
ಬಳ್ಳಾರಿ (ಮಾ.17): ಇಸ್ರೇಲ್-ಇರಾನ್ ಯುದ್ಧ, ಗಣಿ ಜಿಲ್ಲೆಯ ಜೀನ್ಸ್ ಉದ್ಯಮದ ಮೇಲೂ ದುಷ್ಪರಿಣಾಮ ಬೀರಿದೆ.
ಭಾರತದ ದಕ್ಷಿಣ ರಾಜ್ಯಗಳು, ವಿದೇಶಕ್ಕೆ ರಫ್ತಾಗುತ್ತಿದ್ದ ಇಲ್ಲಿನ ಜೀನ್ಸ್ ಉಡುಪುಗಳಿಗೆ ಬೇಡಿಕೆ ಕುಸಿದಿದ್ದು, ಜೀನ್ಸ್ ಉದ್ಯಮ ಆಶ್ರಯಿಸಿದವರು ತೊಳಲಾಟ ಎದುರಿಸುತ್ತಿದ್ದಾರೆ. ದುಬೈ, ಸಿಂಗಾಪುರ ಸೇರಿದಂತೆ 12 ದೇಶಗಳಿಗೆ ಬಳ್ಳಾರಿ ಜೀನ್ಸ್ ರಫ್ತಾಗುತ್ತಿತ್ತು. ತ್ರಿರಾಷ್ಟ್ರಗಳ ನಡುವಿನ ಯುದ್ಧದುನ್ಮಾದ ಜೀನ್ಸ್ ಉಡುಪುಗಳ ಬೇಡಿಕೆಯನ್ನು ಭಾಗಶಃ ಕುಸಿಯುವಂತೆ ಮಾಡಿದೆ. ಯುದ್ಧ ಕಾರಣಕ್ಕೆ ನೆರೆಯ ರಾಷ್ಟ್ರಗಳ ಜೊತೆ ವ್ಯಾಪಾರ ವಹಿವಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಜೀನ್ಸ್ ಉಡುಪುಗಳ ರಫ್ತಿಗೆ ಸಮಸ್ಯೆ ಎದುರಾಗಿದೆ.
ಏತನ್ಮಧ್ಯೆ, ಬಳ್ಳಾರಿ ಜೀನ್ಸ್ ಉತ್ಪನ್ನಗಳಿಗೆ ಬಳಕೆಯಾಗುತ್ತಿದ್ದ ಕಚ್ಚಾ ಪದಾರ್ಥವಾದ ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಪೋಕ್ಲೋರೈಟ್, ಪೊಟ್ಯಾಸಿಯಂ ಪರ್ಮಾಂಗನೇಟ್ ಮತ್ತಿತರ ಕೆಮಿಕಲ್ಸ್ ಆಮದು ಸಂಪೂರ್ಣ ಬಂದ್ ಆಗಿದೆ. ಜೀನ್ಸ್ ಉಡುಪುಗಳಿಗೆ ಬಣ್ಣ ಲೇಪಿಸಲು ಈ ಕೆಮಿಕಲ್ಸ್‌ಗಳನ್ನು ಬಳಕೆ ಮಾಡಲಾಗುತ್ತದೆ.
ಯುಗಾದಿ ಹಾಗೂ ರಂಜಾನ್ ಹಬ್ಬಗಳ ವೇಳೆ ಹೆಚ್ಚಿನ ಪ್ರಮಾಣದ ಜೀನ್ಸ್ ಉಡುಪುಗಳನ್ನು ರಫ್ತು ಮಾಡುತ್ತಿದ್ದ ಇಲ್ಲಿನ ಜೀನ್ಸ್ ಉದ್ಯಮಿಗಳು ಈ ಬಾರಿ ಕೆಲಸವಿಲ್ಲದೆ ಕುಳಿತಿದ್ದಾರೆ.