ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರ ಸ್ವಕ್ಷೇತ್ರ ಕನಕಪುರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾನುವಾರ ಪಂಚರತ್ನ ರಥಯಾತ್ರೆ ಮೂಲಕ ಅಬ್ಬರಿಸಿದರು.
ಹಾರೋಹಳ್ಳಿ /ಕನಕಪುರ: (ಡಿ. 19): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರ ಸ್ವಕ್ಷೇತ್ರ ಕನಕಪುರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾನುವಾರ ಪಂಚರತ್ನ ರಥಯಾತ್ರೆ ಮೂಲಕ ಅಬ್ಬರಿಸಿದರು.
(Ramanagar) ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿ - ಮರಳವಾಡಿಯಲ್ಲಿ ಬಹಿರಂಗ ಸಭೆ ಮುಗಿಸಿ ತೊಪ್ಪಗನಹಳ್ಳಿ ಮೂಲಕ ಕನಕಪುರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ(HD Kumaraswamy) ಅವರಿಗೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡರು.
ನೂರಾರು ಯುವಕರ ಗುಂಪಿನೊಂದಿಗೆ ಬೈಕ್ ಜಾಥಾದೊಂದಿಗೆ ತೊಪ್ಪಗನಹಳ್ಳಿ ಬಳಿಯಿಂದ ಹೊರಟ ರಥಯಾತ್ರೆಗೆ ತುಂಗಣಿ, ಛತ್ರ, ಬೂದಿಗುಪ್ಪೆ ಗೇಟ್ ಹಾಗೂ ಕನಕಪುರ ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಮಹಿಳೆಯರು ಆರತಿ ಬೆಳಗುವ ಮೂಲಕ ಶುಭ ಕೋರಿದರು.
ನಗರದ ಮುಖ್ಯರಸ್ತೆಯಲ್ಲಿ ಪೂರ್ಣ ಕುಂಭ ಕಳಶ ಹೊತ್ತ ಮಹಿಳೆಯರೊಂದಿಗೆ ಜಾನಪದ ಕಲಾಮೇಳಗಳ ಜೊತೆ ಸಾಗಿದ ಬೃಹತ್ ಮೆರವಣಿಗೆಯಲ್ಲಿ ಪಂಚರತ್ನ ಯೋಜನೆಯ ಉದ್ದೇಶ ಸಾರುವ ಟ್ಯಾಬ್ಲೋಗಳು ಸಂಚರಿಸಿದವು. ಕಲಾವಿದರು ಪೂಜಾಕುಣಿತದಲ್ಲಿ ಕುಮಾರಸ್ವಾಮಿ ಭಾವಚಿತ್ರ ಹೊತ್ತು ಅಭಿಮಾನದಿಂದ ಕುಣಿದರು. ಮಾರ್ಗದುದ್ದಕ್ಕೂ ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಯುವ ಮುಖಂಡ ನಿಖಿಲ… ಕುಮಾರಸ್ವಾಮಿಯವರ ಬೃಹತ್ ಕಟೌಚ್‌ಗಳು ರಾರಾಜಿಸುತ್ತಿದ್ದವು. ಹೆಜ್ಜೆ ಹೆಜ್ಜೆಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಜಯಘೋಷ ಮೊಳಗಿಸುತ್ತಿದ್ದರು.
ಚನ್ನಬಸಪ್ಪ ವೃತ್ತದ ವರೆಗೂ ಬೃಹತ್ ಮೆರವಣಿಗೆಯ ಮೂಲಕ ಆಗಮಿಸಿದ ಕುಮಾರಸ್ವಾಮಿ ಹಾಗೂ ಮುಖಂಡರಿಗೆ ಅಭಿಮಾನಿಗಳು ಬೃಹತ್ ರೇಷ್ಮೆ ಹಾಗೂ ಬಾಳೆ ಹಣ್ಣಿನ ಹಾರವನ್ನು ಹಾಕಿ ಅಭಿಮಾನ ಮೆರೆದರು. ಬಿ.ಎಸ್.ದೊಡ್ಡಿಯ ಚಿಕ್ಕಣ್ಣ ಎಂಬುವರು ಪಕ್ಷ ಸಂಘಟನೆಗಾಗಿ 5 ಸಾವಿರ ಕಾಣಿಕೆ ನೀಡಿದರು. ಟಿ.ಬೇಕುಪ್ಪೆ ವೃತ್ತದ ಮೂಲಕ ಕೋಡಿಹಳ್ಳಿ ನಂತರ ಹೂಕುಂದ ಮಾರ್ಗವಾಗಿ ಡಿ.ಕೆ.ಶಿವಕುಮಾರ್ ರವರ ಹುಟ್ಟೂರು ದೊಡ್ಡಾಲಹಳ್ಳಿ ತಲುಪಿದರು.
ಇಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಹಿಂದಿನಿಂದಲೂ ತಾಲೂಕಿನಲ್ಲಿ ನಮ್ಮ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರನ್ನು ಒಳಗೊಂಡ ದೊಡ್ಡ ಶಕ್ತಿಯೇ ಇದ್ದು , ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಈ ಬಾರಿ ಕ್ಷೇತ್ರದ ಜನತೆ ಬದಲಾವಣೆ ತರುವ ಮೂಲಕ ತಾಲೂಕಿನ ಹಾಗೂ ರಾಜ್ಯದ ಅಭಿವೃದ್ಧಿಗೆ ಬುನಾದಿ ಹಾಕುವಂತೆ ಕರೆ ನೀಡಿದರು.
ದೊಡ್ಡ ಆಲಹಳ್ಳಿಯಿಂದ ಹೊರಟ ರಥಯಾತ್ರೆಯು ರಾತ್ರಿ ವೇಳೆಗೆ ಸಾತನೂರು ತಲುಪಿ ಸಂತೆ ವೃತ್ತದಲ್ಲಿ ಆಯೋಜಿಸಿದ್ದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದರು. ಅಲ್ಲಿಂದ ಹೊರಟ ರಥಯಾತ್ರೆ ತಾಲೂಕಿನ ಗಡಿಭಾಗ ಶಕ್ತಿ ದೇವತೆ ಕಬ್ಬಾಳಮ್ಮನ ಸನ್ನಿಧಿಗೆ ತಡರಾತ್ರಿ ವೇಳೆಗೆ ತಲುಪಿತು.
ಇದಕ್ಕೂ ಮುನ್ನ ಬೆಳಗ್ಗೆ ಹಾರೋಹಳ್ಳಿ ಭಾಗದ ಚೀಲೂರು ಗ್ರಾಮದಲ್ಲಿ ರಥಯಾತ್ರೆಗೆ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು. ಮರಿಯಪ್ಪನದೊಡ್ಡಿ, ಟಿ.ಹೊಸಹಳ್ಳಿಯಲ್ಲಿ ಯುವಕರು ಜೆಸಿಬಿ ಮೂಲಕ ಹೂಮಳೆ ಸುರಿಸಿದರೆ, ಗ್ರಾಮಸ್ಥರು ಹೂವಿನ ಹಾರ ಹಾಕಿದರು.
ಅಗರ ಹಾಗೂ ಮಲ್ಲಿಗೆಮೆಟ್ಟಿಲು ರಥಯಾತ್ರೆ ಆಗಮಿಸಿದಾಗ ಜನರು ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ನಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಆನ್‌ಲೈನ್ ಕ್ರಿಕೆಟ್ ಬ್ಯಾನ್ ಮಾಡಬೇಕು. ಗ್ರಾಮದಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡಬೇಕೆಂದು ಮಾಡಿದ ಮನವಿಗೆ ಕುಮಾರಸ್ವಾಮಿ ಸ್ಪಂದಿಸುವ ಭರವಸೆ ನೀಡಿದರು. ಮರಳವಾಡಿಯಲ್ಲಿ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸ್ವಾಗತ ಕೋರಿದರೆ, ಇದೇ ಸಮಯದಲ್ಲಿ ಕೆಲ ಅಲ್ಪಸಂಖ್ಯಾತ ಯುವಕರು ಜೆಡಿಎಸ್ ಸೇರ್ಪಡೆಯಾದರು. ಹಾರೋಹಳ್ಳಿಯಲ್ಲಿ ಜೆಸಿಬಿಯಲ್ಲಿ ಪುಷ್ಪ ವೃಷ್ಟಿಮಾಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣ ಗೌಡ, ತಾಪಂ ಮಾಜಿ ಅಧ್ಯಕ್ಷ ಬಾಲನರಸಿಂಹಯ್ಯ, ಮುಖಂಡರಾದ ಸಿದ್ಧಮರೀಗೌಡ, ಚಿನ್ನಸ್ವಾಮಿ, ಗೇರಹಳ್ಳಿ ಸಣ್ಣಪ್ಪ, ಪುಟ್ಟರಾಜು,ನಗರಸಭಾ ಸದಸ್ಯರಾದ ಜಯರಾಮ…, ಸ್ಟೂಡಿಯೋ ಚಂದ್ರು, ತಾಪಂ ಮಾಜಿ ಸದಸ್ಯರಾದ ಧನಂಜಯ್ಯ, ಚಂದ್ರಶೇಖರ್, ಕಬ್ಬಾಳೇಗೌಡ, ಲೋಕೇಶ್, ಸರ್ದಾರ್, ಯುವ ಮುಖಂಡ ಮುಳ್ಳಹಳ್ಳಿ ಮಹೇಶ್, ಭರತ್, ಬಾಲನರಸಿಂಹಯ್ಯ, ಮೋಹನ್, ಮಂಜು ಕುಮಾರ್ ಮತ್ತಿತರರು ಭಾಗಿಯಾಗಿದ್ದರು.
ಕಾರ್ಯಕರ್ತರ ಮೇಲಿನ ದೌರ್ಜನ್ಯಕ್ಕೆ ಅಂತ್ಯವಾಡುವ ಕಾಲ ಸನ್ನಿಹಿತ: ಕುಮಾರಸ್ವಾಮಿ
ಕನಕಪುರ ಕ್ಷೇತ್ರದಲ್ಲಿ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅನುಭವಿಸುತ್ತಿರುವ ನೋವು, ದಬ್ಬಾಳಿಕೆ, ದೌರ್ಜನ್ಯಗಳಿಗೆ ಅಂತ್ಯವಾಡುವ ಕಾಲ ಸನಿಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಪಂಚರತ್ನ ರಥಯಾತ್ರೆಯಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎದುರಾಳಿಗಳ ಬೆದರಿಕೆ, ದೌರ್ಜನ್ಯಕ್ಕೆ ನಾನಾಗಲಿ ಅಥವಾ ನಮ್ಮ ಕಾರ್ಯಕರ್ತರಾಗಲಿ ಹೆದರುವ ಪ್ರಶ್ನೆಯೇ ಇಲ್ಲ. ದೇವರ ಅನುಗ್ರಹದ ಜೊತೆಗೆ ನಿಷ್ಠಾವಂತ ಕಾರ್ಯಕರ್ತರ ಶಕ್ತಿ ನನಗೆ ಹಾಗೂ ನಮ್ಮ ಪಕ್ಷಕ್ಕೆ ಇರುವರೆಗೂ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದರು.
ದೇವೇಗೌಡ ಮತ್ತು ನನಗೆ ಈ ಕ್ಷೇತ್ರದ ಜನರು ಆಶೀರ್ವಾದ ಮಾಡಿದ್ದಾರೆ. ನನ್ನ ನಿಜ ದೇವರು ಕನಕಪುರದ ಜನರು. ಯಾವುದೊ ಒತ್ತಡಕ್ಕೆ ಒಳಪಟ್ಟು ಕಳೆದ ಬಾರಿ ಕ್ಷೇತ್ರದಲ್ಲಿ ತಲೆ ಬಾಗಿದೆ. ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬಲು ಹೊಂದಾಣಿಕೆ ಮಾಡಿದ್ದೇನೆ ಹೊರತು ಬೇರೆ ಏನಿಲ್ಲ. ಇನ್ನು ಮುಂದೆ ನಿಮಗೆ ನೋವು ಕೊಡುವುದಿಲ್ಲ. ನಿಮ್ಮೊಂದಿಗೆ ಪಕ್ಷ ಸಂಘಟನೆ ಮಾಡಲು ನಾನು ಇರುತ್ತೇನೆ. ಮುಂದೆ ಜೆಡಿಎಸ್ ಅಭ್ಯರ್ಥಿಗೆ ಆಶೀರ್ವಾದ ಮಾಡಿ ಎಂದು ತಿಳಿಸಿದರು.
ರಾಜ್ಯ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದರೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕೆಂದು ನಿಶ್ಚಿಯಿಸಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾಡಿನ ಜನರಿಗೆ ವಸತಿ,ಶಿಕ್ಷಣ,ರೈತರಿಗೆ ಶಕ್ತಿ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ಸಮಗ್ರ ನೀರಾವರಿ ಅಭಿವೃದ್ಧಿಗೆ ಬದ್ದವಾಗಿದೆ. ಈ ಬಾರಿ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು , ಈ ಕ್ಷೇತ್ರದ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಲಿದೆ ಎಂದು ಹೇಳಿದರು.
ನಾನು ಅಧಿಕಾರದಲ್ಲಿದ್ದಾಗ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ರಾಜ್ಯದ ಬಡವರ,ರೈತರ,ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿ ರೈತರ ಸಾಲ 25000 ಸಾವಿರದ ವರೆಗೂ ಮನ್ನಾ ಮಾಡಿದ ತೃಪ್ತಿ ಇದೆ. ಆದರೆ, ಆಡಳಿತದಲ್ಲಿನ ಕೆಲವು ಗೊಂದಲ ಹಾಗೂ ಹಲವು ಮಹಾನ್ ನಾಯಕರುಗಳ ಚಿತಾವಣೆ ಯಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.