Latest Videos

‘ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ’: ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ

By Kannadaprabha NewsFirst Published Jun 17, 2024, 12:36 PM IST
Highlights

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಅನ್ಯಾಯವಾಗಿದೆ. ಮಳೆ ಪ್ರಮಾಣ, ಜನಸಂಖ್ಯೆ ಹೆಚ್ಚಳ ಮತ್ತಿತರ ವಿಚಾರಗಳ ಬಗ್ಗೆ ರಾಜ್ಯದಿಂದಲೂ ಪ್ರಬಲ ವಾದ ಮಂಡನೆಯಾಗಿಲ್ಲ. ಕೇಂದ್ರ ಸರ್ಕಾರ ಸಹ ರಾಜ್ಯಕ್ಕೆ ನ್ಯಾಯ ನೀಡುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯಪಟ್ಟಿದ್ದಾರೆ. 

ಬೆಂಗಳೂರು (ಜೂ.17): ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಅನ್ಯಾಯವಾಗಿದೆ. ಮಳೆ ಪ್ರಮಾಣ, ಜನಸಂಖ್ಯೆ ಹೆಚ್ಚಳ ಮತ್ತಿತರ ವಿಚಾರಗಳ ಬಗ್ಗೆ ರಾಜ್ಯದಿಂದಲೂ ಪ್ರಬಲ ವಾದ ಮಂಡನೆಯಾಗಿಲ್ಲ. ಕೇಂದ್ರ ಸರ್ಕಾರ ಸಹ ರಾಜ್ಯಕ್ಕೆ ನ್ಯಾಯ ನೀಡುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯಪಟ್ಟಿದ್ದಾರೆ. ಗಾಂಧಿ ಭವನದಲ್ಲಿ ‘ಕಾಡುಮಲ್ಲೇಶ್ವರ ಗೆಳೆಯರ ಬಳಗ’ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿರುಚಿ ಪ್ರಕಾಶನ ಪ್ರಕಟಿಸಿದ ನಿವೃತ್ತ ಐಪಿಎಸ್ ಅಧಿಕಾರಿ ಸಿ.ಚಂದ್ರಶೇಖರ್ ಅವರ ‘ಕಾವೇರಿ ವಿವಾದ ಒಂದು ಐತಿಹಾಸಿಕ ಹಿನ್ನೋಟ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಕುರಿತ ಒಪ್ಪಂದದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ನ್ಯಾಯ ಮಂಡಳಿಗೆ ಸದಸ್ಯರ ಆಯ್ಕೆಯಲ್ಲೂ ನ್ಯಾಯ ಸಿಕ್ಕಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆ, ಮಳೆಯ ಪ್ರಮಾಣ, ಪರಿಸರ ಬದಲಾವಣೆ, ಕೃಷಿಗೆ ಬೇಕಾಗುವ ನೀರಿನ ಲೆಕ್ಕ, ಆರ್ಥಿಕ ನೀತಿ ಹೀಗೆ ಹಲವು ವಿಚಾರಗಳಲ್ಲಿ ರಾಜ್ಯದಿಂದ ಪ್ರಬಲ ವಾದ ಮಂಡನೆಯಾಗಿಲ್ಲ. ಕೇಂದ್ರ ಸರ್ಕಾರ ಕೂಡ ರಾಜ್ಯಕ್ಕೆ ನ್ಯಾಯ ನೀಡುತ್ತಿಲ್ಲ ಎಂದರು.ಕಾಡುಮಲ್ಲೇಶ್ವರ ಗೆಳೆಯರ ಬಳಗ ಅಧ್ಯಕ್ಷ ಬಿ.ಕೆ.ಶಿವರಾಂ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಉಪಸ್ಥಿತರಿದ್ದರು.

₹142 ಕೋಟಿ ವೆಚ್ಚ ಸರಿಯಲ್ಲ: ಕಾವೇರಿ ನೀರಿನ ಬಿಕ್ಕಟ್ಟು ಕುರಿತು ಚರ್ಚಿಸಲು ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದರು. ಕಾವೇರಿ ವಿಚಾರದಲ್ಲಿ ವಾದ ಮಾಡಲು ವಕೀಲರಿಗೆ ₹142 ಕೋಟಿ ವೆಚ್ಚ ಮಾಡಲಾಗಿದೆ. ಈ ಹಣದಲ್ಲಿ ಮತ್ತೊಂದು ಅಣೆಕಟ್ಟೆ ನಿರ್ಮಿಸಬಹುದಾಗಿತ್ತು ಎಂದು ಸಭೆಗೂ ಮುನ್ನ ನಾನು ನೇರವಾಗಿಯೇ ಹೇಳಿದೆ. ಆಗ ಈ ವಿಚಾರವನ್ನು ಮತ್ತೊಮ್ಮೆ ಚರ್ಚಿಸೋಣ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು ಎಂದು ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.

ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ತಗ್ಗಿದ ಅಪಘಾತ: ಈ ವರ್ಷ ಮೇ ವರೆಗೆ 31 ಮಂದಿ ಸಾವು

ಲಾಭದ ಉದ್ದೇಶದಿಂದ ಜೀವಮಾನದಲ್ಲಿ ನಾನು ಯಾವುದೇ ತೀರ್ಪು ನೀಡಿಲ್ಲ. ರೈತರು, ಬಡವರು, ಶ್ರಮಿಕರ ಪರವಾಗಿ ಸದಾ ಕಾಲ ನಿಲ್ಲುತ್ತಿದ್ದೆ. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ತೀರ್ಪುಗಳನ್ನು ನೀಡಿದ ನ್ಯಾಯಮೂರ್ತಿಗಳು ಲೋಕಾಯುಕ್ತರು, ರಾಜ್ಯಪಾಲರಾಗುತ್ತಿದ್ದಾರೆ. ಹೇಗೆ ಇಂತಹ ಹುದ್ದೆಗಳಿಗೆ ನೇಮಕಗೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

click me!