ಬಿಎಸ್‌ವೈ ಸರ್ಕಾರಕ್ಕೆ ಮತ್ತೊಮ್ಮೆ ಖಡಕ್‌ ಎಚ್ಚರಿಕೆ ಕೊಟ್ಟ ಸ್ವಾಮೀಜಿ

By Kannadaprabha News  |  First Published Dec 24, 2020, 2:01 PM IST

ಸರ್ಕಾರ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ| ರಕ್ತ ಕೊಡುತ್ತೇವೆ, ಮೀಸಲಾತಿಯನ್ನು ಪಡೆಯುತ್ತೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಜನ್ಮದಿನೋತ್ಸವ ಆಚರಿಸಿಕೊಂಡ ಕೂಡಲ ಸಂಗಮ ಶ್ರೀ|.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಸಮಾಜ ನೆರವಾಗಿದೆ. ಅದಕ್ಕಾಗಿ ಬೇಡಿಕೆ ಈಡೇರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು| 


ಬಾಗಲಕೋಟೆ(ಡಿ.24): ರಕ್ತ ಕೊಡುತ್ತೇವೆ, ಮೀಸಲಾತಿಯನ್ನು ಪಡೆಯುತ್ತೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಜನ್ಮದಿನೋತ್ಸವ ಹಾಗೂ ರೈತ ದಿನಾಚರಣೆಯ ನಿಮಿತ್ತ ರಕ್ತದಾನ ಮಾಡಿ ರಕ್ತದಾಸೋಹಕ್ಕೆ ಚಾಲನೆ ನೀಡಿದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಈ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಬೀದಿಗಿಳಿದು ಉಗ್ರ ಸ್ವರೂಪದ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

ನಗರದ ನಾಡಗೌಡ ಬಡಾವಣೆಯ ಗುರುನೂರು ಆಸ್ಪತ್ರೆಯಲ್ಲಿ ಬನಶಂಕರಿ ರಕ್ತನಿಧಿ​ಯ ಸಹಯೋಗದೊಂದಿಗೆ ರಕ್ತದಾನ ಮಾಡಿ ರಾಜ್ಯಮಟ್ಟದ ರಕ್ತದಾಸೋಹಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜ್ಯರು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಹಾಗೂ ಲಿಂಗಾಯತ ಬಡ ಸಮಾಜಗಳಿಗೆ ಶಿಕ್ಷಣ, ಉದ್ಯೋಗದ ಅವಕಾಶಕ್ಕಾಗಿ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು. ಈವರೆಗೆ ಆರಂಭವಾಗಿರುವ ಈ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಜ.14 ರಿಂದ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಆರಂಭಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

Tap to resize

Latest Videos

ಉಗ್ರ ಹೋರಾಟಕ್ಕೆ ಅಣಿ:

ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ಹೇಳಿದಂತೆ ನಿಮ್ಮ ರಕ್ತ ನನಗೆ ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡಿಸುತ್ತೇನೆ ಎಂಬ ವಾಕ್ಯದಡಿ ಸಮಾಜ ಉಗ್ರ ಸ್ವರೂಪದ ಹೋರಾಟಕ್ಕೆ ಅಣಿಯಾಗಿದೆ. ಇಂದು ತಮ್ಮ 41ನೇ ಜನ್ಮದಿನೋತ್ಸವ ಹಾಗೂ ರೈತ ದಿನಾಚರಣೆ ನಿಮಿತ್ತ ಸಮಾಜದ ಬಾಂಧವರು ರಾಜ್ಯಾದ್ಯಂತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ರಕ್ತದಾಸೋಹದ ಚಳವಳಿ ಆರಂಭಿಸಿದ್ದಾರೆ. ಸುಮಾರು 5 ಸಾವಿರಕ್ಕೂ ಹೆಚ್ಚು ಜನ ರಕ್ತದಾನ ಮಾಡಲಿದ್ದಾರೆ. ಈ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದರು.

ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ: ಜಯಮೃತ್ಯುಂಜಯ ಶ್ರೀಗಳು

ವಿಧಾನಸೌಧಕ್ಕೆ ಮುತ್ತಿಗೆ:

ಸಮಾಜದ ಸಹನೆಗೂ ಒಂದು ಮಿತಿ ಇದೆ. ಸಹನೆ ಮೀರಿದರೆ ಆಗುವ ಅವಾಂತರಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ ಜಗದ್ಗುರುಗಳು, ಸಮಾಜದ ಸಚಿವರಾದ ಸಿ.ಸಿ.ಪಾಟೀಲ, ಈರಣ್ಣ ಕಡಾಡಿ ಅವರು ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇವೆ ಎಂಬ ಮನವಿಗೆ ಸ್ಪಂದಿಸಿ ಡಿ.23ರ ಹೋರಾಟವನ್ನು ಬಸವ ಸಂಕ್ರಾಂತಿ ಜ.14ಕ್ಕೆ ಮುಂದೂಡಲಾಗಿದೆ. ಅಂದು ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಬೃಹತ್‌ ಮಟ್ಟದ ಪಾದಯಾತ್ರೆ ಆರಂಭವಾಗಲಿದೆ. ಬೇಡಿಕೆ ಈಡೇರಿಕೆಗಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಸಮಾಜ ನೆರವಾಗಿದೆ. ಅದಕ್ಕಾಗಿ ಬೇಡಿಕೆ ಈಡೇರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯಮಟ್ಟದ ನಾಯಕರಿಗೆ ಈ ಕುರಿತು ಮನವರಿಕೆ ಮಾಡಲಾಗಿದೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೂ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು. ಸ್ಪಂದಿಸದಿದ್ದರೆ ಬೀದಿಗಿಳಿದು ಉಗ್ರ ಸ್ವರೂಪದ ಹೋರಾಟ ಅನಿವಾರ‍್ಯವಾಗಲಿದೆ ಎಂದರು.

ಅಭೂತ ಪೂರ್ವ ಬೆಂಬಲ:

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಯುವ ಘಟಕದ ರಾಜ್ಯಾಧ್ಯಕ್ಷ ಸೋಮಶೇಖರ ಅಲ್ಯಾಳ ಅವರು ಮಾತನಾಡಿ, 2ಎ ಮೀಸಲಾತಿ ಹಾಗೂ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಲಿಂಗಾಯತ ಬಡ ಸಮಾಜಗಳನ್ನು ಸೇರ್ಪಡೆಗೆ ಆಗ್ರಹಿಸಿ ನಡೆದಿರುವ ಹೋರಾಟಕ್ಕೆ ರಾಜ್ಯದೆಲ್ಲೆಡೆ ಅಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಜ್ಯ ಪದಾಧಿ​ಕಾರಿಗಳು ಸುಮಾರು 500ಕ್ಕೂ ಹೆಚ್ಚು ಜನ ವಿಧಾನಸೌಧದ ಎದುರು ಶೀಘ್ರ ರಕ್ತದಾನ ಮಾಡುವ ಕುರಿತು ನಿರ್ಧರಿಸಿ ಈ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಇಂದು ಜಗದ್ಗುರುಗಳ ಜನ್ಮದಿನೋತ್ಸವ ಹಾಗೂ ರೈತ ದಿನಾಚರಣೆ ನಿಮಿತ್ತ ರಾಜ್ಯದ ಜಿಲ್ಲಾ, ತಾಲೂಕು, ಹೋಬಳಿ ಕೇಂದ್ರಗಳಲ್ಲಿ ರಕ್ತದಾನ ಶಿಬಿರದ ಮೂಲಕ ರಕ್ತದಾಸೋಹ ಮಾಡಿ ಸರ್ಕಾರವನ್ನು ಎಚ್ಚರಿಸುವ ಕಾರ್ಯ ನಡೆದಿದೆ. ಜ.14 ರಂದು ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಆರಂಭವಾಗುವ ಪಾದಯಾತ್ರೆ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲಿದೆ ಎಂದರು.

ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ಡಾ.ಎಸ್‌.ಎಂ.ಗೂರನವರ, ರಕ್ತನಿಧಿ​ಯ ಶ್ರೀಧರ, ವಂದನಾ ಮುಧೋಳಕರ, ಮುತ್ತು, ರಾಜಶೇಖರ ಮತ್ತಿತರರು ಸಿಬ್ಬಂದಿ ರಕ್ತದಾನ ಶಿಬಿರಕ್ಕೆ ನೆರವಾದರು. ಈ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಜ್ಯ ಸಂಘಟನಾ ಕಾರ‍್ಯದರ್ಶಿಗಳೂ ಆಗಿರುವ ಜಿಲ್ಲಾ ಯುವ ಘಟಕದ ಅಧ್ಯಕ್ಷ ಡಾ.ಶಿವಕುಮಾರ ಗಂಗಾಲ, ಕಾರ್ಯದರ್ಶಿ ಮಂಜುನಾಥ ಪರೂತಗೇರಿ, ವೀರೇಶ ಗಮದಾಳ, ನಗರಸಭೆ ಸದಸ್ಯ ಚನ್ನವೀರ ಅಂಗಡಿ, ಶಿವಾನಂದ ಯಾಳಗಿ, ಸಂಗಮೇಶ ದೊಡಮನಿ ಯುವ ಸಮುದಾಯ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
 

click me!