ಬೆಂಗಳೂರಲ್ಲಿ ಸಿಸಿಬಿ ಭರ್ಜರಿ ಕಾರ್ಯಾಚರಣೆ, Airtel ನೀಡಿದ ಒಂದೇ ಒಂದು ದೂರಿನಿಂದ ತಪ್ಪಿತು ಭಾರೀ ದುರಂತಗಳು

Published : Oct 22, 2026, 04:03 PM IST
Illegal SIM box network in Bengaluru

ಸಾರಾಂಶ

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಸೈಬರ್ ಕ್ರೈಂ ಪೊಲೀಸರು ದಾಳಿ ನಡೆಸಿ ಅಕ್ರಮ ಸಿಮ್ ಬಾಕ್ಸ್ ಜಾಲವನ್ನು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ 10ಕ್ಕೂ ಹೆಚ್ಚು ಸಿಮ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದು, ಮಹಾರಾಷ್ಟ್ರ ಮೂಲದ ನಾಲ್ವರನ್ನು ಬಂಧಿಸಲಾಗಿದೆ. ಈ ಜಾಲಕ್ಕೂ ಸೈಬರ್ ವಂಚನೆ ಹಾಗೂ ಡಿಜಿಟಲ್ ಅರೆಸ್ಟ್‌ಗೂ ನಂಟಿರುವ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು: ನಗರದ ವೈಟ್‌ಫೀಲ್ಡ್‌ನಲ್ಲಿ ಸೈಬರ್ ಕ್ರೈಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮುಂದೆ ಆಗಬಹುದಾಗಿದ್ದ ದುರಂತಗಳನ್ನ ತಪ್ಪಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ವೈಟ್‌ಫೀಲ್ಡ್‌ನಲ್ಲಿ ಅಕ್ರಮ ಸಿಮ್ ಜಾಲ

ಅಕ್ರಮ ಸಿಮ್ ಜಾಲದ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸ್ ಅಧಿಕಾರಿಗಳು..ಕಾಡುಗೋಡಿ, ಪಟ್ಟಂದೂರು ಅಗ್ರಹಾರದಲ್ಲಿ ದೊಡ್ಡ ಬೇಟೆ ಆಡಿದ್ದಾರೆ. ಎರಡು ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ. ಈ ವೇಳೆ ಒಟ್ಟು 10ಕ್ಕೂ ಹೆಚ್ಚು ಸಿಮ್ ಬಾಕ್ಸ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕಾರ್ಯಚರಣೆಯಲ್ಲಿ ಕರ್ನಾಟಕ ಸೈಬರ್ ಕಮಾಂಡ್ ಸೆಂಟರ್ ಹಾಗೂ ಟೆಲಿಕಾಂ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಅಧಿಕಾರಿಗಳ ಹಠಾತ್ ದಾಳಿಯಲ್ಲಿ ಕಾಡುಗೋಡಿಯಲ್ಲಿ 6 ಸಿಮ್ ಬಾಕ್ಸ್ ಸಾಧನಗಳು ಸೀಜ್ ಮಾಡಲಾಗಿದೆ. ಇನ್ನು, ಪಟ್ಟಂದೂರು ಅಗ್ರಹಾರದಲ್ಲಿ 4 ಸಿಮ್ ಬಾಕ್ಸ್ ಸಾಧನಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

32 ಸಿಮ್ ಸ್ಲಾಟ್‌ಗಳು

ವಶಕ್ಕೆ ಪಡೆಯಲಾಗಿರುವ ಪ್ರತಿ ಬಾಕ್ಸ್‌ನಲ್ಲೂ ಬರೋಬ್ಬರಿ 32 ಸಿಮ್ ಸ್ಲಾಟ್‌ಗಳು ಇರೋದು ಬೆಳಕಿಗೆ ಬಂದಿದೆ. ಎರಡೂ ಸ್ಥಳಗಳಲ್ಲೂ ಸುಮಾರು 320 ಸಿಮ್ ಸಂಪರ್ಕಗಳ ಸಾಮರ್ಥ್ಯ ಇದೆ. ಏರ್‌ಟೆಲ್ ಸಿಮ್‌ಗಳ ಅನಧಿಕೃತ ಬಳಕೆ ಆರೋಪ ಕೇಳಿಬಂದಿದೆ. ಈ ಸಂಬಂಧ ಭಾರತಿ ಏರ್‌ಟೆಲ್ ಸಂಸ್ಥೆಯು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುವಾಗಿತ್ತು. ಮೊದಲಿಗೆ ಮಹಾರಾಷ್ಟ್ರದ ತಿರೋಡಾದಿಂದ ಇ-ಸಿಮ್ ಪೂರೈಕೆ ಜಾಲದ ಸುಳಿವು ಸಿಕ್ಕಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಲ್ವರು ಆರೋಪಿಗಳ ಬಂಧಿಸಲಾಗಿದೆ. ಸಿಮ್ ಕಾರ್ಡ್‌ಗಳನ್ನು ಇ-ಸಿಮ್ ಪ್ರೊಫೈಲ್‌ಗಳಾಗಿ ಪರಿವರ್ತಿಸಿ ಬಳಕೆ ಮಾಡುತ್ತಿದ್ದರೆಂಬ ಆರೋಪ ಬಂಧಿತರ ಮೇಲೆ ಇದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

ಮತ್ತೊಂದು ಅನುಮಾನ

ಅಕ್ರಮ ಸಿಮ್‌ಗಳ ಜಾಲ ಬಯಲಾಗುತ್ತಿದ್ದಂತೆಯೇ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಅಕ್ರಮವಾಗಿ ತಯಾರಿಸಿದ ಎಲ್ಲಾ ಸಿಮ್‌ಗಳು ಸೈಬರ್ ವಂಚನೆ ಪ್ರಕರಣಗಳಲ್ಲಿ ಬಳಸಲಾಗುತ್ತಿತ್ತಾ ಎಂಬ ಅನುಮಾನ ಶುರುವಾಗಿದೆ. ಡಿಜಿಟಲ್ ಅರೆಸ್ಟ್ ವಂಚನೆಗೂ ಸಿಮ್ ಬಾಕ್ಸ್ ಜಾಲಕ್ಕೂ ಸಂಪರ್ಕವಿದೆಯೇ? ಇತರೆ ಸೈಬರ್ ವಂಚನೆ ಪ್ರಕರಣಗಳ ನಂಟಿನ ಬಗ್ಗೆಯೂ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಸೈಬರ್ ವಂಚನೆ ಜಾಲವು ದೇಶಾದ್ಯಂತ ಹರಡಿರುವ ಸಾಧ್ಯತೆ ಇದೆ. ಇಂಥ ನಕಲಿ ಸಿಮ್‌ಗಳನ್ನ ಬಳಸಿ ನೂರಾರು ಕೋಟಿ ರೂಪಾಯಿ ವಂಚಿಸಿರಬಹುದು ಎನ್ನಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ. ವಶಪಡಿಸಿಕೊಂಡ ಸಾಧನಗಳ ತಾಂತ್ರಿಕ ಪರಿಶೀಲನೆಯನ್ನೂ ಮುಂದುವರಿಸಿದ್ದು, ಜಾಲದ ಹಿಂದಿರುವ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

PREV
Read more Articles on
click me!

Recommended Stories

ಜೆಪಿ ನಗರದಿಂದ ಮೈಸೂರು ರಸ್ತೆ ಮಾರ್ಗ, 13,409 ಚದರ ಮೀಟರ್ ಹೆಚ್ಚುವರಿ ಜಾಗ ಸ್ವಾಧೀನಕ್ಕೆ BMRCL ಸಿದ್ಧತೆ
ಟ್ರೆಂಡ್‌ಗಳನ್ನು ಫಾಲೋ ಮಾಡಬೇಡಿ, ನೀವೇ ಟ್ರೆಂಡ್‌ಸೆಟರ್‌ಗಳಾಗಿ! ಯುವಜನತೆಗೆ ಶ್ರೀಶ್ರೀ ರವಿಶಂಕರ್ ಕಿವಿಮಾತು