ಹೊರ ಜಗತ್ತಿಗೆ ಕೊಡಗು ಎಂದರೆ ಸುಂದರ ಮತ್ತು ಸಮೃದ್ಧ ಜಿಲ್ಲೆ. ದಕ್ಷಿಣ ಭಾರತದ ಸ್ಕಾಟ್ ಲ್ಯಾಂಡ್, ಕರ್ನಾಟಕದ ಕಾಶ್ಮೀರ ಎಂದೆಲ್ಲಾ ಕರೆಸಿಕೊಂಡಿದೆ. ಆದರೆ ಒಳಹೊಕ್ಕು ಗ್ರಾಮೀಣ ಪ್ರದೇಶಗಳ ಪರಿಸ್ಥಿತಿಯನ್ನು ನೋಡಿದರೆ ಅಲ್ಲಿನ ದುಃಸ್ಥಿತಿ ಹೇಗಿದೆ ಎನ್ನುವುದು ಅನಾವರಣಗೊಳ್ಳುತ್ತದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮೇ.29): ಹೊರ ಜಗತ್ತಿಗೆ ಕೊಡಗು ಎಂದರೆ ಸುಂದರ ಮತ್ತು ಸಮೃದ್ಧ ಜಿಲ್ಲೆ. ದಕ್ಷಿಣ ಭಾರತದ ಸ್ಕಾಟ್ ಲ್ಯಾಂಡ್, ಕರ್ನಾಟಕದ ಕಾಶ್ಮೀರ ಎಂದೆಲ್ಲಾ ಕರೆಸಿಕೊಂಡಿದೆ. ಆದರೆ ಒಳಹೊಕ್ಕು ಗ್ರಾಮೀಣ ಪ್ರದೇಶಗಳ ಪರಿಸ್ಥಿತಿಯನ್ನು ನೋಡಿದರೆ ಅಲ್ಲಿನ ದುಃಸ್ಥಿತಿ ಹೇಗಿದೆ ಎನ್ನುವುದು ಅನಾವರಣಗೊಳ್ಳುತ್ತದೆ. ಆ ದುಃಸ್ಥಿತಿಯನ್ನು ಮಡಿಕೇರಿ ತಾಲ್ಲೂಕಿನ ಸಂಪಾಜೆ ಹೋಬಳಿಯ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿ ಎನ್ನುವ ಗ್ರಾಮದ ಪರಿಸ್ಥಿತಿ ಎಲ್ಲವನ್ನು ಸಾರಿ ಹೇಳುತ್ತಿದೆ. ಹೌದು ಈ ಗ್ರಾಮದ ಹೆಬ್ಬಾಗಿನಲ್ಲಿ ಹರಿಯುವ ಹೊಳೆಯೊಂದು ಗ್ರಾಮವನ್ನು ಬರೋಬ್ಬರಿ ಆರು ತಿಂಗಳ ಕಾಲ ಹೊರಜಗತ್ತಿನೊಂದಿಗೆ ಸಂಪರ್ಕವನ್ನೇ ಕಡಿದು ದೂರ ಇರಿಸುತ್ತದೆ.
ಆ ಆರು ತಿಂಗಳ ಕಾಲದ ಈ ಗ್ರಾಮದ ಜನರ ಬದುಕಿನ ನರಕ ಯಾತನೆಯನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಜೂನ್ ತಿಂಗಳಲ್ಲಿ ಮುಂಗಾರು ಶುರುವಾಯಿತ್ತೆಂದರೆ ನವೆಂಬರ್ ತಿಂಗಳ ಕೊನೆಯವರೆಗೂ ಇಲ್ಲಿ ಮಳೆ ಸುರಿಯುವುದರಿಂದ ಡಿಸೆಂಬರ್ ಅಂತ್ಯದವರೆಗೂ ಈ ಹೊಳೆ ಮೈದುಂಬಿ 10 ರಿಂದ 12 ಅಡಿ ಎತ್ತರ ಹರಿಯುತ್ತದೆ. ಇದನ್ನು ದಾಟಿ ಯಾರೂ ಗ್ರಾಮದಿಂದ ಹೊರಕ್ಕೆ ಬರುವ ದುಸ್ಸಾಹಸ ಮಾಡುವಂತಿಲ್ಲ. ಅತ್ಯಂತ ಕಿರಿದಾದ ಕಾಲು ಸಂಕವೊಂದು ಇದ್ದು ಅದು ಯಾವ ಸಂದರ್ಭದಲ್ಲಿ ಮುರಿದು ಬೀಳುವುದೋ ಗೊತ್ತಿಲ್ಲ. ಆದರೆ ಅನಿವಾರ್ಯದ ಸಂದರ್ಭಗಳಲ್ಲಿ ವೃದ್ಧರು, ವಿಕಲಾಂಗರು ಮತ್ತು ಚಿಕ್ಕಪುಟ್ಟ ಮಕ್ಕಳು ಇದೇ ಸಂಕದ ಮೇಲೆ ಜೀವಕೈಯಲ್ಲಿ ಹಿಡಿದು ದಾಟಿ ಹೊರಗೆ ಬರಬೇಕು.
ರಾಮಮಂದಿರ ನಿರ್ಮಾಣ ಮಾಡಿದ್ರೆ ಜವಾಬ್ದಾರಿ ಮುಗಿಯಲ್ಲ: ಪೇಜಾವರ ಶ್ರೀ
ಗ್ರಾಮದಲ್ಲಿ ಹುಟ್ಟಿನಿಂದಲೇ ವಿಕಲಾಂಗರಾಗಿರುವ ನಿತ್ಯಾನಂದ ಅವರು ಕಾಲು ಸಂಕವನ್ನು ದಾಟಬೇಕೆಂದರೆ ಅದರ ಮೇಲೆ ಕುಳಿತು ತೆವಳುತ್ತಾ ಸಾಗಬೇಕು. ಮಳೆ ತೀವ್ರಗೊಂಡು ಹೊಳೆ ಬೋರ್ಗರೆದು ಹರಿಯಲು ಆರಂಭಿಸಿತ್ತೆಂದರೆ ಕಾಲು ಸಂಕವನ್ನೂ ಬಳಸದಷ್ಟು ಹೊಳೆ ತುಂಬಿ ಹರಿಯುತ್ತದೆ. ಇಂತಹ ಸಂದರ್ಭಗಳಲ್ಲಿ ಗ್ರಾಮ ಸಂಪೂರ್ಣ ಸಂಪರ್ಕ ಕಡಿತಗೊಳ್ಳುತ್ತದೆ. ಎಷ್ಟೋ ಬಾರಿ ಗ್ರಾಮದಲ್ಲಿ ಕೆಲವರಿಗೆ ತೀವ್ರ ಅನಾರೋಗ್ಯ ಕಾಡಿದ್ದರಿಂದ ಚೇರ್ ಮೇಲೆ ಕೂರಿಸಿಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಳೆದ ವರ್ಷ ಗ್ರಾಮದ ನಿತ್ಯಾನಂದ ಅವರ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದಾಗ ಗ್ರಾಮದವರನ್ನು ಬಿಟ್ಟು ಹೊಗಿನವರು ಯಾರೂ ಶವ ಸಂಸ್ಕಾರದಲ್ಲೂ ಭಾಗವಹಿಸದಂತೆ ಆಗಿತ್ತು. ಅಷ್ಟರ ಮಟ್ಟಿಗೆ ಹೊಳೆ ತುಂಬಿ ಹರಿದಿತ್ತು ಎಂದು ಗ್ರಾಮದ ರಾಮಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕೈದು ತಲೆಮಾರುಗಳಿಂದ ಇದೇ ಸಂಕಷ್ಟದಲ್ಲಿ ಬದುಕು ದೂಡುತ್ತಿದ್ದೇವೆ. ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಕಳೆದ 25 ವರ್ಷಗಳಿಂದ ಶಾಸಕರಿಗೆ ಸಚಿವರಿಗೆ ಮನವಿ ಮಾಡಿದ್ದೇವೆ. ಆದರೂ ಯಾರೂ ಇದುವರೆಗೆ ನಮ್ಮ ಮನವಿಗೆ ಸ್ಪಂದಿಸಿಲ್ಲ.
ನನ್ನ ದೂಷಿಸುವ ಸಚಿವ ಪ್ರಿಯಾಂಕ್ ತಾವೇ ಮೈಪೂರ್ತಿ ಗ್ರೀಸ್ ಮೆತ್ತಿಕೊಂಡಿದ್ದಾರೆ: ಆಂದೋಲಾ ಶ್ರೀ ಲೇವಡಿ
ಒಂದು ವರ್ಷದ ಹಿಂದೆ 10 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಿಸುವುದಕ್ಕಾಗಿ ಎಲ್ಲಾ ಕಚ್ಚಾವಸ್ತುಗಳನ್ನು ತಂದು ಹಾಕಲಾಗಿತ್ತು. ಆದರೆ ಅಷ್ಟು ಅನುದಾನದಲ್ಲಿ ಇಲ್ಲಿ ಸೇತುವೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಈಗಿನ ಶಾಸಕರು ಕಾಮಗಾರಿಯನ್ನು ಬದಲಾಯಿಸಿದರು. ಇದೀಗ ಮಳೆಗಾಲ ಆರಂಭವಾಗಿದ್ದು ಮತ್ತೆ ನಾವು ಅದೇ ನರಕಯಾತನೆಯ ಬದುಕನ್ನು ಕಳೆಯುವಂತೆ ಆಗಿದೆ ಎಂದು ಗ್ರಾಮದ ವೃದ್ದೆ ಲೀಲಾವತಿ ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಹೊರಜಗತ್ತಿಗೆ ಬಹಳ ಸುಂದರವಾಗಿ ಕಾಣುವ ಕೊಡಗು ಜಿಲ್ಲೆಯ ಈ ಗ್ರಾಮದ ದುಃಸ್ಥಿತಿಗೆ ಇನ್ನಾದರೂ ನಮ್ಮ ಜನ ಪ್ರತಿನಿಧಿಗಳು ಪರಿಹಾರ ಸೂಚಿಸ್ತಾರಾ ಎಂದು ಕಾದು ನೋಡಬೇಕಾಗಿದೆ.