ದಾಖಲೆಗಳ ಮೇಲೆ ದಾಖಲೆ ಬರೆದ ಕಂಬಳದ ಉಸೇನ್‌ ಬೋಲ್ಟ್‌ ಶ್ರೀನಿ

By Kannadaprabha News  |  First Published Mar 9, 2020, 7:47 AM IST

ಕಂಬಳ ಕ್ರೀಡೆಯ ಉಸೇನ್‌ ಬೋಲ್ಟ್‌ ಎಂದೇ ಖ್ಯಾತರಾದ ದಕ್ಷಿಣ ಕನ್ನಡ ಜಿಲ್ಲೆಯ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡರು ಈ ಒಂದೇ ಕಂಬಳ ಋುತು (ಸೀ​ಸ​ನ್‌) ವಿನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.


ಉಡುಪಿ(ಮಾ.9): ಕಂಬಳ ಕ್ರೀಡೆಯ ಉಸೇನ್‌ ಬೋಲ್ಟ್‌ ಎಂದೇ ಖ್ಯಾತರಾದ ದಕ್ಷಿಣ ಕನ್ನಡ ಜಿಲ್ಲೆಯ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡರು ಈ ಒಂದೇ ಕಂಬಳ ಋುತು (ಸೀ​ಸ​ನ್‌) ವಿನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇಡೀ ವಿಶ್ವದಾದ್ಯಂತ ಗಮನ ಸೆಳೆದ ಕರಾವಳಿಯ ಜನಪದ ವೀರಕ್ರೀಡೆ ಕಂಬುಲ (ಕಂಬಳ)ದ ಈ ಬಾರಿಯ ಸೀಸನ್‌ ಭಾನು​ವಾರ ಕೊನೆಗೊಂಡಿದೆ. ದ.ಕ.​ಜಿ​ಲ್ಲೆಯ ಉಜಿರೆ ಸಮೀಪದ ಬಂಗಾಡಿಕೊಲ್ಲಿ ಎಂಬಲ್ಲಿ ಮಾ.8ರಂದು ಈ ಸೀಸನ್‌ನ ಕೊನೆಯ ಕಂಬಳ ನಡೆಯಿತು.

Latest Videos

undefined

ಮೈನ್‌ ಶಾಲೆಗೆ ಕಂಬಳ ವೀರನಿಂದ ಕ್ರೀಡಾ ಸಾಮಗ್ರಿಗಳ ಕೊಡುಗೆ

ಈ 3 ತಿಂಗಳ ಕಂಬಳ ಸೀಸನ್‌ನಲ್ಲಿ ಶ್ರೀನಿವಾಸ ಗೌಡರು ಒಟ್ಟು 46 ಬಹುಮಾನಗಳನ್ನು ಗೆದ್ದುಕೊಂಡು ಚಾಂಪಿಯನ್‌ ಓಟಗಾರನಾಗಿ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಇದುವರೆಗೆ ಈ ದಾಖಲೆ 35 ಬಹುಮಾನಗಳನ್ನು ಗೆದ್ದ ಇನ್ನೊಬ್ಬ ಚಾಂಪಿಯನ್‌ ಓಟಗಾರ ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್‌ ಎಂ. ಶೆಟ್ಟಿಅವರ ಹೆಸರಿನಲ್ಲಿತ್ತು.

3 ಕಂಬಳ, ತಲಾ ನಾಲ್ಕು ಪದಕ:

ಈ ಹಿಂದೆ ಒಂದೇ ಕಂಬಳದಲ್ಲಿ ನಾಲ್ಕು ಬಹುಮಾನಗಳನ್ನು ಗೆದ್ದ ದಾಖಲೆ ಅಳದಂಗಡಿ ರವಿಕುಮಾರ್‌ ಅವರ ಹೆಸರಲ್ಲಿತ್ತು. ಅದನ್ನು ಮುರಿದ ಶ್ರೀನಿವಾಸ ಗೌಡರು, ಒಂದೇ ಸೀಸನ್‌ನಲ್ಲಿ, 3 ಕಂಬಳಗಳಲ್ಲಿ, ತಲಾ 4 ಬಹುಮಾನಗಳನ್ನು ಗೆದ್ದು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಒಂದು ಕಂಬಳದ ನಾಲ್ಕೂ ವಿಭಾಗಗಳಲ್ಲಿ ಓಡುವುದು ಬಹಳ ಕಷ್ಟ. ಆದ್ದರಿಂದ ಬೇರೆಯವರು ಈ ದಾಖಲೆಯನ್ನು ಸದ್ಯಕ್ಕಂತೂ ಮುರಿಯುವುದು ಸಾಧ್ಯವಿಲ್ಲ ಎನ್ನುತ್ತಾರೆ ಕಂಬಳ ತಜ್ಞರು.

ಹಗ್ಗ ಕಿರಿಯದಲ್ಲೂ ದಾಖಲೆ:

ಶ್ರೀನಿವಾಸ ಗೌಡರು ಹಗ್ಗ ಕಿರಿಯ ವಿಭಾಗದಲ್ಲಿಯೂ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಭಾಗವಹಿಸಿದ್ದ 15 ಕಂಬಳಗಳಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ 14 ಪ್ರಥಮ, 1 ದ್ವಿತೀಯ ಸಹಿತ 14 ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ. ಈ ಹಿಂದೆ ಜಯಕರ ಮಡಿವಾಳ ಅವರು 13 ಕಂಬಳಗಳಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ 13 ಪ್ರಥಮ ಬಹುಮಾನಗಳನ್ನು ಗೆದ್ದ ದಾಖಲೆಯನ್ನು ಶ್ರೀನಿವಾಸ ಗೌಡ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.

ಧೋನಿ-ಕಾಳ ಚಾಂಪಿಯಸ್ಸ್‌:

ಕೋಣಗಳ ಯಜಮಾನ ಬೋಳದ ಗುತ್ತು ಸತೀಶ್‌ ಶೆಟ್ಟಿಅವರ ಧೋನಿ-ಕಾಳ ಎಂಬ ಹೆಸರಿನ ಜೋಡಿ ಕೋಣಗಳು ಈ ಸೀಸನ್‌ನಲ್ಲಿ ಅತೀ ಹೆಚ್ಚು 6 ಪ್ರಥಮ ಮತ್ತು 2 ದ್ವಿತೀಯ ಬಹುಮಾನಗಳನ್ನು ಗೆದ್ದು ಚಾಂಪಿಯನ್‌ ಪ್ರಶಸ್ತಿಯನ್ನು ಪಡೆದಿವೆ. ಈ ಕೋಣಗಳನ್ನು ಕಳೆದ 6 ವರ್ಷಗಳಿಂದ ಓಡಿಸುತ್ತಿರುವವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್‌ ಶೆಟ್ಟಿಅವರು.

‘ಉಸೇನ್‌ ಬೋಲ್ಟಿಗೇ’ ಸಡ್ಡು ಹೊಡೆದವರಿವರು!

ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್‌ ಶೆಟ್ಟಿಅವರು ಅವರು ಶನಿವಾರ ಬಂಗಾಡಿಕೊಲ್ಲಿಯಲ್ಲಿ ನೇಗಿಲು ಹಿರಿಯ ವಿಭಾಗದ ಹೀಟ್ಸ್‌ನಲ್ಲಿ 124 ಮೀಟರ್‌ ದೂರವನ್ನು ಕೇವಲ 11.64 ಸೆಕುಂಡುಗಳಲ್ಲಿ ಓಡಿದರು. ಇದನ್ನು 100 ಮೀಟರಿಗೆ ಹೊಂದಿಸಿದರೆ 9.38 ಸೆಕುಂಡುಗಳ ದಾಖಲೆಯಾಗುತ್ತದೆ.

ದುಬೈನಿಂದ ಆಗಮಿಸಿದ ಪ್ರಯಾಣಿಕನಲ್ಲಿ ಕೊರೋನ ಲಕ್ಷಣ

ಶ್ರೀನಿವಾಸ ಗೌಡರು ಇದೇ ಕಂಬಳದ ಸೀಸನ್‌ನ ಫೆ.1ರಂದು ಐಕಳದಲ್ಲಿ ನಡೆದ ಕಂಬಳದಲ್ಲಿ 142.50 ಮೀ. ದೂರವನ್ನು 13.44 ಸೆಕುಂಡು (100 ಮೀ.ಗೆ 9.23 ಸೆ.) ಮತ್ತು ಫೆ.16ರಂದು ವೇಣೂರಿನಲ್ಲಿ ನಡೆದ ಕಂಬಳದಲ್ಲಿ 143 ಮೀಟರ್‌ ದೂರವನ್ನು 13.68 ಸೆಕುಂಡು (100 ಮೀ.ಗೆ 9.56 ಸೆ.)ಗಳಲ್ಲಿ ಕ್ರಮಿಸಿದ್ದರು. ಇದೇ ವೇಣೂರು ಕಂಬಳದಲ್ಲಿ ಬಜಗೋಳಿ ನಿಶಾಂತ್‌ ಶೆಟ್ಟಿಅವರು 143 ಮೀಟರ್‌ ದೂರವನ್ನು 13.61 ಸೆಕುಂಡು (100 ಮೀ.ಗೆ 9.51 ಸೆ.)ಗಳಲ್ಲಿ ಓಡಿದ್ದರು.

ಈ ಮೂರೂ ಮಂದಿ ಕಂಬಳ ಓಟಗಾರರು ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ (100 ಮೀ. ದೂರವನ್ನು 9.58 ಸೆ.) ಓಡಿ ವಿಶ್ವದಾಖಲೆ ಬರೆದಿರುವ ಉಸೇನ್‌ ಬೋಲ್ಟ್‌ ಅವರ ವೇಗವನ್ನೂ ಮೀರಿಸಿದ್ದಾರೆ. ಇಂತಹ ಇನ್ನಷ್ಟುಓಟಗಾರರು ಕಂಬಳದ ಕಣದಲ್ಲಿದ್ದಾರೆ ಎನ್ನುತ್ತಾರೆ ಕಂಬಳ ತಜ್ಞ ಪ್ರೊ. ಗುಣಪಾಲ ಕಡಂಬ.

-ಸುಭಾಶ್ಚಂದ್ರ ಎಸ್‌. ವಾಗ್ಳೆ

click me!