ಹಲಸಿನ ಹಣ್ಣು ದುಬಾರಿ: ಬೆಳೆಗಾರರಿಗೆ ಸಂತಸ

By Kannadaprabha News  |  First Published Jun 19, 2024, 11:16 AM IST

ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು ಎಂಬ ಗಾದೆ ಮಾತಿದೆ. ಹಲಸು ಹಾಗೂ ಮಾವಿನ ಸೀಸನ್ ಶುರುವಾಗಿದ್ದು, ರಸ್ತೆ ಬದಿಯಲ್ಲಿ ಹಲಸು ಮಾವಿನ ಹಣ್ಣುಗಳ ಮಾರಾಟ ಜೋರಾಗಿ ನಡೆಯುತ್ತಿದೆ


  ಚಿಕ್ಕಬಳ್ಳಾಪುರ :  ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು ಎಂಬ ಗಾದೆ ಮಾತಿದೆ. ಹಲಸು ಹಾಗೂ ಮಾವಿನ ಸೀಸನ್ ಶುರುವಾಗಿದ್ದು, ರಸ್ತೆ ಬದಿಯಲ್ಲಿ ಹಲಸು ಮಾವಿನ ಹಣ್ಣುಗಳ ಮಾರಾಟ ಜೋರಾಗಿ ನಡೆಯುತ್ತಿದೆ.

ಹಲಸಿನ ಹಣ್ಣಿಗೆ ಈ ಬಾರಿ ಉತ್ತಮ ಬಂದಿರುವುದು ಬೆಳೆಗಾರರಿಗೆ ಸಂತಸ ತಂದಿದೆ. ಆದರೆವೈಪರೀತ್ಯದಿಂದ ಈ ಬಾರಿ ಮಾವು ಪೂರೈಕೆ ತೀರಾ ಕಡಿಮೆಯಾಗಿದ್ದು ಬೆಲೆ ದುಬಾರಿಯಾಗಿದೆ. ಗ್ರಾಹಕರ ಜೇಬಿಗೆ ಭಾರವಾಗಿದೆ.

Tap to resize

Latest Videos

ಕೆಜಿ ಹಲಸಿಗೆ ₹20

ಹವಾಮಾನ ವೈಪರೀತ್ಯದಿಂದಾಗಿ ಫ‌ಸಲು ಕುಸಿತ ಪರಿಣಾಮ ಹಣ್ಣುಗಳ ದರದ ಮೇಲೆ ಪರಿಣಾಮ ಬೀರಿದೆ. ಆದರೂ ಹಲಸಿಗೆ ಉತ್ತಮ ಬೆಲೆ ಸಿಕ್ಕಿದೆ. ಹಲಸಿಗೆ 2022ರಲ್ಲಿ ಪ್ರತಿ ಕೆ.ಜಿಗೆ 6 ರಿಂದ 10 ರು. ಸಿಗುತ್ತಿತ್ತು. 2023 ರಲ್ಲಿ 12 ರಿಂದ 15 ರು..ಗೆ ಏರಿಕೆ ಕಂಡಿತ್ತು. ಈ ಬಾರಿ 20 ರು.ಗಳ ಗಡಿ ದಾಟಿದೆ. ಪ್ರತಿ ಕಾಯಿಯ ಮೇಲೆ 100 ರಿಂದ 500 ರು.ವರೆಗೂ ಏರಿಕೆ ಕಂಡಿದೆ. ರೋಗನಿರೋಧಕ ಗುಣಗಳನ್ನು ಹೊಂದಿರುವ ಹಲಸಿನ ಹಣ್ಣು ರುಚಿಗೆ ಮಾರು ಹೋಗದವರಿಲ್ಲ. ಮಾರುಕಟ್ಟೆ, ಪ್ರಮುಖ ಜನನಿಬಿಡ ಪ್ರದೇಶ, ರಸ್ತೆಬದಿಗಳಲ್ಲಿ ಹಲಸಿನ ಮಾರಾಟ ಜೋರಾಗಿದೆ.

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ರಸ್ತೆಗಳ ರಾಹೆ-44 ರ ಉದ್ದಕ್ಕೂ ಎರಡೂ ಬದಿ ಹಲಸಿನ ಹಣ್ಣುಗಳ ರಾಶಿ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಹಣ್ಣಿನ ಮಾರಾಟ ಜೋರಾಗಿದೆ. ಚಂದ್ರಹಲಸು, ಬಿಳಿಹಲಸು, ನೀರುತೊಳೆ, ಬಿಳಿ, ಹಳದಿ ತೊಳೆಹಣ್ಣು ಹೀಗೆ ಪ್ರದೇಶವಾರು ವಿವಿಧ ಹೆಸರುಗಳ ಹಣ್ಣುಗಳು ಕಂಡು ಬರುತ್ತಿವೆ. ವಾರಾಂತ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಮಾರಾಟಗಾರರು.

100ರಿಂದ 150 ಹಣ್ಣು ಮಾರಾಟ

ಪ್ರತಿ ನಿತ್ಯ ಸುಮಾರು 100 ರಿಂದ 150 ಹಲಸಿನಹಣ್ಣು ಮಾರಾಟ ವಾಗುತ್ತದೆ. ಜೂನ್‌, ಜುಲೈ ತಿಂಗಳಲ್ಲಿ ಉತ್ತಮ ಸ್ಪಂದನೆಯಿದ್ದು, ಹಲಸಿನ ಹಣ್ಣಿನ ಗಾತ್ರದ ಮೇಲೆ 500 ರು.ವರೆಗೆ ಮಾರಾಟವಾಗುತ್ತದೆ. ಸ್ಥಳೀಯವಾಗಿ ಹಾಗೂ ಕೆಲವೊಮ್ಮೆ ತಮಿಳುನಾಡಿನಿಂದ ಹಲಸಿನ ಹಣ್ಣು ತರುತ್ತೇವೆ ಎಂದು ಮಾರಾಟಗಾರರು ತಿಳಿಸುತ್ತಾರೆ.

ಚಿಕ್ಕಬಳ್ಳಾಪುರ, ಬಾಗೇಪಲ್ಲಿ,ಗೌರಿಬಿದನೂರು,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ, ಬೆಂಗಳೂರು, ಇತರೆ ಕಡೆಗಳಿಂದ ಹಣ್ಣನ್ನು ತರಲಾಗುತ್ತದೆ. ಹಲಸಿನ ಹಣ್ಣಿಗೆ ಸ್ಥಳೀಯವಾಗಿ ಬೇಡಿಕೆಯಿದ್ದರೂ ದರ ಏರಿಕೆಯಾಗಿದೆ. ಮಾವು, ಹಲಸು, ದ್ರಾಕ್ಷಿ, ಇತರೆ ಹಣ್ಣುಗಳಿಗೆ ಜಿಲ್ಲೆಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎನ್ನುತ್ತಾರೆ ಹಲಸು ಬೆಳೆಗಾರ ಕೃಷ್ಣಪ್ಪ. 

click me!