ಜಾತಿ, ಭೀತಿ ಇಲ್ಲದ ರಾಷ್ಟ್ರ ನಿರ್ಮಾಣಕ್ಕೆ ಮನಗೂಳಿ ಕರೆ

By Web DeskFirst Published Aug 15, 2018, 5:43 PM IST
Highlights

ಜಾತಿ, ಭೀತಿ ಇಲ್ಲದ ನಾಡ ಕಟ್ಟಲು ಶ್ರಮಿಸೋಣ! ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಕರೆ! 72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ! ಜಿಲ್ಲಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ! ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಮನಗೂಳಿ ಕರೆ

ವಿಜಯಪುರ(ಆ.15): ಜಾತಿ, ಭೀತಿಯಿಲ್ಲದ ಸುಖ, ಶಾಂತಿಯ ಸಮೃದ್ಧ ನಾಡು ಕಟ್ಟಲು ಎಲ್ಲರೂ ಕಂಕಣಬದ್ಧರಾಗಬೇಕಿದೆ ಎಂದು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ೭೨ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನದಿಂದ ಭವ್ಯ, ಬಲಾಢ್ಯ,ಸಮೃದ್ಧ ರಾಷ್ಟ್ರ ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕಿದೆ. ದೇಶದ ಗಡಿ ಕಾಯುವ ಯೋಧರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ. ದೇಶದ ಗಡಿ ಕಾಯುವ ಯೋಧ ಹಾಗೂ ಜನತೆಗೆ ಅನ್ನ ನೀಡುವ ರೈತನ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಮಹಿಳೆಯರನ್ನು ಗೌರವಿಸಿ:

ಮಹತ್ಮಾ ಜ್ಯೋತಿಬಾ ಫುಲೆ ಅವರು ಹೇಳಿದಂತೆ ನಾಡಿನ ಮಹಿಳೆಯರಿಗೆ ನಾವು ಸಲ್ಲಿಸುವ ಗೌರವ ಭಾರತ ಮಾತೆಗೇ ಗೌರವ ಸಲ್ಲಿಸಿದಂತೆ ಆಗುತ್ತದೆ. ಆದ್ದರಿಂದ ಎಲ್ಲರೂ ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳಿದರು.

ವಿಜಯಪುರ  ಜಿಲ್ಲೆ ಬರೀ ಶರಣರ ನಾಡು ಅಷ್ಟೇಯಲ್ಲ. ವೀರ ಯೋಧರ,ಸ್ವಾತಂತ್ರ್ಯ ಸೇನಾನಿಗಳ ವೀರತ್ವದ ನಾಡಾಗಿದೆ. ಇದು ನಮಗೆ ಹೆಮ್ಮೆಯ ಸಂಗತಿ. ಮೋರಟಗಿಯ ಮಲಕಾಜಪ್ಪ ಶೀಲವಂತ, ಹೊನ್ನಳ್ಳಿಯ ಸಿದ್ರಾಮಯ್ಯ, ಢವಳಗಿಯ ನಾಗೇಂದ್ರಪ್ಪ ಕಪಟಕರ, ಮುದ್ದೇಬಿಹಾಳದ ರೇವಣಸಿದ್ದಯ್ಯ ಲದ್ದಿಮಠ, ಕಲಗುರ್ಕಿಯ ಬಸಪ್ಪಣ್ಣ ಶಿರೂರ, ಸುಗಂಧಿ ಮುರಿಗೆಪ್ಪ, ಡಾ. ಫ.ಗು. ಹಳಕಟ್ಟಿ, ಬಂಧನಾಳ ಶಿವಯೋಗಿಗಳು ಹಾಗೂ ಹೈದ್ರಾಬಾದ್‌ನ ನವಾಬನ ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಸಿಂದಗಿಯ ರಮಾನಂದ ತೀರ್ಥರು, ಸಿಂದಗಿ ತಾಲೂಕಿನ ಚಿಕ್ಕರೂಗಿಯ ೨೩ ಜನ ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಇನ್ನೂ ಹಲವಾರು ಸ್ವಾತಂತ್ರ್ಯ ವೀರರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಅವರೆಲ್ಲರ ತ್ಯಾಗ, ಬಲಿದಾನ, ಧೈರ್ಯ ಮತ್ತು ದೇಶಪ್ರೇಮವನ್ನು  ಇಂದಿನ ಯುವ ಜನಾಂಗ ಪಾಲಿಸಿಕೊಂಡು ಬರಬೇಕು ಎಂದು ಹೇಳಿದರು.

ಐಟಿಬಿಟಿ, ಕೈಗಾರಿಕೆ, ವಾಣಿಜ್ಯ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಇತ್ಯಾದಿ ಕ್ಷೇತ್ರಗಳಲ್ಲಿ ಭಾರತ ಪ್ರಬಲ ರಾಷ್ಟ್ರವಾಗಿ ಬೆಳೆದಿದೆ. ಇದು ಹೆಮ್ಮೆ ಪಡುವ ವಿಷಯ ಎಂದರು.

ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ವಿದೇಶಿಗರು ಹುರುಪಿನಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ವೀಕ್ಷಿಸಿ ಕೈಯಲ್ಲಿ ಭಾರತ ದೇಶದ ಧ್ವಜ ಹಿಡಿದು ಅಭಿಮಾನ ಮೆರೆದರು. ಇದೇ ಸಂದಭರ್ದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಅನಂತರ ವಿವಿಧ ಶಾಲಾ ಮಕ್ಕಳಿಂದ ದೇಶ ಭಕ್ತಿ ಗೀತೆಗಳು, ಸಾಮೂಹಿಕ ನೃತ್ಯ ನಡೆದವು. 

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಸ ಯತ್ನಾಳ, ನಾಗಠಾಣ ಮೀಸಲು ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ನೀಲಮ್ಮ ಮೇಟಿ, ಮಹಾನಗರಪಾಲಿಕೆ ಮಹಾ ಪೌರರಾದ ಶ್ರೀದೇವಿ ಲೋಗಾಂವಿ, ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

click me!