ಸರ್ಕಾರ ಪತನಗೊಳಿಸಲು ಸಿದ್ಧ: ಕಳಸಾ ಬಂಡೂರಿ ಹೋರಾಟಗಾರರು

By Kannadaprabha NewsFirst Published Jan 23, 2020, 7:36 AM IST
Highlights

ರೈತರ ಸಾಲ ಮನ್ನಾ ಮಾಡದಿದ್ದರೆ ಸರ್ಕಾರ ಪತನ| ಕಳಸಾ ಬಂಡೂರಿ ಕೇಂದ್ರ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಎಚ್ಚರಿಕೆ| ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ಸಾಲದ ನೋಟಿಸ್‌ ನೀಡಿದರೆ ಆ ಬ್ಯಾಂಕ್‌ಗೆ ಬೀಗ ಹಾಕಿ ಉಗ್ರ ಹೋರಾಟ|

ನರಗುಂದ(ಜ.23): ರಾಜ್ಯದಲ್ಲಿ ನಾಲ್ಕೈದು ವರ್ಷದಿಂದ ಸರಿಯಾಗಿ ಬೆಳೆ ಬಂದಿಲ್ಲ. ಹೀಗಾಗಿ ಸರ್ಕಾರ ರೈತರ ಕೃಷಿಗೆ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕಳಸಾ ಬಂಡೂರಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದ್ದಾರೆ.

ಅವರು ಬುಧವಾರ ಪಟ್ಟಣದ ಮಿನಿ ವಿಧಾನಸೌಧಕ್ಕೆ ಕಳಸಾ ಬಂಡೂರಿ ಹೋರಾಟ ಕೇಂದ್ರ ಸಮಿತಿ ಹಾಗೂ ಕನ್ನಡ ರಕ್ಷಣೆ ಸೇನೆ ಸಂಯುಕ್ತ ಆಶ್ರಯದಲ್ಲಿ ನೂರಾರು ರೈತರೊಂದಿಗೆ ತೆರಳಿ, ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

1976ರಲ್ಲೇ ನರಗುಂದ ತಾಲೂಕಿನ ಕಾಲುವೆ ನೀರು ಬಂದಿದೆ. ಜಲಾಶಯ ನಿರ್ಮಿಸಿ 60 ವರ್ಷ ಗತಿಸಿದೆ. ಆದರೆ ಈ ಭಾಗದ ರೈತರಿಗೆ ಎರಡು ಬೆಳೆಗೆ ಬೇಕಾದ ನೀರು ಸಿಗುತ್ತಿಲ್ಲ. ಸಮರ್ಪಕ ಬೆಳೆ ಬೆಳೆಯಲಾಗದ ಕಾರಣ ರೈತರಿಗೆ ಸಾಲ ತುಂಬಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರ ಸಂಘಗಳು ರೈತರ ಆಸ್ತಿ ಜಪ್ತಿಗೆ ಹುನ್ನಾರ ನಡೆಸಿವೆ. ಹೀಗಾಗಿ ಎಲ್ಲ ಬ್ಯಾಂಕ್‌, ಸಹಕಾರ ಸಂಘಗಳಿಗೆ ಸರ್ಕಾರ ನೋಟಿಸ್‌ ಕಳುಹಿಸಿ, ರೈತರ ಸಾಲ ವಸೂಲಿ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಲುವೆಯಲ್ಲಿ ಸಮರ್ಪಕ ನೀರು ಬಾರದೆ ಇರುವುದರಿಂದ 30 ವರ್ಷಗಳಿಂದ ರೈತರಿಗೆ ಹಾನಿಯಾಗುತ್ತಿದೆ. ಸರ್ಕಾರ ಮೊದಲು ಎರಡು ಬೆಳೆಗೆ ಅಗತ್ಯವಿರುವಷ್ಟು ನೀರು ಕೊಡಲಿ. ಬಳಿಕ ಸಾಲ ತುಂಬುವಂತೆ ಹೇಳಲಿ, ನಾವು ಸಾಲ ಕಟ್ಟುತ್ತೇವೆ. ಸರ್ಕಾರ ಸಚಿವ ಸಂಪುಟ ಸಭೆ ಕರೆದು ಕಳೆದ 30 ವರ್ಷಗಳಲ್ಲಿ ರೈತರಿಗೆ ಆದ ಹಾನಿಯ ಲೆಕ್ಕಹಾಕಿ ವಿಶೇಷ ಪರಿಹಾರ ಬಿಡುಗಡೆ ಮಾಡಬೇಕು. ಸರ್ಕಾರ ಶೀಘ್ರದಲ್ಲಿ ರೈತರ ಪರ ನಿರ್ಣಯ ಕೈಗೊಳ್ಳದಿದ್ದರೆ ನರಗುಂದ ರೈತರು ನರಗುಂದ ಬಂಡಾಯ ರೀತಿಯಲ್ಲಿ ಇನ್ನೊಂದು ಹೋರಾಟಕ್ಕೆ ಸಿದ್ಧರಾಗುತ್ತಾರೆ. ಸರ್ಕಾರ ಪತನಗೊಳಿಸಲು ಸಿದ್ಧ ಎಂದು ಹೇಳಿದರು. ಬ್ಯಾಂಕ್‌ ಅಧಿಕಾರಿಗಳು ತಾಲೂಕಿನ ರೈತರಿಗೆ ಮುಂದಿನ ದಿನಗಳಲ್ಲಿ ಸಾಲದ ನೋಟಿಸ್‌ ನೀಡಿದರೆ ಆ ಬ್ಯಾಂಕ್‌ಗೆ ಬೀಗ ಹಾಕಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ತಹಸೀಲ್ದಾರ್‌ ಮಹೇಂದ್ರ ಎ.ಎಚ್‌ ರೈತರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಈ ಕೂಡಲೇ ಮನವಿ ರವಾನೆ ಮಾಡುವುದಾಗಿ ತಿಳಿಸಿದರು. ನಾಗೇಶ ಅಪೋಜಿ, ಸಿದ್ದನಗೌಡ ಮರಿಗೌಡ್ರ, ಕರವೇ ಅಧ್ಯಕ್ಷ ನಬಿಸಾಬ್‌ ಕಿಲ್ಲೇದಾರ, ವಿ.ಬಿ. ಹೂಲಿ, ವೀರೇಶ ನವಲಗುಂದ, ಮುತ್ತಪ್ಪ ತೋರಗಲ್ಲ, ಸಿ.ಜಿ. ಕಾಡದೇವರಮಠ, ಆರ್‌.ಬಿ. ರಾಚನಗೌಡ್ರ, ಡಾ. ಶಿರೂರ, ಶಿವಪ್ಪ ಚುಳಕಿ, ಆರ್‌.ಎಸ್‌. ಸುಂಕದ, ಎಸ್‌.ಕೆ. ಕಳಸಣ್ಣವರ, ದೀಲಪ ಸುಬೇದಾರ, ಬಾಪುಗೌಡ ಹುಲಗೇರಿ, ಬಸವನಗೌಡ ಯಲ್ಲಪ್ಪಗೌಡ್ರ, ಮಲ್ಲಪ್ಪ ಕರಿಯಪ್ಪನವರ, ಲಕ್ಷ್ಮಣ ಬಡಕಪ್ಪನವರ, ಸಂಗಪ್ಪ ಚಿನವಾಲರ, ಕಲ್ಲನಗೌಡ ಬಸವಗೌಡ್ರ, ಮಕ್ತಮಸಾಬ್‌ ನದಾಫ್‌, ನಿಂಗಪ್ಪ ದಿವಟರ ಇದ್ದರು.
 

click me!