ರಾಯಚೂರು: ದೇವದುರ್ಗದಲ್ಲಿ ಮಿತಿಮೀರಿದ ಅಕ್ರಮ ಮರಳು ದಂಧೆ

By Kannadaprabha News  |  First Published Nov 8, 2022, 9:00 PM IST

ಮರಳು ಅಕ್ರಮ ಗಣಿಗಾರಿಕೆ ತಡೆಯಲು ತಾಲೂಕು ಆಡಳಿತ ಹಾಗೂ ಅಧಿಕಾರಿಗಳಿಗೆ ಒಂದು ವಾರ ಗಡುವು ನೀಡಲಾಗುವುದು. ನಿಲ್ಲಿಸದಿದ್ದರೆ ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಹೋರಾಟ ನಡೆಸಲಾಗುವುದು ಎಂದ ಎಂ.ಎಸ್‌.ವೆಂಕಟೇಶ  


ದೇವದುರ್ಗ(ನ.08): ತಾಲೂಕಿನ ಕೃಷ್ಣಾ ನದಿಯಲ್ಲಿ ಮರಳು ಅಕ್ರಮ ದಂಧೆ ಮಿತಿಮೀರಿದ್ದು, ಇದರಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ಮರಳು ಗಣಿಗಾರಿಕೆ ತಡೆಯುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೈಕಟ್ಟಿ ಕುಳಿತಿದ್ದಾರೆ. ಮರಳು ಅಕ್ರಮ ಗಣಿಗಾರಿಕೆ ತಡೆಯಲು ತಾಲೂಕು ಆಡಳಿತ ಹಾಗೂ ಅಧಿಕಾರಿಗಳಿಗೆ ಒಂದು ವಾರ ಗಡುವು ನೀಡಲಾಗುವುದು. ನಿಲ್ಲಿಸದಿದ್ದರೆ ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಶ ಶೆಟ್ಟಿಬಣ) ಜಿಲ್ಲಾ ಉಪಾಧ್ಯಕ್ಷ ಎಂ.ಎಸ್‌.ವೆಂಕಟೇಶ ಎಚ್ಚರಿಸಿದರು.

ಸೋಮವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆ ಕೃಷ್ಣಾ ನದಿಯಿಂದ ಮರಳು ಕಾನೂನು ಪ್ರಕಾರವಾಗಿ ಸಾಗಣೆ ಮಾಡಲು ಐದಾರು ಬ್ಲಾಕ್‌ಗಳ ಗುತ್ತಿಗೆ ನೀಡಲಾಗಿತ್ತು. ಆದರೆ, ಈ ಕಂಪನಿಗೆ ನೀಡಿದ ಗುತ್ತಿಗೆ ಮುಗಿಯುತ್ತಾ ಬಂದರೂ ರಿನ್ಯೂವಲ್‌ ಮಾಡಿಲ್ಲ. ಈ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು ಕಣ್ಣುಚ್ಚಿ ಕುಳಿತಿದ್ದಾರೆ. ನದಿಯಿಂದ ಹಗಲು ರಾತ್ರಿ ರಾಜಾರೋಷವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಕೈಕಟ್ಟಿಕುಳಿತಿದ್ದಾರೆ ಎಂದು ಆರೋಪಿಸಿದರು.

Latest Videos

undefined

ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ನಿಲ್ಲದ ಕಣ್ಣೀರು..!

ಅತಿಯಾದ ಮರಳು ಸಾಗಣೆಯಿಂದ ಕೋಣಚಪ್ಪಳಿ, ನಗರಗುಂಡ, ಹೂವಿನಹೆಡಗಿ, ಜೋಳದಹೆಡಗಿ, ಲಿಂಗದಹಳ್ಳಿ, ಗೂಗಲ್‌, ಕೊಪ್ಪರ ಸೇರಿ ನದಿದಂಡೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದರ ಜತೆಗೆ ವಿಪರೀತ ಧೂಳು ಆವರಿಸಿ ರಸ್ತೆ ಅಕ್ಕಪಕ್ಕದ ರೈತರ ಬೆಳೆಗಳು ಸಹ ನಾಶಗೊಳ್ಳುತ್ತಿವೆæ ಎಂದು ದೂರಿದರು.

ಒಂದು ವಾರದ ಗಡುವಿನಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದೇಯಿದ್ದಲ್ಲಿ ಮರಳು ಸಾಗಣೆ ಮಾಡುವ ರಸ್ತೆ ಮೇಲೆ ಕುಳಿತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಬಸವರಾಜ ಗೋಪಳಾಪುರ, ನಗರ ಘಟಕ ಅಧ್ಯಕ್ಷ ಉಸ್ಮಾನ್‌ ಪಾಷಾ, ಯುವ ಘಟಕದ ಅಧ್ಯಕ್ಷ ಭೀಮನಗೌಡ, ಶಿವಗೌಡ ದಳವಾಯಿದೊಡ್ಡಿ, ದೇವಪ್ಪ ನಾಯಕ, ಶಿವರಾಜ ನಾಯಕ ಇತರರಿದ್ದರು.
 

click me!