ಬಿಬಿಎಂಪಿ ಮೇಯರ್‌ ಸ್ಥಾನ ಬಿಜೆಪಿಗೆ?

By Web DeskFirst Published Aug 30, 2019, 9:10 AM IST
Highlights

 ಕಾಂಗ್ರೆಸ್‌- ಜೆಡಿಎಸ್‌ನ ನಗರದ ಪ್ರಮುಖ ನಾಲ್ವರು ಅನರ್ಹ ಶಾಸಕರನ್ನು ಆಯಾ ಪಕ್ಷಗಳಿಂದಲೂ ಹೊರ ಹಾಕಿರುವುದರಿಂದ ಬಿಬಿಎಂಪಿಯಲ್ಲಿ ಮೈತ್ರಿ ಪಕ್ಷಗಳ ಸಂಖ್ಯಾಬಲ ಕುಸಿದಿde.ಇದರಿಂದ ಬಿಜೆಪಿ ಅಧಿಕಾರಕ್ಕೆ ಏರುವುದು ಖಚಿತವಾದಂತಾಗಿದೆ. 

ಬೆಂಗಳೂರು [ಆ.30]:  ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಕಾಂಗ್ರೆಸ್‌- ಜೆಡಿಎಸ್‌ನ ನಗರದ ಪ್ರಮುಖ ನಾಲ್ವರು ಅನರ್ಹ ಶಾಸಕರನ್ನು ಆಯಾ ಪಕ್ಷಗಳಿಂದಲೂ ಹೊರ ಹಾಕಿರುವುದರಿಂದ ಬಿಬಿಎಂಪಿಯಲ್ಲಿ ಮೈತ್ರಿ ಪಕ್ಷಗಳ ಸಂಖ್ಯಾಬಲ ಕುಸಿದಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಏರಿರುವ ಬಿಜೆಪಿ ಬಿಬಿಎಂಪಿಯಲ್ಲೂ ಅಧಿಕಾರಕ್ಕೇರುವುದು ಬಹುತೇಕ ಖಚಿತ!

ಬಿಬಿಎಂಪಿಯಲ್ಲಿ ಪ್ರಭಾವಿ ಶಾಸಕರುಗಳಾಗಿದ್ದುಕೊಂಡು ಕಳೆದ ನಾಲ್ಕು ವರ್ಷಗಳಿಂದ ಪಾಲಿಕೆ ಆಡಳಿತ ಮೈತ್ರಿ ಆಡಳಿತದ ಕೈತಪ್ಪದಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್‌ನ ಕೆ.ಆರ್‌.ಪುರ ಕ್ಷೇತ್ರದ ಬೈರತಿ ಬಸವರಾಜು, ಯಶವಂತಪುರ ಕ್ಷೇತ್ರದ ಎಸ್‌.ಟಿ.ಸೋಮಶೇಖರ್‌, ರಾಜರಾಜೇಶ್ವರಿ ನಗರ ಕ್ಷೇತ್ರದ ಮುನಿರತ್ನ ಮತ್ತು ಜೆಡಿಎಸ್‌ ಶಾಸಕರಾಗಿದ್ದ ಮಹಾಲಕ್ಷ್ಮೇ ಲೇಔಟ್‌ ಕ್ಷೇತ್ರದ ಕೆ.ಗೋಪಾಲಯ್ಯ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ತನ್ಮೂಲಕ ಅವರೆಲ್ಲರೂ ಸೆಪ್ಟೆಂಬರ್‌ನಲ್ಲಿ ನಡೆಯುವ ಬಿಬಿಎಂಪಿಯ ನೂತನ ಮೇಯರ್‌ ಚುನಾವಣೆಯಲ್ಲಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಇದರಿಂದ ಬಿಬಿಎಂಪಿಯಲ್ಲಿ ಮೈತ್ರಿ ಆಡಳಿತದ ಸಂಖ್ಯಾಬಲ ಕುಸಿತಗೊಂಡಿದೆ. ಇದರಿಂದ ಬಿಜೆಪಿಗೆ ಅಧಿಕಾರ ಹಿಡಿಯಲು ದಾರಿ ಸಲೀಸಾದಂತಾಗಿದೆ.

ಹಾಲಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರ ಅಧಿಕಾರಾವಧಿ ಸೆಪ್ಟಂಬರ್‌ 28ಕ್ಕೆ ಮುಗಿಯಲಿದೆ. ಹಾಗಾಗಿ ಹೊಸ ಮೇಯರ್‌ ಆಯ್ಕೆಗೆ ಸಿದ್ಧತೆ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು ಮತದಾರ ಪಟ್ಟಿಯನ್ನೂ ಸಿದ್ಧಪಡಿಸಿದ್ದಾರೆ. ಆ ಪ್ರಕಾರ, ಈ ಬಾರಿಯ ಚುನಾವಣೆಗೆ ಒಟ್ಟು 257 ಮತದಾರರಿದ್ದು, ಯಾವುದೇ ಪಕ್ಷ ಗೆಲ್ಲಲು 129 ಮತಗಳ ಮ್ಯಾಜಿಕ್‌ ನಂಬರ್‌ ಬೇಕಾಗಿದೆ. ಮತದಾರರ ಪಟ್ಟಿಯ ಅಂಕಿ ಅಂಶಗಳ ಪ್ರಕಾರ, ಮೈತ್ರಿ ಪಕ್ಷಗಳು ಮತ್ತು ಬಿಜೆಪಿ ಸಂಖ್ಯಾಬಲ ಸಮವಾಗಿದೆ. ಅಂದರೆ ತಲಾ 125 ಸಂಖ್ಯಾಬಲ ಹೊಂದಿವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಇತರೆ ಏಳು ಜನ ಪಕ್ಷೇತರ ಸದಸ್ಯರ ಪೈಕಿ ಕನಿಷ್ಠ ನಾಲ್ವರು ಸದಸ್ಯರ ಬೆಂಬಲ ಅತ್ಯಗತ್ಯ. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಕಳೆದ ಚುನಾವಣೆ ವೇಳೆಯಲ್ಲೇ ಬಂಡಾಯ ಸಾರಿ ಬಿಜೆಪಿ ಬೆಂಬಲಿಸಿದ್ದ ಓರ್ವ ಸದಸ್ಯೆ ಹಾಗೂ ಮತ್ತೋರ್ವ ಪಕ್ಷೇತರ ಸದಸ್ಯರ ಜತೆಗೆ ಇತರೆ ಪಕ್ಷೇತರರು ಕೂಡ ಬಿಜೆಪಿ ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಪಾಲಿಕೆಯಲ್ಲೂ ಅತಿ ಹೆಚ್ಚು ಸಂಖ್ಯಾಬಲ ಹೊಂದಿದ್ದರೂ ಕಳೆದ ನಾಲ್ಕು ವರ್ಷದಿಂದ ಅಧಿಕಾರ ವಂಚಿತವಾಗಿದ್ದ ಬಿಜೆಪಿ ಈ ಬಾರಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎನ್ನುತ್ತವೆ ಬಿಬಿಎಂಪಿ ಮೂಲಗಳು.

ಮೈತ್ರಿ ಆಡಳಿತ ಉಳಿಸುವವರಿಲ್ಲ:  ಸಂಖ್ಯಾಬಲಕ್ಕಿಂತ ಮಿಗಿಲಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಈ ಬಾರಿ ಬಿಬಿಎಂಪಿಯಲ್ಲಿ ಮೈತ್ರಿ ಆಡಳಿತ ಉಳಿಸಿಕೊಳ್ಳುವ ಪ್ರಯತ್ನ ನಡೆಸುವವರೇ ಇಲ್ಲವಾಗಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ಕಾಂಗ್ರೆಸ್‌ನ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮುನಿರತ್ನ, ಬೈರತಿ ಬಸವರಾಜು, ಎಸ್‌.ಟಿ.ಸೋಮಶೇಖರ್‌, ಎಂ.ಟಿ.ಬಿ.ನಾಗರಾಜು ಮತ್ತು ಜೆಡಿಎಸ್‌ನ ಕೆ.ಗೋಪಾಲಯ್ಯ ಅವರ ಪ್ರಯತ್ನದಿಂದ ಪಾಲಿಕೆಯಲ್ಲಿ ಮೈತ್ರಿ ಆಡಳಿತ ನಡೆದಿತ್ತು.

ಆದರೆ, ಈಗ ರಾಮಲಿಂಗಾರೆಡ್ಡಿ ಅವರನ್ನು ಹೊರತುಪಡಿಸಿ ಉಳಿದ ಐವರು ಅನರ್ಹ ಶಾಸಕರು ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಅಧಿಕಾರಕ್ಕೆ ತರಲು ಕಾರಣಕರ್ತರಾಗಿದ್ದಾರೆ. ಅವರು ಬಿಬಿಎಂಪಿಯಲ್ಲೂ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುವುದರಲ್ಲಿ ಸಂಶಯವೇ ಇಲ್ಲ. ಇನ್ನು ಕಾಂಗ್ರೆಸ್‌ನಲ್ಲಿ ತಮ್ಮನ್ನು ಕಡೆಗಣಿಸಿದ್ದಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ನಾಯಕರ ಮನವೊಲಿಕೆಯಿಂದ ವಾಪಸ್‌ ಪಡೆದ ರಾಮಲಿಂಗಾರೆಡ್ಡಿ ಅವರು ಏಕಾಂಗಿ ಹೋರಾಟ ನಡೆಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಪಕ್ಷೇತರರು ಕೂಡ ಬಿಜೆಪಿ ಬೆಂಬಲಕ್ಕೆ ಮಾನಸಿಕವಾಗಿ ಈಗಾಗಲೇ ಸಿದ್ಧರಾಗಿದ್ದಾರೆ. ಹಾಗಾಗಿ ಪಕ್ಷೇತರರ ಬೆಂಬಲದೊಂದಿಗೆ ಈ ಬಾರಿ ಬಿಜೆಪಿ ಬಿಬಿಎಂಪಿ ಅಧಿಕಾರ ಹಿಡಿಯುವುದು ಖಚಿತ ಎನ್ನಲಾಗಿದೆ.

ಒಟ್ಟು ಮತದಾರರು ಮತ್ತು ಪಕ್ಷಗಳ ಬಲಾಬಲ

ಮತದಾರರು    ಒಟ್ಟು ಸಂಖ್ಯೆ    ಕಾಂಗ್ರೆಸ್‌    ಜೆಡಿಎಸ್‌    ಬಿಜೆಪಿ    ಪಕ್ಷೇತರರು

ಪಾಲಿಕೆ ಸದಸ್ಯರು    198    76    14    101    07

ಸಂಸದರು    5    1    0    0    4    0

ರಾಜ್ಯಸಭಾ ಸದಸ್ಯರು    9    6    1    2    0

ಶಾಸಕರು    23    11    1    11    0

ವಿಧಾನ ಪರಿಷತ್‌ ಸದಸ್ಯರು    22    10    5    7    0

ಒಟ್ಟು    257    104    21    125    7

129: ಮ್ಯಾಜಿಕ್‌ ನಂಬರ್‌

125: ಬಿಜೆಪಿ ಸಂಖ್ಯಾಬಲ

125: ಮೈತ್ರಿ ಸಂಖ್ಯಾಬಲ

7: ಪಕ್ಷೇತರರು 

click me!