ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು ಪಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ| ಕೊರೋನಾ ವೈರಸ್ ಒಂದು ಭಯಂಕರ ಮಾರಿಯಾಗಿರುವುದರಿಂದ ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಎಷ್ಟು ಸರಿ?|
ಗಂಗಾವತಿ(ಮೇ.28): ಕೊರೋನಾ ಹಾವಳಿಯಿಂದ ದೇಶ ತತ್ತರಿಸುತ್ತಿದ್ದು, ಈ ಕಾರಣಕ್ಕಾಗಿ ಸರ್ಕಾರ ಘೋಷಿಸಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದುಪಡಿಸಬೇಕೆಂದು ಕರವೇ ಜಿಲ್ಲಾ ಘಟಕ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಕುರಿತು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ಘಟಕದ ಅಧ್ಯಕ್ಷ ಪಂಪಣ್ಣ ನಾಯಕ ಅವರು ದಿನೇ ದಿನೆ ಕೊರೋನಾ ಕೇಸ್‌ಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮುಂದಿನ ಜೂನ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಿ, ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡುವ ಮೂಲಕ ಪರೀಕ್ಷಾ ಸಿದ್ಧತೆ ನಡೆಸಿದೆ. ಆದರೆ, ಕೊರೋನಾ ವೈರಸ್ ಒಂದು ಭಯಂಕರ ಮಾರಿಯಾಗಿರುವುದರಿಂದ ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಎಷ್ಟು ಸರಿ? ಕೊರೋನಾ ವೈರಸ್ ಹೆಚ್ಚಾಗಿ ಮಕ್ಕಳ ಮೇಲೆ ಅತಿ ವೇಗವಾಗಿ ಪರಿಣಾಮ ಬೀರುತ್ತದೆ. ಮಕ್ಕಳ ಜೀವಕ್ಕಿಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೇ ಪ್ರಾಮುಖ್ಯವಾಗಿದೆಯೇ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿ: 15 ಸಂಘಟನೆಗಳಿಂದ ಒತ್ತಡ!
ರಾಜ್ಯದಲ್ಲಿ ಈ ಬಾರಿ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ. ಇದಕ್ಕಾಗಿ 2 ಲಕ್ಷ ಸಿಬ್ಬಂದಿ ನಿಯೋಜಿಸಲಾಗಿದೆ. ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಕೊರೋನಾ ಸೋಂಕು ಇದ್ದರೆ, ಎಷ್ಟು ವೇಗವಾಗಿ ಕೊರೋನಾ ಆಕ್ರಮಿಸುವುದು ಎಂದು ಊಹಿಸುವುದೂ ಅಸಾಧ್ಯವಾಗಿದೆ. ಮುಂಜಾಗ್ರತೆಗಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ಥರ್ಮಲ್ ಸ್ಕ್ಯಾನಿಂಗ್ ಎಷ್ಟು ಪರಿಣಾಮಕಾರಿಯಾಗಿ ಕೊರೋನಾ ವೈರಸ್ ಗುರುತಿಸಬಲ್ಲದು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಎಸ್‌ಎಸ್‌ಎಲ್‌ಸಿ ಕಾಯ್ದುಕೊಂಡು ಪರೀಕ್ಷೆ ನಡೆಸಬೇಕಾದರೆ ಪರೀಕ್ಷೆಗೆ ಬೇಕಾಗುವ ಕೊಠಡಿಗಳ ಸಂಖ್ಯೆ, ಎಲ್ಲ ವಿದ್ಯಾರ್ಥಿಗಳಿಗೂ ಮಾಸ್ಕ್ ವಿತರಣೆ, ಸ್ಯಾನಿಟೈಸರ್ ಬಳಕೆ ಇವೆಲ್ಲವುಗಳಿಗಾಗಿ ಸರ್ಕಾರ ಭರಿಸಬೇಕಾದ ವೆಚ್ಚ ದುಬಾರಿಯಾಗಿರುತ್ತದೆ. ಕಾರಣ ಸರ್ಕಾರ ಮುಂಜಾಗ್ರತವಾಗಿ ಪರೀಕ್ಷೆ ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಖಾಜಾವಲಿ, ಶಂಕರ ಪೂಜಾರಿ, ಹುಸೇನ್ ಸಾಬ್, ಉಮೇಶ, ಅಮ್ಜಾದ್, ಸಿದ್ದು ನಾಯಕ, ಜಿಲಾನಾಸಾಬ್, ಹುಸೇಸಾಬ್ ಮುದಗಲ್ ಇತರರು ಇದ್ದರು.