಮದಿರಾ' ಲೌಂಜ್ ಬಾರ್ ಹಾಗೂ ರುಚಿ ಮತ್ತು ನಳಪಾಕ ಎಂಬ ಎರಡು ರೆಸ್ಟೋರೆಂಟ್‌ಗಳಿವೆ.

ಈ ರೆಸ್ಟೋರೆಂಟ್‌ಗಳಲ್ಲಿ ದಕ್ಷಿಣ ಭಾರತದ ವಿವಿಧ ಪ್ರಾದೇಶಿಕ ಖಾದ್ಯಗಳ ಜೊತೆಗೆ ಅಂತರರಾಷ್ಟ್ರೀಯ ಆಹಾರ ಪದಾರ್ಥಗಳನ್ನೂ ಸವಿಯಬಹುದು. ಹೊಸ ಸ್ಪಾ ಮತ್ತು ಫಿಟ್‌ನೆಸ್ ಸೌಲಭ್ಯಗಳು ಪ್ರಯಾಣದ ಅನುಭವವನ್ನು ಮತ್ತಷ್ಟು ವಿಶೇಷವಾಗಿಸಲಿವೆ.

ಗೋಲ್ಡನ್ ಚಾರಿಯಟ್ ರೈಲಿನ ಪ್ರಯಾಣದ ದಿನಾಂಕಗಳು

IRCTC ಮಾರ್ಚ್ 13, 2027ರವರೆಗೆ ವಿವಿಧ ಪ್ರಯಾಣದ ದಿನಾಂಕಗಳನ್ನು ಪ್ರಕಟಿಸಿದೆ. ನಿಗದಿತ ವೇಳಾಪಟ್ಟಿಯ ಪ್ರಕಾರ ಶನಿವಾರದಂದು ಪ್ರಯಾಣ ಆರಂಭವಾಗಲಿದೆ.

ಗ್ಲಿಂಪ್ಸಸ್ ಆಫ್ ಕರ್ನಾಟಕ ಅಕ್ಟೋಬರ್ 31, 2026; ಡಿಸೆಂಬರ್ 19, 2026; ಫೆಬ್ರವರಿ 6, 2027

ಪ್ರೈಡ್ ಆಫ್ ಕರ್ನಾಟಕ ಡಿಸೆಂಬರ್ 26, 2026; ಜನವರಿ 2, ಜನವರಿ 30, ಫೆಬ್ರವರಿ 27 ಮತ್ತು ಮಾರ್ಚ್ 13, 2027

ಜ್ಯುವೆಲ್ಸ್ ಆಫ್ ಸೌತ್ ಫೆಬ್ರವರಿ 20, 2027

ಗೋಲ್ಡನ್ ಚಾರಿಯಟ್ ಟಿಕೆಟ್ ಬುಕ್ ಮಾಡುವುದು ಹೇಗೆ?

ಗೋಲ್ಡನ್ ಚಾರಿಯಟ್‌ನಲ್ಲಿ ಪ್ರಯಾಣಿಸಲು ಬಯಸುವವರು ರೈಲಿನ ಅಧಿಕೃತ ವೆಬ್‌ಸೈಟ್ ಮೂಲಕ, IRCTC ಕಚೇರಿಗಳಲ್ಲಿ ಅಥವಾ ಅಧಿಕೃತ ಏಜೆಂಟ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಬಹುದು. ಕ್ಯಾಬಿನ್ ಕಾಯ್ದಿರಿಸಲು ಒಟ್ಟು ಮೊತ್ತದ ಶೇ.20ರಷ್ಟು ಮುಂಗಡ ಪಾವತಿ ಮಾಡಬೇಕಾಗುತ್ತದೆ. ಉಳಿದ ಮೊತ್ತವನ್ನು ಪ್ರಯಾಣ ಆರಂಭವಾಗುವುದಕ್ಕಿಂತ 30 ದಿನಗಳ ಮೊದಲು ಪಾವತಿಸಬೇಕು. ಏಜೆಂಟ್‌ಗಳ ಮೂಲಕ ಬುಕ್ ಮಾಡುವವರಿಗೆ ಉಳಿದ ಹಣ ಪಾವತಿಸಲು 60 ದಿನಗಳ ಗಡುವು ನಿಗದಿಪಡಿಸಲಾಗಿದೆ.

PREV
Read more Articles on
click me!

Recommended Stories

ಕೇವಲ ₹5 ಲಕ್ಷ ಹೂಡಿಕೆ, ಈಗ ₹20 ಲಕ್ಷದ ಉದ್ಯಮ! ಬೆಂಗಳೂರಿನ ಮಹಿಳೆಯ ಬಿಂದಿ ಬಿಸಿನೆಸ್‌ಗೆ ಬಾಲಿವುಡ್ ತಾರೆಯರೇ ಗ್ರಾಹಕರು!
Zero ದಿಂದ ₹150 ಕೋಟಿ ಒಡೆಯ, ಮಂಗಳೂರಿನ ಮನೆಮಾತಾದ 'ಐಡಿಯಲ್ ಐಸ್‌ಕ್ರೀಂ' ಸಾಮ್ರಾಜ್ಯದ Hero ಪ್ರಭಾಕರ್ ಕಾಮತ್