ಉಡುಪಿ ಕಾರ್ಕಳ ಉತ್ಸವ : ಲಕ್ಷಾಂತರ ಜನರಿಂದ ಮೆರವಣಿಗೆ ವೀಕ್ಷಣೆ

By Suvarna News  |  First Published Mar 20, 2022, 4:02 PM IST

ಉಡುಪಿಯಲ್ಲಿ ಕಾರ್ಕಳ ಉತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದೆ. ಕನ್ನಡ ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ಕನ್ನಡದ ನೆಲದ ಸರ್ವ ಸಂಸ್ಕೃತಿಗಳ ವಿರಾಟ್ ಪ್ರದರ್ಶನ ನಡೆಯಿತು. 


ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ (ಮಾ.20): ಉಡುಪಿಯಲ್ಲಿ (Udupi) ಕಾರ್ಕಳ ಉತ್ಸವ (Karkala Utsava) ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದೆ. ಕನ್ನಡ ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ (Sunil Kumar) ನೇತೃತ್ವದಲ್ಲಿ ಕನ್ನಡದ ನೆಲದ ಸರ್ವ ಸಂಸ್ಕೃತಿಗಳ ವಿರಾಟ್ ಪ್ರದರ್ಶನ ನಡೆಯಿತು. ಏಕಕಾಲದಲ್ಲಿ 10000 ಕಲಾವಿದರು ಅದ್ದೂರಿ ಮೆರವಣಿಗೆ ನಡೆಸುವ ಮೂಲಕ ಕೋವಿಡ್ (Covid19) ಸಂಕಟಕ್ಕೆ ಮಂಗಳ ಹಾಡಿದರು. ಕೋವಿಡ್ ಮಹಾಮಾರಿ ಕಲಾವಿದರ ಬದುಕುವ ಹಕ್ಕನ್ನೇ ಕಸಿದುಕೊಂಡಿತ್ತು. ಲೋಕಕ್ಕೆಲ್ಲಾ ಸಂತೋಷ ನೀಡುವ ಕಲಾವಿದರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿತ್ತು. 

Latest Videos

ಕಲಾವಿದರಿಗೆ ಹೊಸಚೇತನ ನೀಡುವ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ಸುನಿಲ್ ಕುಮಾರ್ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತನ್ನ ಸ್ವಕ್ಷೇತ್ರ ಕಾರ್ಕಳದಲ್ಲಿ ಹತ್ತುದಿನಗಳ ಕಾರ್ಕಳ ಉತ್ಸವ ಹಮ್ಮಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಈ ಜನೋತ್ಸವಕ್ಕೆ ಇದೀಗ ಹೊಸ ಮೆರಗು ಬಂದಿದೆ. ಶುಕ್ರವಾರ ನಡೆದ ಕಾರ್ಕಳ ಉತ್ಸವ ಮೆರವಣಿಗೆಯಲ್ಲಿ ಏಕಕಾಲದಲ್ಲಿ 10000 ಕಲಾವಿದರು ಭಾಗವಹಿಸಿದ್ದಾರೆ. 



ಕಾರ್ಕಳದ ರಾಜಮಾರ್ಗದಲ್ಲಿ ಎಲ್ಲಾ ಕಲಾವಿದರು ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದರೆ, ಕ್ಷೇತ್ರದ ಲಕ್ಷಾಂತರ ಜನರು ಈ ಅದ್ದೂರಿ ಮೆರವಣಿಗೆಯನ್ನು ವೀಕ್ಷಿಸಿದ್ದಾರೆ. ಕರ್ನಾಟಕದ ಪ್ರತಿಯೊಂದು ಜಿಲ್ಲೆಯಿಂದಲೂ ಜನಪದ ಕಲಾವಿದರು ಸಾಗರೋಪಾದಿಯಲ್ಲಿ ಬಂದು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ಮೆರವಣಿಗೆ ಕಾರ್ಕಳದ ರಾಜ್ಯ ಮಾರ್ಗಗಳಲ್ಲಿ ಸಾಗಿಬಂದಿತು.



ಕರ್ನಾಟಕ ರಾಜ್ಯದ ಯಾವೊಂದು ತಂಡವನ್ನು ಬಿಡದೆ, ಈ ಮೆರವಣಿಗೆಗೆ ಆಹ್ವಾನಿಸಲಾಗಿತ್ತು. ವೀರಗಾಸೆ, ಬೇಟೆಗಾರರು , ತಮಟೆ, ಡೊಳ್ಳು ಕುಣಿತ, ಕೊಡವರ ಕುಣಿತ, ಲಂಬಾಣಿ, ಕರಗ, ಯಕ್ಷಗಾನ , ಕೀಲುಕುದುರೆ, ಕೇರಳ ಚಂಡೆ,  ಸೇರಿದಂತೆ ನೂರಕ್ಕೂ ಅಧಿಕ ತಂಡಗಳು ಮೆರವಣಿಗೆಗೆ ಮೆರುಗು ಹೆಚ್ಚಿಸಿದವು. ಕಾರ್ಕಳ ಕ್ಷೇತ್ರದ ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ನಾಗರಿಕರು ಇತಿಹಾಸ ಪುರುಷರು ವೇಷತೊಟ್ಟು ಮೆರವಣಿಗೆಯಲ್ಲಿ ಸಾಗಿಬಂದರು. 



ಬಣ್ಣ ಬಣ್ಣದ ವೇಷಗಳ ಈ ಪಥ ಸಂಚಲನ ಕಾಣಲು ಕಾರ್ಕಳ ಕ್ಷೇತ್ರದ ಜನತೆ ರಸ್ತೆಯ ಇಕ್ಕೆಲಗಳಲ್ಲಿ ಬಂದು ಸೇರಿದ್ದರು. ಹೋಳಿ ಹಬ್ಬದಲ್ಲಿ ಬಣ್ಣ ಚೆಲ್ಲಿದಂತೆ ಕಾರ್ಕಳದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ಸಾಗಿ ಬಂತು. ಕೋವಿಡ್  ಸಂಕಟದ ಸಮಯದಲ್ಲಿ ಮನೆಯಲ್ಲೇ ಕುಳಿತು ಆತ್ಮಸ್ಥೈರ್ಯ ಕಳೆದುಕೊಂಡಿದ್ದ ಜನರಲ್ಲಿ ಹೊಸ ಉಲ್ಲಾಸವ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಗ್ರಾಮೀಣ ಪ್ರದೇಶವಾದ ಕಾರ್ಕಳದಲ್ಲಿ ಆರ್ಥಿಕ ಚಟುವಟಿಕೆ ಮತ್ತೆ ಚಿಗುರುವಂತೆ ಮಾಡಿದೆ.

click me!