ಬೆಳಗಾವಿಯಲ್ಲಿ ಮರಳು ಕೊಳ್ಳೆ ಹೊಡೆಯುವ ದುರುಳರು

By Suvarna NewsFirst Published Dec 8, 2019, 11:50 AM IST
Highlights

ಅರಣ್ಯ ಪ್ರದೇಶದ ಖಾಲಿ ಜಾಗದಲ್ಲಿ ಅಕ್ರಮ ಮರಳು ದಂಧೆ|ಕಳಪೆ ಗುಣಮಟ್ಟದ ಮರಳು ಪೂರೈಕೆ| ಪ್ರತಿದಿನ ಸರಿಸುಮಾರು 20 ರಿಂದ 25 ಟ್ರ್ಯಾಕ್ಟರ್ ಮಣ್ಣು ಮಿಶ್ರಿತ ಮರಳನ್ನು ದಂಧೆಕೋರರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ|

ಬೆಳಗಾವಿ(ಡಿ.08): ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯಿಂದಾಗಿ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಜತೆಗೆ ಹಳ್ಳ, ನದಿ ಮತ್ತು ಫಿಲ್ಟರ್ ಅಕ್ರಮ ಮರಳು ದಂಧೆ ಇದೀಗ ಅರಣ್ಯ ಪ್ರದೇಶಕ್ಕೂ ಲಗ್ಗೆ ಇಟ್ಟಿದೆ. ಹೀಗಾಗಿ ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ದಿನದಿಂದ ದಿನಕ್ಕೆ ಮರಳಿನ ಬೆಲೆ ಗಗನಕ್ಕೇರುತ್ತಿದೆ. 

ತಾಲೂಕಿನ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹುಲ್ಯಾನೂರು, ಬುಡ್ರ್ಯಾನೂರು ಸೇರಿದಂತೆ ಇನ್ನಿತರ ಗ್ರಾಮಗಳ ಹತ್ತಿರದ ಅರಣ್ಯ ಪ್ರದೇಶದ ಖಾಲಿ ಜಾಗದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ವಿಷಯವಾಗಿ ಸಂಬಂಧಪಟ್ಟವರ ಗಮನಕ್ಕೆ ಇದ್ದರೂ ಯಾವುದೇ ಕ್ರಮಕೈಗೊಳ್ಳದೇ ಕೈ ಚೆಲ್ಲಿ ಕುಳಿತಿರುವುದು ಮಾತ್ರ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತಿದಿನ ಸರಿಸುಮಾರು 20 ರಿಂದ 25 ಟ್ರ್ಯಾಕ್ಟರ್ ಮಣ್ಣು ಮಿಶ್ರಿತ ಮರಳನ್ನು ದಂಧೆಕೋರರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಭೂ ತಾಯಿ ಒಡಲು ಬಗಿದು ಹಣದ ದಾಹ ತೀರಿಸಿಕೊಳ್ಳುತ್ತಿರುವ ಖದೀಮರ ವಿರುದ್ಧ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ. 

ಅಕ್ರಮ ಮರಳು ದಂಧೆ ನಿರಾತಂಕ?: 

ಮಳೆಗಾಲ ಪ್ರಾರಂಭವಾದರೆ ನದಿ, ಹಳ್ಳಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಉದ್ದೇಶದಿಂದ ಮರಳು ದಂಧೆಕೋರರು ನದಿ, ಹಳ್ಳದ ದಡಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಬೆಳಗಾವಿ ಹಾಗೂ ಖಾನಾಪುರ ಸೇರಿದಂತೆ ಇನ್ನಿತರ ತಾಲೂಕುಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಹಿಂದೆ ಕೆಲವರ ಸಹಕಾರ ಇದೆ ಎಂಬ ಗುಮಾನಿ ಕೂಡ ವ್ಯಾಪಕವಾಗಿದೆ. 
ಮತ್ತೊಂದೆಡೆ ಒಂದು ಲಾರಿ ಮರಳಿಗೆ ಕನಿಷ್ಠ 20 ಸಾವಿರದಿಂದ 28 ಸಾವಿರ ಹಾಗೂ ಒಂದು ಟ್ರ್ಯಾಕ್ಟರ್ ಮರಳಿಗೆ ಕನಿಷ್ಠ 4.5ಸಾವಿರದಿಂದ 7 ಸಾವಿರವರೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಕೂಡ ಅಕ್ರಮವಾಗಿದ್ದು, ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. 

ಕಳಪೆ ಗುಣಮಟ್ಟದ ಮರಳು ಪೂರೈಕೆ: 

ಅಕ್ರಮ ಮರಳು ದಂಧೆಕೋರರು ಅರಣ್ಯದಲ್ಲಿನ ತೆಗ್ಗು ಪ್ರದೇಶದಲ್ಲಿ ಮಳೆ ನೀರು ಹರಿದು ಬಂದಂತಹ ಮರಳನ್ನೇ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ. ಅದು ಕೂಡ ಹೆಚ್ಚಿನ ದರಕ್ಕೆ ಮಣ್ಣು ಮಿಶ್ರಿತ ಮರಳು ಸಾಗಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮರಳಿನಿಂದ ಮನೆಗಳನ್ನು ನಿರ್ಮಾಣ ಮಾಡುವುದಾಗಲಿ ಅಥವಾ ಗಿಲಾವ್ ಮಾಡಿದಲ್ಲಿ ಬಿರುಕು ಕಾಣಿಸಿಕೊಳ್ಳುತ್ತವೆ. ಇದರಿಂದ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಸೂರು ನಿರ್ಮಿಸಿಕೊಳ್ಳುತ್ತಿರುವ ಸಾಮಾನ್ಯಜನರು ಗುಣಮಟ್ಟದ ಮರಳು ಲಭ್ಯವಾಗದೆ ಮಣ್ಣು ಮಿಶ್ರಿತ ಮರಳನ್ನೇ ಪಡೆದು ಮನೆಗ ನಿರ್ಮಿಸುತ್ತಿದ್ದಾರೆ. 

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಅರಣ್ಯ ಪ್ರದೇಶದಲ್ಲಿ ಅಷ್ಟೆ ಅಲ್ಲ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಅವಕಾಶ ಇಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ. 
 

click me!