ಕೃಷ್ಣರಾಜಸಾಗರ ಜಲಾಶಯದ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವುದರ ಹಿಂದೆ ಅಕ್ರಮ ಗಣಿ ಲಾಬಿ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದರು.
ಮಂಡ್ಯ (ಮಾ.07): ಕೃಷ್ಣರಾಜಸಾಗರ ಜಲಾಶಯದ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವುದರ ಹಿಂದೆ ಅಕ್ರಮ ಗಣಿ ಲಾಬಿ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದರು. ಟ್ರಯಲ್ ಬ್ಲಾಸ್ಟ್‌ಗೆ ಮೊದಲಿನಿಂದಲೂ ನನ್ನ ವಿರೋಧವಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ್ದಾಗ ತಜ್ಞರು ಕೇವಲ ಸರ್ವೇಗಷ್ಟೇ ಬಂದಿದ್ದಾರೆ ಎಂದು ಹೇಳಿದ್ದರು. ಈಗ ನೋಡಿದರೆ ಯಾವ ಬ್ಲಾಸ್ಟ್ ಕೂಡ ನಡೆಯೋಲ್ಲ ಎನ್ನುತ್ತಿದ್ದಾರೆ. ಮ್ಮನ್ನು ದಿಕ್ಕುತಪ್ಪಿಸುವ ಕೆಲಸ ಜಿಲ್ಲಾಡಳಿತದಿಂದ ನಡೆದಿದೆ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಪರೀಕ್ಷಾರ್ಥ ಸ್ಫೋಟಕ್ಕೆ ಹೈಕೋರ್ಟ್ ಆದೇಶವೇ ಇಲ್ಲದಿದ್ದ ಮೇಲೆ ತಜ್ಞರನ್ನು ಕರೆಸುವ ಅಗತ್ಯವೇನಿತ್ತು. ಇವತ್ತಿನ ಸಭೆಯಲ್ಲಿ ಈ ವಿಚಾರವಾಗೊ ಚರ್ಚೆ ಮಾಡುತ್ತೇನೆ. ತರಾತುರಿಯಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಜಿಲ್ಲಾಡಳಿತ ಮುಂದಾಗಿದ್ದರ ಹಿಂದೆ ಅಕ್ರಮ ಗಣಿಗಾರಿಕೆ ಒತ್ತಡವಿದ್ದರೂ ಇರುತ್ತದೆ ಎಂದರು. ಅಧಿಕಾರಿಗಳು ಒಂದೊಂದು ಬಾರಿ ಅಸಹಾಯಕರಾಗುತ್ತಾರೆ. ಅಧಿಕಾರಿಗಳ ಮೇಲೆ ಯಾರ ಒತ್ತಡ ಇದೆ ಎಂಬುದನ್ನು ಮೊದಲು ತಿಳಿಯಬೇಕು ಎಂದ ಸುಮಲತಾ, ಕೆಆರ್‌ಎಸ್ ಅಣೆಕಟ್ಟೆಯ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ ಎಲ್ಲರೂ ಅದನ್ನು ಪಾಲಿಸಬೇಕು ಎಂದರು.
ಡಾ.ಎಚ್.ಎನ್.ರವೀಂದ್ರ ವಿರುದ್ಧ ಕೆಂಡಾಮಂಡಲ: ನಿಮ್ಮ ಬೆನ್ನಿಗೆ ಕಟ್ಟಿಕೊಂಡು ಓಡಾಡೋಕೆ ನಾನು ರಾಕ್ ಲೈನ್ ಅಲ್ಲ ಎಂಬ ಕಾಂಗ್ರೆಸ್ ಮುಖಂಡ ಡಾ.ಎಚ್.ಎನ್.ರವೀಂದ್ರ ಟೀಕೆಗೆ ಪ್ರತಿಕ್ರಿಯಿಸಿ, ಇಂತಹ ಚೀಪ್ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಅವರ ಮಾತು ಅವರ ಸ್ಥಾನ ತೋರಿಸುತ್ತದೆ. ಆಡುವ ಮಾತಿಗೂ ಒಂದು ಮಿತಿ ಇರಬೇಕು. ಸಿನೆಮಾದಲ್ಲಿ ಅವಕಾಶ ಕೊಡಿ ಎಂದು ರಾಕ್‌ಲೈನ್ ಅವರಿಗೆ ಸತತ ಕರೆ ಮಾಡಿರುವ ವಿಚಾರವೂ ನನಗೆ ಗೊತ್ತಿದೆ. ಅವರ ಯೋಗ್ಯತೆ ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಜೆಡಿಎಸ್ ಸ್ಥಾನಗಳು ಮುಖ್ಯವಲ್ಲ, ಎನ್‌ಡಿಎ ಗೆಲುವು ಮುಖ್ಯ: ನಿಖಿಲ್ ಕುಮಾರಸ್ವಾಮಿ
ಮಂಡ್ಯವನ್ನು ಸ್ಮಾರ್ಟ್ ಸಿಟಿ ಮಾಡುವ ವಿಚಾರವಾಗಿ ನಾನೂ ಸಹ ಪತ್ರ ಬರೆದಿದ್ದೆ. ಸ್ಮಾರ್ಟ್ ಸಿಟಿ ಮಾಡಲು ಇಂತಿಷ್ಟು ಜನಸಂಖ್ಯೆ ಇರಬೇಕು ಎಂಬ ನಿಯಮಾವಳಿ ಇದೆ. ಆ ಮಾನದಂಡಗಳಿಗೆ ಮಂಡ್ಯ ಒಳಪಡುವುದಿಲ್ಲವೆಂದಾದಾಗ ಎಂಪಿಯಾಗಿ ನಾನೇ ಏಕಾಏಕಿ ಸ್ಮಾರ್ಟ್‌ಸಿಟಿ ಮಾಡುವ ತೀರ್ಮಾನ ಕೈಗೊಳ್ಳಲಾಗುವುದೇ. ಒಬ್ಬ ಡಾಕ್ಟರ್ ಆದವರಿಗೆ ಇದು ಗೊತ್ತಿಲ್ಲವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.