ತುಂಗಭದ್ರ ಜಲಾಶಯ ಒಡೆದಿದೆ ಎಂಬ ವದಂತಿ!| ಕಾಲುವೆಯ ಗೇಟ್ ಒಡೆದು ಅವಾಂತರ| ಭಯಗೊಂಡು ಬೆಟ್ಟ ಏರಿದ ಜನತೆ
ಗಂಗಾವತಿ[ಆ.14]: ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯ ಮೇಲ್ಮಟ್ಟದ ಕಾಲುವೆಯ, 123 ಅಡಿ ಆಳದಲ್ಲಿರುವ ಗೇಟ್ ಪ್ಲೇಟ್ ಮುರಿದು ಏಕಾಏಕಿ ಅಪಾರ ಪ್ರಮಾಣದ ನೀರು ಹರಿದ ಪರಿಣಾಮ, ತುಂಗಭದ್ರ ಜಲಾಶಯವೇ ಒಡೆದಿದೆ ಎಂಬ ಸುಳ್ಳು ಸುದ್ದಿ ಹರಡಿ ನದಿ ತೀರದ ಜನತೆ ಭಯಗೊಂಡು ಗುಡ್ಡವೇರಿದ ಘಟನೆ ಮಂಗಳವಾರ ನಡೆದಿದೆ.
ಏನಿದು ಅವಘಡ?:
undefined
ನೀರು ನಿಯಂತ್ರಣ ಮಾಡುವ ಗೇಟ್ ಮುರಿದು ಕಾಲುವೆಯಲ್ಲಿ ನೀರಿನ ಪ್ರಮಾಣವೇರಿ ಪಂಪಾವನ ಜಲಾವೃತಗೊಂಡಿದೆ. ಕೊನೆಗೆ ಹೊಸದಾಗಿ ಗೇಟ್ ಪ್ಲೇಟ್ ಅಳವಡಿಕೆ ಸೇರಿದಂತೆ ನೀರು ನಿಲ್ಲಿಸಲು ಅಧಿಕಾರಿಗಳು ಮಾಡಿದ ಪ್ರಯತ್ನಗಳೆಲ್ಲವೂ ವಿಫಲಗೊಂಡಿವೆ. ಸದ್ಯ ಶಿವಮೊಗ್ಗ, ಬೆಳಗಾವಿ, ಹೈದರಾಬಾದ್‌ನಿಂದ ತಜ್ಞರ ಕರೆಸುವ ಯತ್ನ ಮಾಡಲಾಗಿದ್ದು, ದುರಸ್ತಿಗೆ 10-15 ತಾಸು ಬೇಕೆಂದು ಅಧಿಕಾರಿಗಳು ಹೇಳಿದ್ದಾರೆ. 123 ಅಡಿ ಆಳದಲ್ಲಿ ದುರಸ್ತಿ ಕಾರ್ಯಾಚರಣೆ ಮಾಡಬೇಕಿರುವ ಕಾರಣ, ಸ್ವಲ್ಪ ಯಾಮಾರಿದರೆ ಜಲಾಶಯಕ್ಕೆ ಅಪಾಯ ಎನ್ನಲಾಗಿದೆ.
ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
ಮಂಗಳವಾರ ಬೆಳಗ್ಗೆ ಕೆಲ ಕಿಡಿಗೇಡಿಗಳು ತುಂಗಭದ್ರ ಜಲಾಶಯ ಒಡೆದು ಹೋಗಿದ್ದು, ಹಳ್ಳಿಗಳು ಮುಳುಗುತ್ತವೆ ಎಂದು ವದಂತಿ ಹರಡಿಸಿದ್ದರು. ಕೆಲ ಸಮಯದಲ್ಲಿ ಸುಳ್ಳುಸುದ್ದಿ ಕಾಡ್ಗಿಚ್ಚಿನಂತೆ ಹರಡಿ, ಗಂಗಾವತಿ ತಾಲೂಕಿನ ಆನೆಗೊಂದಿ, ಹನುಮಹಳ್ಳಿ, ರಾಂಪುರಕ್ರಾಸ್, ತಿಮಲಾಪುರ ಗ್ರಾಮಗಳ ಜನರು ದಿಕ್ಕಪಾಲಾಗಿ ಗುಡ್ಡವೇರಿದ್ದಾರೆ. ಕೊನೆಗೆ ಪೊಲೀಸರು ಜಲಾಶಯ ಒಡೆದಿಲ್ಲ, ಕಾಲುವೆಯ ಗೇಟ್ ಮಾತ್ರ ಒಡೆದಿದೆ ಎಂದು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದ ಬಳಿಕ ಜನ ನಿಟ್ಟುಸಿರು ಬಿಟ್ಟರು.
ಸೇತುವೆ ಕುಸಿದಿದೆ ಎಂಬ ಸುಳ್ಳು ಸುದ್ದಿ ವೈರಲ್: ಜನರಲ್ಲಿ ಆತಂಕ
ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಮಾನದಿಗೆ ಕಟ್ಟಿದ ಸೇತುವೆ ಮುರಿದು ಬಿದ್ದಿದ್ದು, ಸೇತುವೆಯ ಮಧ್ಯಭಾಗ ಒಡೆದು ಹೋಗಿದೆ ಎಂದು ಕೀಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ಎಲ್ಲಿಂದಲೋ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇದು ಭಾರೀ ವೈರಲ್ ಆಗಿದ್ದು, ಇಂಡಿ, ಚಡಚಣ ತಾಲೂಕಿನ ನಾನಾ ಭಾಗಗಳ ಜನರಲ್ಲಿ ಆತಂಕ ಮೂಡಿಸಿತ್ತು.
ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ಭೀಮಾನದಿಯ ಧೂಳಖೇಡ-ಟಾಕಳಿ ಸೇತುವೆಗೆ ಯಾವುದೇ ಹಾನಿಯಾಗಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ವದಂತಿ ಹಬ್ಬಿಸಿದ್ದಾರೆ ಎಂಬುದಾಗಿ ತಿಳಿಯುತ್ತಿದ್ದಂತೆ ಈ ಭಾಗದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಪ್ರಯಾಣಿಕರು, ಸಾರ್ವಜನಿಕರು ಧೂಳಖೇಡ ಗ್ರಾಮಸ್ಥರಿಗೆ ಮತ್ತು ತಮ್ಮ ಗೆಳೆಯರಿಗೆ ಫೋನ್ ಕರೆ ಮಾಡಿ ಸೇತುವೆ ಕುಸಿದಿರುವ ಬಗ್ಗೆ ವಿಚಾರಿಸುತ್ತಿರುವುದು ಸಾಮಾನ್ಯವಾಗಿ ಕಂಡುಬಂತು. ಈ ಸುದ್ದಿ ಹರಡುತ್ತಿದ್ದಂತೆ ಕೆಲ ಕಾಲ ಗ್ರಾಮಸ್ಥರೆಲ್ಲ ಆತಂಕದಲ್ಲಿದ್ದರು. ಈ ಘಟನೆ ನಿಜವೋ, ಸುಳ್ಳೋ ಎಂದು ಸೇತುವೆ ನೋಡಲು ಹೋದಾಗ ಇದೊಂದು ಸುಳ್ಳು ವಂದತಿ ಎಂಬುದು ತಿಳಿದಾಗ ಗ್ರಾಮಸ್ಥರು ನಿರಾಳರಾಗಿದ್ದಾರೆ.