ಶೀಘ್ರ ವಾಪಸ್ ಕಳುಹಿಸಿಕೊಡುವ ಭರವಸೆ| ಪ್ರವಾಸಿಗರನ್ನು ಭೇಟಿಯಾದ ಪೊಲೀಸ್ ಆಯುಕ್ತ| ಕಾಶ್ಮೀರದ ಸೋನಾಮಾರ್ಗ್‌ನ ಹೋಟೆಲ್‌ನಲ್ಲಿ ಸಿಕ್ಕಿಹಾಕಿಕೊಂಡ ಕರ್ನಾಟಕದ 10 ಮಂದಿ| ಸಚಿವ ಆನಂದ್ ಸಿಂಗ್‌ರನ್ನು ಸಂಪರ್ಕಿಸಿ ನೆರವಿಗಾಗಿ ಮನವಿ ಮಾಡಿದ್ದ ಕನ್ನಡಿಗರು|
ಹೊಸಪೇಟೆ(ಮಾ.14): ಹಿಮಪಾತದಿಂದಾಗಿ ಕಾಶ್ಮೀರದ ಹೋಟೆಲ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ಸಿಕ್ಕಿಹಾಕಿಕೊಂಡು ಪರದಾಡುತ್ತಿರುವ ಹೊಸಪೇಟೆ, ಹುಬ್ಬಳ್ಳಿ ಮೂಲದ 10 ಪ್ರವಾಸಿಗರನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆ ಆಯುಕ್ತರು ಭೇಟಿ ನೀಡಿ ಅಭಯ ನೀಡಿದ್ದಾರೆ. ಶೀಘ್ರದಲ್ಲೇ ವಾಪಸ್ ಕಳುಹಿಸಿಕೊಡಲು ವ್ಯವಸ್ಥೆ ಮಾಡುವ ಭರವಸೆಯನ್ನೂ ನೀಡಿದ್ದಾರೆ.
ನಗರದ ನಿವಾಸಿ ಪ್ರಕಾಶ್ ಮೆಹರವಾಡೆ, ಅವರ ಪತ್ನಿ ಸುಧಾ, ಹುಬ್ಬಳ್ಳಿ ಮೂಲದ ಆನಂದ, ವಂದನಾ, ವೆಂಕಟೇಶ್ ದಲಬಂಜನ್, ಪ್ರೀತಿ, ಮಂಜು ಬದಿ, ಗೀತಾ, ಗೋಪಾಲ ಕಲ್ಬುರ್ಗಿ, ವೀಣಾ ಸೇರಿ 10 ಮಂದಿ ಕಾಶ್ಮೀರದ ಸೋನಾಮಾರ್ಗ್‌ನ ಹೋಟೆಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಭಾರೀ ಹಿಮಪಾತ: ಕಾಶ್ಮೀರದಲ್ಲಿ ಸಿಕ್ಕು ಕನ್ನಡಿಗರ ಪರದಾಟ
ಹಿಮಪಾತದಿಂದ ವಿದ್ಯುತ್ ಕಡಿತಗೊಂಡಿದ್ದು, ಆ್ಯಕ್ಸಿಜನ್ ಕೊರತೆ ಕೂಡ ಉಂಟಾಗಿ ಪರದಾಡಿದ್ದು, ಈ ಸಂಬಂಧ ಅವರು ಸಚಿವ ಆನಂದ್ ಸಿಂಗ್‌ರನ್ನು ಸಂಪರ್ಕಿಸಿ ನೆರವಿಗಾಗಿ ಮನವಿ ಮಾಡಿದ್ದರು. ಅದರಂತೆ ಸಚಿವರು ಕೇಂದ್ರ ಸರ್ಕಾರದ ಗಮನಕ್ಕೆ ಈ ವಿಚಾರ ತಂದಿದ್ದರು.
ಸದ್ಯ ಭಾರೀ ಹಿಮಪಾತವಾಗುತ್ತಿದ್ದು, ಪರಿಸ್ಥಿತಿ ಹತೋಟಿಗೆ ಬಂದ ಕೂಡಲೇ ಎಲ್ಲರನ್ನೂ ಸುರಕ್ಷಿತವಾಗಿ ಕಳುಹಿಸಿಕೊಡಲು ವ್ಯವಸ್ಥೆ ಮಾಡುವುದಾಗಿ ಪೊಲೀಸ್ ಅಧಿಕಾರಿ ಭರವಸೆ ನೀಡಿದ್ದಾರೆ.