ಕಪ್ಪು ಚುಕ್ಕೆಯಾದ್ರಾ ನಾರಾಯಣಗೌಡ : ‘ಸೋಲಿಸಲು ಎದುರಾಳಿಗೆ ಹಣ’

By Kannadaprabha NewsFirst Published Sep 16, 2019, 9:15 AM IST
Highlights

ಮಂಡ್ಯದ ಕೆ.ಆರ್ ಪೇಟೆ ಅನರ್ಹ ಶಾಸಕ ನಾರಾಯಣ ಗೌಡ ರಾಜಕಾರಣಕ್ಕೆ ಕಪ್ಪು ಚುಕ್ಕೆ ಎಂದಿದ್ದು, ಅವರ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಲಾಗಿದೆ. 

ಕೆ.ಆರ್‌ .ಪೇಟೆ [ಸೆ.16] :  ಉಂಡ ಮನೆಗೆ ದ್ರೋಹ ಬಗೆದು ನಂಬಿದವರಿಗೆ ಚೂರಿ ಹಾಕಿದ ನಾರಾಯಣಗೌಡ ಒಬ್ಬ ಕೃತಜ್ಞತೆ ಇಲ್ಲದ ವ್ಯಕ್ತಿ. ಗ್ರಾಮ ಪಂಚಾಯಿತಿಯಲ್ಲೂ ಗೆಲ್ಲಲು ಯೋಗ್ಯತೆ ಇಲ್ಲದ ಈತನಿಗೆ ಎರಡು ಬಾರಿ ಟಿಕೆಟ್‌ ಕೊಟ್ಟು ಮಾಜಿ ಪ್ರಧಾನಿ ದೇವೇಗೌಡರ ಇಡೀ ಕುಟುಂಬ ಈತನ ಪರ ಪ್ರಚಾರ ಮಾಡಿತು. ಆದರೆ, ಶಾಸಕನನ್ನಾಗಿ ಮಾಡಿದ್ದನ್ನು ಸ್ಮರಿಸದೇ ದೇವೇಗೌಡರ ಕುಟುಂಬ ಟೀಕಿಸುವ ಮೂಲಕ ತನ್ನ ಸಣ್ಣತನವನ್ನು ತೋರಿಸಿದ್ದಾನೆ ಎಂದು ತಾಲೂಕು ಜೆಡಿಎಸ್‌ನ ಹಿರಿಯ ಮುಖಂಡರು ಭಾನುವಾರ ಏಕವಚನದಲ್ಲಿ ಟೀಕಾಪ್ರಹಾರ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಕ್ಷದ ಮುಖಂಡರೊಂದಿಗೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಜೀವನದಲ್ಲಿ ಒಮ್ಮೆ ಶಾಸಕನಾದರೆ ಸಾಕು ಎಂದು ಗೋಗರೆದು ಟಿಕೆಟ್‌ ಪಡೆದು ಈಗ ಪಕ್ಷದ ವಿರುದ್ಧವೇ ಹೀನಾಯವಾಗಿ ಟೀಕೆ ಮಾಡುವ ಮೂಲಕ ನಂಬಿಕೆಗೆ ಅರ್ಹರಲ್ಲದ ವ್ಯಕ್ತಿ ಎಂಬುದನ್ನು ತಾಲೂಕಿನ ಜನತೆಗೆ ತೋರಿಸಿಕೊಟ್ಟಿದ್ದಾನೆ ಎಂದು ಕಿಡಿಕಾರಿದರು.

ನೈತಿಕತೆ ಇಲ್ಲದ ವ್ಯಕ್ತಿ:  ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್ ದೇವರಾಜು ಮಾತನಾಡಿ, ಚುನಾವಣೆಗೆ ನಿಲ್ಲುವುದಕ್ಕೂ ಮೊದಲು ಗಾರ್ಮೆಂಟ್ಸ್‌ ಪ್ಯಾಕ್ಟರಿ ತೆರೆಯುತ್ತೇನೆ. ಸಾವಿರಾರು ಮಹಿಳೆಯರಿಗೆ ಉದ್ಯೋಗ ಕೊಡಿಸುತ್ತೇನೆ ಎಂದು ಸುಳ್ಳು ಹೇಳಿದ್ದ. ಅಲ್ಲದೆ ಶಾಲೆಗಳಿಗೆ ತಟ್ಟೆ-ಲೋಟ, ನೋಟ್‌ಬುಕ್‌ ಕೊಡುವ ಮೂಲಕ ಸಮಾಜ ಸೇವೆ ಮಾಡುವ ಸೋಗಿನಲ್ಲಿ ಬಂದು ತಾಲೂಕಿನ ಅಭಿವೃದ್ಧಿ ಮರೆತು ಗುತ್ತಿಗೆದಾರರಿಂದ ಕಮಿಷನ್‌ ದಂಧೆ ನಡೆಸಿದ ಅಭಿವೃದ್ಧಿ ವಿರೋಧಿ ರಾಜಕಾರಣಿ. ಕೇವಲ ಹಣ ಮಾಡಲು ಬಂದ ನೈತಿಕತೆ ಇಲ್ಲದ ವ್ಯಕ್ತಿ ಎಂದು ಕಟುವಾಗಿ ಟೀಕೆ ಮಾಡಿದರು.

ಡಿಸಿಸಿ ಬ್ಯಾಂಕ್‌ ವತಿಯಿಂದ ನೀಡಲಾಗಿದ್ದ ಹುದ್ದೆಯನ್ನು 10 ಲಕ್ಷಕ್ಕೆ ಮಾರಿಕೊಂಡ ವ್ಯಕ್ತಿ ನಾರಾಯಣಗೌಡ. ಗಂಗಾ ಕಲ್ಯಾಣ ಯೋಜನೆಯ ಸೌಲ್ಯಗಳನ್ನು ಕಮೀಷನ್‌ ಕೊಡುವವರೆಗೆ ಫಲಾನುಭವಿಗೆ ವಿತರಣೆ ಮಾಡದೇ ಮೂರು ದಿನಗಳ ಕಾಲ ರೈತರನ್ನು ಕಾಯಿಸಿದ ಪುಣ್ಯಾತ್ಮ. ಗುತ್ತಿಗೆದಾರ ಪಟ್ಟಣದ ಬುಕ್‌ ಡಿಪೋ ಮಾಲೀಕರೊಬ್ಬರ ಖಾತೆಗೆ ಕಮೀಷನ್‌ ಹಣ ಹಾಕಿದ ನಂತರ ಹೋಗಿ ಗುದ್ದಲಿ ಪೂಜೆ ಮಾಡುತ್ತಿದ್ದ ಸರ್ವಶ್ರೇಷ್ಠ ಶಾಸಕರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ನಿಮ್ಮಿಂದ ತಾಲೂಕಿಗೆ ಕಪ್ಪುಚುಕ್ಕೆ:

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಟಿ.ಮಂಜು ಮಾತನಾಡಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ, ರೇವಣ್ಣ ಹಾಗೂ ಕುಟುಂಬವನ್ನು ಟೀಕಿಸುವ ನೈತಿಕತೆ ನಾರಾಯಣಗೌಡರಿಗೆ ಇಲ್ಲ. ಜನರು ನೀಡಿದ ಅಧಿಕಾರವನ್ನು ಮಾರಿಕೊಂಡು ತಾಲೂಕಿನ ರಾಜಕಾರಣಕ್ಕೆ ಕಪ್ಪು ಚುಕ್ಕೆಯಾಗಿದ್ದಾರೆ. ನಿಮ್ಮನ್ನು ಯಾರು ಕ್ಷಮಿಸುವುದಿಲ್ಲ ಎಂದರು.

ದೇವೇಗೌಡರ ಕುಟುಂಬದವರ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಉರುಳಿಲ್ಲ. ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಗೌರವ ಕೊಟ್ಟು ಮಾತನಾಡುತ್ತಾರೆ. ಅಂತಹದಲ್ಲಿ ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡಿದ್ದೀರಿ. ಶಾಸಕರಾಗಿ ಆಯ್ಕೆಯಾಗಿ ಅನ್ನ ಹಾಕಿದ ಮನೆಗೆ ಕನ್ನ ಹಾಕುವ ದುರ್ಬುದ್ಧಿ ನಿಮ್ಮದಾಗಿದೆ. ಎರಡು ಭಾರಿ ಶಾಸಕರಾಗಿದ್ದೇ ತಾಲೂಕಿನ ದೌರ್ಭಾಗ್ಯವಾಗಿದೆ. ನಿಮ್ಮಂತಹ ನೈತಿಕತೆ ಇಲ್ಲದ ವ್ಯಕ್ತಿಯನ್ನು ಗೆಲ್ಲಿಸಲು ನಮ್ಮ ಮನೆಯ ದುಡ್ಡು ಹಾಕಿಕೊಂಡು ಶ್ರಮಿಸಿದ ನಾವು ಈಗ ಪಶ್ಚಾತ್ತಾಪ ಪಡಬೇಕಾದ ದುಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸೇಡಿನ ರಾಜಕಾರಣ :  ನನ್ನ ಜೀವನಾಧಾರವಾಗಿದ್ದ ಉದ್ಯಮಕ್ಕೆ ಸರ್ಕಾರದ ಬೆಂಬಲ ಪಡೆದು ತೊಂದರೆ ಕೊಡುವ ಮೂಲಕ ಸೇಡಿನ ರಾಜಕಾರಣಕ್ಕೂ ಕೈ ಹಾಕಿದ್ದೀರಿ. ಮನ್ಮುಲ್ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಎದುರಾಳಿ ಪಕ್ಷದ ಅಭ್ಯರ್ಥಿಗಳಿಗೆ ಹಣ ನೀಡಿ ಕುತಂತ್ರ ರಾಜಕಾರಣ ಮಾಡಿದ್ದು ಗೊತ್ತಿದೆ. ನಿಮ್ಮ ಕುತಂತ್ರಕ್ಕೆ ತಾಲೂಕಿನ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ನೀತಿಗೆಟ್ಟ ರಾಜಕಾರಣ ಬಿಟ್ಟು, ನಾಲ್ಕು ಮಂದಿ ಒಪ್ಪುವಂತಹ ರಾಜಕಾರಣ ಮಾಡಿ. ದೇವೇಗೌಡರ ಕುಟುಂಬದ ಬಗ್ಗೆ ಕೀಳು ಮಟ್ಟದ ಟೀಕೆ ಮಾಡಿದರೆ ತಾಲೂಕು ಜೆಡಿಎಸ್‌ ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ. ನಿಮ್ಮ ಈ ಕೀಳು ಮಟ್ಟದ ಹೇಳಿಕೆಗೆ ಮುಂದಿನ ದಿನಗಳಲ್ಲಿ ಜನರೇ ಈತನಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡರಾದ ಕಿಕ್ಕೇರಿ ಪ್ರಭಾಕರ್‌ , ಅಕ್ಕಿಹೆಬ್ಬಾಳು ರಘು, ಜಾನಕೀರಾಂ, ತಾಪಂ ಉಪಾಧ್ಯಕ್ಷ ರವಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಎಸ್‌.ರಾಜು, ಮನ್ಮುಲ… ಬಲದೇವ್‌, ಕುರುಬಹಳ್ಳಿ ನಾಗೇಶ…, ಐನೋರಹಳ್ಳಿ ಮಲ್ಲೇಶ…, ಪೂವನಹಳ್ಳಿ ರೇವಣ್ಣ, ಎಂ.ಪಿ.ಲೋಕೇಶ್‌, ನಾಗರಾಜೇಗೌಡ, ಕೆ.ಜಿ.ತಮ್ಮಣ್ಣ, ವಿಠಲಾಪುರ ಸುಬ್ಬೇಗೌಡ ಹಲವರು ಉಪಸ್ಥಿತರಿದ್ದರು.

click me!