ಕೊಪ್ಪಳ: ಮರಳು ದಂಧೆಗಾಗಿ ತೆರೆದ ಬ್ಯಾರೇಜ್ ಗೇಟ್‌ಗಳು, 40 ಗ್ರಾಮಗಳ ಆಸರೆ ಹಿರೇಹಳ್ಳ ಖಾಲಿ, ಕುಡಿಯುವ ನೀರಿಗೆ ಕುತ್ತು!

Published : Oct 27, 2026, 01:28 PM IST
Hirehalla barrage gate

ಸಾರಾಂಶ

ಕೊಪ್ಪಳದ ಹಿರೇಹಳ್ಳದ ಆರು ಬ್ಯಾರೇಜ್‌ಗಳಿಗೆ ಸಕಾಲದಲ್ಲಿ ಗೇಟ್ ಅಳವಡಿಸದ ಕಾರಣ 30-40 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಅಂತರ್ಜಲ ಕುಸಿತ ಉಂಟಾಗಿದೆ. ಮರಳು ದಂಧೆಕೋರರ ಹಿತಾಸಕ್ತಿಯಿಂದಲೇ ಗೇಟ್ ಅಳವಡಿಕೆ ವಿಳಂಬವಾಗಿದೆ ಎಂಬ ಆರೋಪವಿದ್ದು, ಮಳೆಗಾಲ ಮುಗಿಯುವ ಹಂತದಲ್ಲಿ ಈಗ ಗೇಟ್ ಅಳವಡಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ: ಸೋಮರಡ್ಡಿ ಅಳವಂಡಿ

ಕೊಪ್ಪಳ: ಈ ವರ್ಷ ಮಳೆ ಕಡಿಮೆಯಾಗುವ ಮುನ್ಸೂಚನೆಯನ್ನು ಏಪ್ರಿಲ್‌ನಲ್ಲಿಯೇ ಹವಾಮಾನ ಇಲಾಖೆ ನೀಡಿತ್ತು. ಎಲ್‌ನಿನೊ ಪರಿಣಾಮದಿಂದ ಮಳೆಯ ಕೊರತೆಯಾಗುವ ಆತಂಕ ಇತ್ತು. ಆದರೂ ಹಿರೇಹಳ್ಳದ ಉದ್ದಕ್ಕೂ ಇರುವ ಆರು ಬ್ಯಾರೇಜ್‌ಗಳ ಗೇಟ್‌ಗಳನ್ನು ಸಕಾಲದಲ್ಲಿ ಅಳವಡಿಸದಿರುವುದರಿಂದ ಆಗೊಮ್ಮೆ ಈಗೊಮ್ಮೆ ಸುರಿದ ಮಳೆಯ ನೀರನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಪರಿಣಾಮ, 30ರಿಂದ 40 ಗ್ರಾಮಗಳ ಕುಡಿಯುವ ನೀರಿನ ಭದ್ರತೆಗೆ ಆತಂಕ ಎದುರಾಗಿದ್ದು, ಅಂತರ್ಜಲ ಕುಸಿತದಿಂದ ಸಾವಿರಾರು ಎಕರೆ ಕೃಷಿ ಭೂಮಿಯ ನೀರಾವರಿಗೂ ಕುತ್ತು ಬಂದಿದೆ.

ದುರಂತವೆಂದರೆ, ಮಳೆಗಾಲದಲ್ಲಿಯೇ ಗೇಟ್‌ಗಳನ್ನು ಅಳವಡಿಸಬೇಕಿದ್ದ ಅಧಿಕಾರಿಗಳು ಈಗ ಮಳೆಗಾಲ ಮುಗಿಯುವ ಹಂತದಲ್ಲಿ ಗೇಟ್‌ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ನೀರು ಸಂಗ್ರಹಿಸುವ ಅವಕಾಶ ಕೈತಪ್ಪಿದಂತಾಗಿದೆ.

ಆರು ಬ್ಯಾರೇಜ್‌ಗಳಿಂದ ಜೀವಕಳೆ:

ಹಿರೇಹಳ್ಳದ ನೀರನ್ನು ಸಂಗ್ರಹಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ನೆರವಾಗುವ ಉದ್ದೇಶದಿಂದ ಯತ್ನಟ್ಟಿ, ಹಿರೇಸಿಂದೋಗಿ, ಕೋಳೂರು, ಕಾಟ್ರಳ್ಳಿ, ಬೂದಿಹಾಳ ಹಾಗೂ ಡೊಂಬರಳ್ಳಿ ಗ್ರಾಮಗಳ ಬಳಿ ಆರು ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದೆ. ಇನ್ನೂ ಮೂರು ಬ್ಯಾರೇಜ್‌ಗಳ ನಿರ್ಮಾಣವಾಗಬೇಕಿದೆ.

ಒಂದು ಕಾಲದಲ್ಲಿ ನಶಿಸುವ ಹಂತ ತಲುಪಿದ್ದ ಹಿರೇಹಳ್ಳವನ್ನು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಕಾಳಜಿ ಮತ್ತು ಮಾರ್ಗದರ್ಶನದಲ್ಲಿ ಸುಮಾರು 26 ಕಿ.ಮೀ. ಉದ್ದಕ್ಕೆ ಸ್ವಚ್ಛಗೊಳಿಸಿ ಪುನಶ್ಚೇತನಗೊಳಿಸಲಾಗಿದೆ. ಇದರೊಂದಿಗೆ ನಿರ್ಮಿಸಲಾದ ಬ್ಯಾರೇಜ್‌ಗಳು ಸುತ್ತಮುತ್ತಲಿನ ಗ್ರಾಮಗಳ ಜಲಮೂಲಗಳಿಗೆ ಆಸರೆಯಾಗಿವೆ.

ಬ್ಯಾರೇಜ್‌ಗಳಲ್ಲಿ ನೀರು ಸಂಗ್ರಹವಾಗುವುದರಿಂದ ಭಾಗ್ಯನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ತಗ್ಗುವ ಜತೆಗೆ ಅಂತರ್ಜಲ ಮಟ್ಟವೂ ಸುಧಾರಿಸುತ್ತದೆ. ಬೇಸಿಗೆಯಲ್ಲಿಯೂ ಹಿರೇಹಳ್ಳದಲ್ಲಿ ನೀರು ಉಳಿಯುವುದರಿಂದ ಪ್ರಾಣಿ-ಪಕ್ಷಿಗಳಿಗೂ ಆಸರೆಯಾಗುತ್ತದೆ. ರೈತರು ಮಳೆಯನ್ನೇ ಸಂಪೂರ್ಣವಾಗಿ ಅವಲಂಬಿಸದೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ನೀರಿನ ಹರಿವಿಗೆ ಅನುಗುಣವಾಗಿ ಗೇಟ್‌ಗಳನ್ನು ತೆರೆದಿಟ್ಟು, ಮಳೆ ಕಡಿಮೆಯಾದ ಬಳಿಕ ನೀರು ಸಂಗ್ರಹಿಸುವ ಉದ್ದೇಶದಿಂದ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಆದರೆ, ಈ ಬಾರಿ ಆರು ಬ್ಯಾರೇಜ್‌ಗಳ ಗೇಟ್‌ಗಳನ್ನು ಸಕಾಲದಲ್ಲಿ ಅಳವಡಿಸದಿರುವುದು ನೀರಿನ ಸಂಗ್ರಹಕ್ಕೆ ಅಡ್ಡಿಯಾಗಿದೆ.

ಮರಳು ದಂಧೆಯ ಕರಾಮತ್ತು?:

ಹಿರೇಹಳ್ಳದಲ್ಲಿ ಮರಳು ದಂಧೆ ನಡೆಸುವವರ ಹಿತಾಸಕ್ತಿಯಿಂದಲೇ ಬ್ಯಾರೇಜ್‌ಗಳ ಗೇಟ್‌ ಅಳವಡಿಕೆಗೆ ತಡೆಯಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಮರಳು ಸಾಗಣೆ ಹಾಗೂ ಅಕ್ರಮ ಚಟುವಟಿಕೆಗೆ ಅನುಕೂಲವಾಗುವಂತೆ ಗೇಟ್‌ಗಳನ್ನು ಅಳವಡಿಸದಂತೆ ಒತ್ತಡ ಹೇರಲಾಗಿದೆ ಎಂಬ ಆರೋಪವೂ ಇದೆ. ಜನಪ್ರತಿನಿಧಿಗಳ ಬೆಂಬಲದಿಂದಲೇ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಮೌನವಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳೀಯರ ಆರೋಪ ಹಾಗೂ ಗೇಟ್‌ ಅಳವಡಿಸದಿರುವುದಕ್ಕೆ ಕಾರಣವೇನು ಎನ್ನುವ ಕುರಿತು ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆ ಬಹಿರಂಗಪಡಿಸಬೇಕಿದೆ. ಸಾರ್ವಜನಿಕರ ಕುಡಿಯುವ ನೀರು ಮತ್ತು ರೈತರ ಹಿತಾಸಕ್ತಿಗಿಂತ ಮರಳು ದಂಧೆಗೆ ಆದ್ಯತೆ ನೀಡಲಾಗಿದೆಯೇ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಭಾಗ್ಯನಗರದ 10 ಬೋರ್‌ವೆಲ್‌ಗಳು ಸ್ಥಗಿತ:

ಬ್ಯಾರೇಜ್‌ಗಳಲ್ಲಿ ನೀರು ಸಂಗ್ರಹವಾಗದ ಪರಿಣಾಮ ಭಾಗ್ಯನಗರದ ಸುಮಾರು 10 ಬೋರ್‌ವೆಲ್‌ಗಳು ನೀರಿಲ್ಲದೆ ಸ್ಥಗಿತಗೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹಿರೇಹಳ್ಳದ ಅಕ್ಕಪಕ್ಕದ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಮಳೆಗಾಲದಲ್ಲಿಯೇ ಕಾಣಿಸಿಕೊಂಡಿದೆ. ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕ ಎದುರಾಗಿದೆ.

ಬ್ಯಾರೇಜ್‌ಗಳನ್ನು ನಂಬಿಕೊಂಡು ಕೃಷಿ ಮಾಡುತ್ತಿದ್ದ ರೈತರೂ ಕಂಗಾಲಾಗಿದ್ದಾರೆ. ಈಗಾಗಲೇ ಮಳೆಯ ಕೊರತೆಯ ಆತಂಕ ಎದುರಿಸುತ್ತಿರುವ ರೈತರಿಗೆ ಸಂಗ್ರಹಿಸಬಹುದಾಗಿದ್ದ ನೀರೂ ಸಿಗದಂತಾಗಿದೆ. ಗೇಟ್‌ಗಳನ್ನು ಮೊದಲೇ ಅಳವಡಿಸಿದ್ದರೆ ಮಳೆಯ ನೀರನ್ನು ಹಿಡಿದಿಟ್ಟುಕೊಂಡು ಅಂತರ್ಜಲ ವೃದ್ಧಿಗೆ ನೆರವಾಗುತ್ತಿತ್ತು ಎಂಬುದು ರೈತರ ಅಭಿಪ್ರಾಯ.

ಈಗ ಗೇಟ್‌ ಅಳವಡಿಸಿ ಏನು ಪ್ರಯೋಜನ?:

ರೈತರು ಹಾಗೂ ಸ್ಥಳೀಯರು ಪ್ರಶ್ನಿಸಿದ ಬಳಿಕ ಇದೀಗ ಬ್ಯಾರೇಜ್‌ಗಳ ಗೇಟ್‌ ಅಳವಡಿಸುವ ಕಾರ್ಯ ಆರಂಭವಾಗಿದೆ. ಆದರೆ, ಮಳೆಗಾಲ ಮುಗಿಯುವ ಹಂತದಲ್ಲಿದ್ದು, ಈ ವರ್ಷ ಮಳೆಯೂ ಕಡಿಮೆಯಾಗಿರುವುದರಿಂದ ಈಗ ಗೇಟ್‌ ಅಳವಡಿಸಿ ನೀರು ಸಂಗ್ರಹಿಸುವುದು ಎಷ್ಟರಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ.

ಮುಂದಿನ ದಿನಗಳಲ್ಲಿ ಮಳೆಯಾದರೆ ಮಾತ್ರ ನೀರು ಸಂಗ್ರಹವಾಗಬಹುದು. ಇಲ್ಲದಿದ್ದರೆ 30ರಿಂದ 40 ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಬ್ಯಾರೇಜ್‌ಗಳ ಗೇಟ್‌ ಅಳವಡಿಕೆ ಪೂರ್ಣಗೊಳಿಸುವ ಜತೆಗೆ ಹಿರೇಹಳ್ಳದಲ್ಲಿ ಮರಳು ದಂಧೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.

ಮಳೆಗಾಲದಲ್ಲಿಯೇ ಗೇಟ್‌ಗಳನ್ನು ಅಳವಡಿಸಬೇಕಾಗಿತ್ತು. ಆದರೆ, ಈಗ ಅಳವಡಿಸುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಗೇಟ್‌ ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ.

ಹನುಮಗೌಡ ಸಾಲಬಾವಿ, ಗೇಟ್‌ ನಿರ್ವಹಣೆ ಗುತ್ತಿಗೆದಾರ

ಮೊದಲೇ ಗೇಟ್‌ಗಳನ್ನು ಅಳವಡಿಸಿದ್ದರೆ ನೀರು ಸಂಗ್ರಹವಾಗಿ ಅನುಕೂಲವಾಗುತ್ತಿತ್ತು. ಈಗ ಗೇಟ್‌ ಅಳವಡಿಸಿದರೆ ಏನು ಪ್ರಯೋಜನ? ಇನ್ನು ಮುಂದೆ ಮಳೆಯಾಗಿ ನೀರು ಬಂದರೆ ಮಾತ್ರ ಅನುಕೂಲವಾಗಲಿದೆ.

ಗವಿಸಿದ್ದಪ್ಪ ಕಮ್ಮಾರ, ಕೋಳೂರು

ಭಾಗ್ಯನಗರ-ಯತ್ನಟ್ಟಿ ಬ್ಯಾರೇಜ್‌ಗಳ ಗೇಟ್‌ ಅಳವಡಿಕೆಗೆ ಮರಳು ದಂಧೆ ನಡೆಸುವವರು ತಡೆ ಒಡ್ಡಿದ್ದಾರೆ. ಇದರಿಂದ ನೀರಿನ ಸಂಗ್ರಹವಾಗದೆ ಭಾಗ್ಯನಗರದ 10 ಬೋರ್‌ವೆಲ್‌ಗಳು ಸ್ಥಗಿತಗೊಂಡಿವೆ. ಮಳೆಗಾಲದಲ್ಲಿಯೇ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೇಸಿಗೆಯಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ.

ರಮೇಶ ಹ್ಯಾಟಿ, ಅಧ್ಯಕ್ಷರು, ಭಾಗ್ಯನಗರ ಪಟ್ಟಣ ಪಂಚಾಯಿತಿ

PREV
Read more Articles on
click me!

Recommended Stories

ಕರ್ನಾಟಕ SIR ಪಟ್ಟಿ ಪ್ರಕಟ- 99.32 ಲಕ್ಷ ಮತದಾರರು ಔಟ್​: ಯಾರು, ಎಷ್ಟು? ಫುಲ್​ ಡಿಟೇಲ್ಸ್​ ಇಲ್ಲಿದೆ
ಬಂಗಾರಪ್ಪ ರಾಜ್ಯ ಕಂಡ ಅಪರೂಪದ ಜನನಾಯಕ: ಸಭಾಪತಿ ಸಲೀಂ ಅಹಮದ್