ಕೋಲಾರ: ಅವ್ಯವಸ್ಥೆಗಳ ಅಗರವಾದ ಇಂದಿರಾ ಕ್ಯಾಂಟೀನ್‌, ಸ್ವಚ್ಛತೆ ಇಲ್ಲಿ ಮರೀಚಿಕೆ

By Kannadaprabha News  |  First Published Aug 5, 2023, 10:30 PM IST

ಕೋಲಾರ ನಗರದ ಹಳೇ ಬಸ್‌ ನಿಲ್ದಾಣದಲ್ಲಿವ ಇಂದಿರಾ ಕ್ಯಾಂಟೀನ್‌ ಅವ್ಯವಸ್ಥೆಯ ಆಗರವಾಗಿದೆ. ಸ್ವಚ್ಛತೆ, ನೀರು ಪೂರೈಕೆ, ಶೌಚಾಲಯ ವ್ಯವಸ್ಥೆ ಅದ್ವಾನಗೊಂಡಿವೆ. ಇದನ್ನೆಲ್ಲ ಗಮನಿಸಬೇಕಾದ ನಗರಸಭೆ ಇತ್ತ ಕಡೆ ತಲೆ ಹಾಕುತ್ತಿಲ್ಲ.


ಕೋಲಾರ(ಆ.05):  ಗ್ರಾಹಕರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ಪೂರೈಸುವ ಉದ್ದೇಶದಿಂದ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿತು. ಕಡಿಮೆ ವೆಚ್ಚದ ಆಹಾರಗಳನ್ನು ಪೂರೈಕೆ ಮಾಡುವ ಜೊತೆಗೆ ಕ್ಯಾಟೀನ್‌ನಲ್ಲಿ ಸ್ವಚ್ಛತೆ ಮತ್ತು ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ ಇವುಗಳ ನಿರ್ವಣೆಯನ್ನು ಕಡೆಗಣಿಸಿರುವ ಪರಿಣಾಮ ಗ್ರಾಹಕರು ಪರಿತಪಿಸುವಂತಾಗಿದೆ.

ಇದಕ್ಕೊಂದು ತಾಜಾ ಉದಾಹರಣೆ ನಗರದ ಇಂದಿರಾ ಕ್ಯಾಟೀನ್‌. ನಗರದ ಹಳೇ ಬಸ್‌ ನಿಲ್ದಾಣದಲ್ಲಿವ ಇಂದಿರಾ ಕ್ಯಾಂಟೀನ್‌ ಅವ್ಯವಸ್ಥೆಯ ಆಗರವಾಗಿದೆ. ಸ್ವಚ್ಛತೆ, ನೀರು ಪೂರೈಕೆ, ಶೌಚಾಲಯ ವ್ಯವಸ್ಥೆ ಅದ್ವಾನಗೊಂಡಿವೆ. ಇದನ್ನೆಲ್ಲ ಗಮನಿಸಬೇಕಾದ ನಗರಸಭೆ ಇತ್ತ ಕಡೆ ತಲೆ ಹಾಕುತ್ತಿಲ್ಲ.

Latest Videos

undefined

ಕರ್ನಾಟಕದ ಜನತೆಗೆ ಸಂತಸದ ಸುದ್ದಿ: ಟೊಮೆಟೋ ದರ ಇಳಿಕೆ

ನೀರು ಪೂರೈಕೆಯೇ ದೊಡ್ಡ ಸಮಸ್ಯೆ

ಸಾರ್ವಜನಿಕರ ಅನ್ನದಾಸೋಹ ಕೇಂದ್ರವಾದ ಇಂದಿರಾ ಕ್ಯಾಂಟೀನ್‌ಗೆ ಕನಿಷ್ಠ ಸಮರ್ಪಕ ನೀರು ಪೂರೈಕೆ ಮಾಡುತ್ತಿಲ್ಲ. ಶೌಚಾಲಯದಲ್ಲಿ ನೀರಿಲ್ಲದೆ ಗಬ್ಬುನಾರುತ್ತಿವೆ. ನಾಲ್ಕೈದು ತಿಂಗಳಿನಿಂದ ಇಂದಿರಾ ಕ್ಯಾಂಟೀನ್‌ ಆವರಣದಲ್ಲಿ ಅಳವಡಿಸಿರುವ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ. ಹೀಗಾಗಿ ಪ್ರತಿದಿನ ಕ್ಯಾಂಟೀನ್‌ ಬರುವ ಗ್ರಾಹಕರಿಗಾಗಿ 15 ಕ್ಯಾನ್‌ ನೀರು ಖರೀದಿಸಬೇಕಾಗಿದೆ. ಕ್ಯಾಂಟಿನ್‌ ಆವರಣದಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಮಳೆ ಬಂದರೆ ಕ್ಯಾಂಟೀನ್‌ ಕಟ್ಟಡ ಸೋರುತ್ತದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಂಬಂಧಪಟ್ಟಅಧಿಕಾರಿಗಳಾಗಲಿ ಅಥವಾ ಕ್ಷೇತ್ರದ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳದಿರುವುದು ವಿಪರ್ಯಾಸ.

ಇವರೆಲ್ಲ ಕ್ಯಾಟೀನ್‌ ಗ್ರಾಹಕರು

ಆದರೆ ನಗರಸಭೆಯ ಪೌರಕಾರ್ಮಿಕರು ದಿನ ನಿತ್ಯ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಇಂದಿರಾ ಕ್ಯಾಂಟೀನ್‌ಗೆ ಬರುತ್ತಾರೆ. ಹಳೇ ಬಸ್‌ ನಿಲ್ದಾಣದ ಬೀದಿಬದಿ ವ್ಯಾಪಾರಿಗಳು, ಕಾಲೇಜು ವಿದ್ಯಾರ್ಥಿಗಳು, ಬಡಕೂಲಿ ಕಾರ್ಮಿಕರು ಇಂದಿರಾ ಕ್ಯಾಂಟೀನ್‌ಗೆ ಆಗಮಿಸುತ್ತಾರೆ. ಅಲ್ಲದೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್‌ ಕಾರ್ಯಕ್ರಮಗಳಿಗೆ ಊಟ ತಿಂಡಿ ಪೂರೈಕೆ ವ್ಯವಸ್ಥೆಗಳಿಗೆ ಬಹುತೇಕ ಇಂದಿರಾ ಕ್ಯಾಂಟೀನ್‌ಗೆ ಆದೇಶ ನೀಡಲಾಗುತ್ತಿದ್ದರೂ ಸಹ ಇಲ್ಲಿನ ಸಮಸ್ಯೆಗಳನ್ನು ಮಾತ್ರ ಪರಿಹರಿಸಲು ಯಾರೂ ಮುಂದಾಗುತ್ತಿಲ್ಲ.

ಈ ಸಂಬಂಧವಾಗಿ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ದೂರಿದರೂ ಸಹ ಪ್ರಯೋಜನವಿಲ್ಲವಾಗಿಲ್ಲ ಎಂಬುವುದು ಕ್ಯಾಂಟೀನ್‌ ಸಿಬ್ಬಂದಿ ಅಳಲು. ಕೆಲವು ಸಿಬ್ಬಂದಿಗೆ ಗುತ್ತಿಗೆದಾರ 5 ತಿಂಗಳ ವೇತನ ಬಾಕಿ ಉಳಿಸಿಕೊಂಡಿದ್ದಾನೆ ಎನ್ನಲಾಗಿದೆ.

ಇಂದಿರಾ ಕ್ಯಾಂಟೀನ್‌ ಮೆನು ಪ್ರಕಾರವೇ ಮಧ್ಯಾಹ್ನ ಮತ್ತು ರಾತ್ರಿ ಊಟ, ಬೆಳಗ್ಗೆ ತಿಂಡಿಗಳನ್ನು ಸಿದ್ಧಪಡಿಸಿ ನಿಗದಿಪಡಿಸಿದ ದರಗಳಲ್ಲಿಯೇ ನೀಡಲಾಗುತ್ತಿದೆ. ಇದರಲ್ಲಿ ಯಾವೂದೇ ಲೋಪಗಳಿಲ್ಲ. ಆದರೆ ಮೂಲಭೂತ ಸೌಲಭ್ಯಗಳಿಂದೆ ಗ್ರಾಹಕರು ವಂಚಿತರಾಗಿದ್ದಾರೆ. ಈ ಸಂಬಂಧವಾಗಿ ಜಿಲ್ಲಾಧಿಕಾರಿಗಳು ಒಮ್ಮೆ ಇಂದಿರಾ ಕ್ಯಾಂಟೀನ್‌ಗೆ ಒಮ್ಮೆ ಭೇಟಿ ನೀಡಿ ಪರಿಶೀಲಿಸುವಂತೆ ಗ್ರಾಹಕರು ಮನವಿ ಮಾಡಿದ್ದಾರೆ.

click me!