ಬೆಂಗಳೂರು: ಮೆಟ್ರೋಗಾಗಿ ಕಾಳಿ ದೇಗುಲ ತೆರವು!

By Kannadaprabha News  |  First Published Mar 10, 2020, 8:02 AM IST

ಭಕ್ತರು ಎಚ್ಚರಗೊಳ್ಳುವ ಮುಂಚೆಯೇ ಮೆಟ್ರೋಗಾಗಿ ಕಾಳಿ ದೇಗುಲ ತೆರವು| ಮುಂಜಾನೆ 5 ಗಂಟೆಗೆ ಕಾರ್ಯಾಚರಣೆ ಶುರು| ಪೊಲೀಸರ ಭದ್ರತೆ| ಭಕ್ತರ ತೀವ್ರ ವಿರೋಧ|


ಬೆಂಗಳೂರು(ಮಾ.10): ಬೆಂಗಳೂರು-ಮೈಸೂರು ರಸ್ತೆಯಲ್ಲಿ ಮೆಟ್ರೋ ಡಿಪೋ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು ಮುಂಭಾಗದ ಕಾಳಿ ದೇವಸ್ಥಾನವನ್ನು ಪೊಲೀಸರ ಭದ್ರತೆಯಲ್ಲಿ ಸೋಮವಾರ ಮುಂಜಾನೆ ತೆರವುಗೊಳಿಸಲಾಯಿತು.

ದೇವಸ್ಥಾನದ ತೆರವಿಗೆ ಭಕ್ತರು ಅಡ್ಡಿಪಡಿಸಬಹುದು ಎಂಬ ಕಾರಣಕ್ಕೆ ಮುಂಜಾನೆ 5ರ ಸುಮಾರಿಗೆ ಜೆಸಿಬಿಗಳನ್ನು ತಂದು ದೇವಸ್ಥಾನ ಕೆಡವಲಾಯಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆಲ ಭಕ್ತರು ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ತೆರವು ಕಾರ್ಯಾಚರಣೆ ಮುಂದುವರಿಸಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ 20 ವರ್ಷಗಳ ಹಿಂದೆ ಸುಮಾರು 50 ಲಕ್ಷ ವೆಚ್ಚ ಮಾಡಿ ಕಾಳಿ ದೇವಸ್ಥಾನ ನಿರ್ಮಿಸಲಾಗಿತ್ತು. ದೇವಾಲಯದ ಆವರಣದಲ್ಲಿ ಮುನೇಶ್ವರಸ್ವಾಮಿ ಮತ್ತು ಆಂಜನೇಯಸ್ವಾಮಿ ಚಿಕ್ಕ ದೇವಾಲಯಗಳು ಇದ್ದವು. ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿಗೆ ಮೆಟ್ರೋ ವಿಸ್ತರಿಸುವ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದು, ಚಲ್ಲಘಟ್ಟದಲ್ಲಿ ಮೆಟ್ರೋ ಡಿಪೋ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಭೂಸ್ವಾಧೀನ ನಡೆಯುತ್ತಿದೆ.

ಕಾಳಿ ದೇವಸ್ಥಾನವನ್ನು ಮೆಟ್ರೋದವರು ತೆರವು ಮಾಡುವುದರ ಸುಳಿವು ಅರಿತ ಬಾಬ ಸಾಹೇಬರ ಪಾಳ್ಯ ಅಕ್ಕಪಕ್ಕದ ಗ್ರಾಮಸ್ಥರು ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ, ಅದಕ್ಕೂ ಮೊದಲೇ ಅಧಿಕಾರಿಗಳು ಪೊಲೀಸರ ಬಂದೋಬಸ್ತ್‌ನಲ್ಲಿ ಸೋಮವಾರ ಮುಂಜಾನೆಯೇ ದೇವಸ್ಥಾನ ತೆರವುಗೊಳಿಸುವ ಕಾಮಗಾರಿಯನ್ನು ಪೂರ್ಣಗೊಳಿಸಿದರು.

click me!