
ಕಾರವಾರ/ಹೊನ್ನಾವರ (ಅ.12): ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಜಗತ್ಪ್ರಸಿದ್ಧ ಹಾಗೂ ಪೌರಾಣಿಕ ಹಿನ್ನೆಲೆಯ 'ಇಡಗುಂಜಿ ಶ್ರೀ ಮಹಾಗಣಪತಿ' ದೇವಸ್ಥಾನದಲ್ಲಿ (Idagunji Mahaganapati Temple) ಅರ್ಚಕರ ಕುಟುಂಬದವರ ಆಂತರಿಕ ಆಸ್ತಿ ಮತ್ತು ಆದಾಯದ ವೈಷಮ್ಯದಿಂದಾಗಿ ಪವಿತ್ರ ನವರಾತ್ರಿ ಉತ್ಸವದ ವೇಳೆಯಲ್ಲೇ ದೇವರಿಗೆ ಪೂಜಾ ವಿಘ್ನ ಎದುರಾಗಿದೆ. ಅರ್ಚಕರ ನಡುವಿನ ಕಿತ್ತಾಟ ಹಾಗೂ ಪೂಜಾ ಬಹಿಷ್ಕಾರದಿಂದಾಗಿ, ನವರಾತ್ರಿಯ ಶುಭ ಸಂದರ್ಭದಲ್ಲಿ ಮಹಾಗಣಪತಿ ದೇವರ ಪೂಜೆ ಮಾಡಿಸಲು ಸಾಲಿನಲ್ಲಿ ನಿಂತಿದ್ದ ಸಾವಿರಾರು ಭಕ್ತಾದಿಗಳು ಅರ್ಚಕರಿಲ್ಲದೇ ಕೇವಲ ಗಣಪನ ದರ್ಶನ ಪಡೆದು ನಿರಾಶೆಯಿಂದ ವಾಪಸಾಗುವಂತಾಗಿದೆ.
ಕಳೆದ ನೂರಾರು ವರ್ಷಗಳಿಂದ ಆನುವಂಶಿಕವಾಗಿ ಇಡಗುಂಜಿ ಗಣಪತಿಗೆ ಪೂಜೆ ನೆರವೇರಿಸಿಕೊಂಡು ಬಂದಿರುವ ಅರ್ಚಕರ ಕುಟುಂಬದಲ್ಲೇ ಈಗ ಬಿರುಕು ಮೂಡಿದ್ದು, ಕಮಿಷನ್ ಹಣ ಹಾಗೂ ಪ್ರತಿಷ್ಠೆಯ ಜಗಳವು ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಪೂಜೆ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ.
ಕಳೆದ 10 ವರ್ಷಗಳ ಹಿಂದೆ ದೇವಸ್ಥಾನದ ಆನುವಂಶಿಕ ಅರ್ಚಕರು ಮತ್ತು ದೇವಾಲಯದ ಟ್ರಸ್ಟಿಗಳ (Trustees) ನಡುವೆ ಆರಂಭವಾದ ಹಕ್ಕು ಮತ್ತು ಆದಾಯದ ವಿವಾದವು ಪ್ರಸ್ತುತ ದೇಶದ ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿದೆ. ಪ್ರಕರಣದ ವಿಚಾರಣೆ ಕಾಯ್ದಿರಿಸಿರುವ ಸುಪ್ರೀಂ ಕೋರ್ಟ್, ಮಧ್ಯಂತರ ವ್ಯವಸ್ಥೆಯಾಗಿ ಉತ್ತರ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನು 'ಆಡಳಿತಾಧಿಕಾರಿ' (Administrator) ಹಾಗೂ 'ಸುಪ್ರೀಂ ಕೋರ್ಟ್ ರಿಸೀವರ್' ಆಗಿ ನೇಮಕ ಮಾಡಿತ್ತು.
ದೇವಾಲಯದ ನಿತ್ಯ ಪೂಜೆಯ ಜವಾಬ್ದಾರಿಯನ್ನು ಆನುವಂಶಿಕ ಅರ್ಚಕರಾದ ದಿವಂಗತ ಶಿವರಾಮ್ ಭಟ್, ಲಕ್ಷ್ಮೀನಾರಾಯಣ ಭಟ್ ಹಾಗೂ ಪರಮೇಶ್ವರ ಭಟ್ ಅವರ ಕುಟುಂಬಗಳಿಗೆ ವಹಿಸಲಾಗಿತ್ತು. ದೇವಸ್ಥಾನಕ್ಕೆ ಬರುವ ಪೂಜಾ ಕಮಿಷನ್, ವಿಶೇಷ ಸೇವೆಗಳ ಕಮಿಷನ್ ಹಾಗೂ ಭಕ್ತರು ನೀಡುವ 'ತಟ್ಟೆಕಾಸಿನ' ಹಣವನ್ನು ರಿಸೀವರ್ ಆಗಿರುವ ಜಿಲ್ಲಾ ನ್ಯಾಯಾಧೀಶರಿಂದ ಅರ್ಚಕರಿಗೆ ನೀಡಲಾಗುತ್ತಿತ್ತು. ಈ ಮೂರು ಕುಟುಂಬಗಳು ತಿಂಗಳ ಪಾಳಿಯಂತೆ ಗಣಪನಿಗೆ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದವು.
ಆದರೆ, ದಿವಂಗತ ಶಿವರಾಮ್ ಭಟ್ ಅವರ ಎಂಟು ಜನ ಮಕ್ಕಳ ಪೈಕಿ ಮಂಜುನಾಥ ಭಟ್ ಹಾಗೂ ನರಸಿಂಹ ಭಟ್ ಎಂಬಿಬ್ಬರು, "ದೇವಸ್ಥಾನದಿಂದ ಬರುವ ಆದಾಯದ ಪಾಲು ಎಂಟೂ ಜನ ಸಹೋದರರಿಗೆ ಹಂಚಿಕೆಯಾಗಬಾರದು. ಬದಲಿಗೆ ನಮ್ಮಿಬ್ಬರಿಗೆ ಮಾತ್ರವೇ ಪೂರ್ಣ ಹಣ ಸಂದಾಯವಾಗಬೇಕು" ಎಂದು ಪಟ್ಟುಹಿಡಿದು ಹೊನ್ನಾವರ ಸಿವಿಲ್ ನ್ಯಾಯಾಲಯದಲ್ಲಿ ಪ್ರತ್ಯೇಕ ದಾವೆ ಹೂಡಿದ್ದರು.
ಈ ನ್ಯಾಯಾಂಗ ವ್ಯಾಜ್ಯ ಇತ್ಯರ್ಥವಾಗುವವರೆಗೆ ಶಿವರಾಮ್ ಭಟ್ ಅವರ ಎಂಟು ಜನ ಮಕ್ಕಳಿಗೂ ಪೂಜಾ ಕಮಿಷನ್ ಹಣ ನೀಡದಂತೆ ತಡೆಹಿಡಿಯಲಾಗಿದೆ. ಇದರಿಂದ ಅಸಮಾಧಾನಗೊಂಡ ಶಿವರಾಮ್ ಭಟ್ ಅವರ ಮಕ್ಕಳು ಗಣಪತಿಯ ಪೂಜೆಯನ್ನೇ ಬಹಿಷ್ಕರಿಸಿದ್ದಾರೆ. "ನ್ಯಾಯಾಲಯದಲ್ಲಿ ಕೇಸು ಹಾಕಿರುವ ಮಂಜುನಾಥ ಭಟ್ ಮತ್ತು ನರಸಿಂಹ ಭಟ್ ತಾವು ಪೂಜೆಗೆ ಬರುವುದಿಲ್ಲ. ಇತ್ತ ಉಳಿದ ಆರು ಜನ ಸಹೋದರರಿಗೂ ಸುಸೂತ್ರವಾಗಿ ಪೂಜೆ ನೆರವೇರಿಸಲು ಬಿಡುತ್ತಿಲ್ಲ" ಎಂದು ಕುಟುಂಬದ ಇತರ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಅರ್ಚಕರ ಈ ಸ್ವಾರ್ಥದ ಕಿತ್ತಾಟದಿಂದಾಗಿ ದೇಶ, ವಿದೇಶ ಹಾಗೂ ನೆರೆರಾಜ್ಯಗಳಿಂದ ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ ಧಾರ್ಮಿಕ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಪರದಾಡುವಂತಾಗಿದೆ. ದೇವಸ್ಥಾನಕ್ಕೆ ತಂದಿದ್ದ ಹಣ್ಣು-ಕಾಯಿಗಳನ್ನು ದೇವರಿಗೆ ಅರ್ಪಿಸಲಾಗದೆ, ಕಾಯಿ ಒಡೆದು ಕೊಡುವವರಿಲ್ಲದೆ ಅರ್ಚಕರಿಲ್ಲದ ಗೂಡಿನಂತಾಗಿರುವ ಗರ್ಭಗುಡಿಯ ಹೊರಗಿನಿಂದಲೇ ಬರಿಗಣ್ಣಿನಲ್ಲಿ ದೇವರನ್ನು ನೋಡಿ ಕೈಮುಗಿದು ಹಿಂತಿರುಗುತ್ತಿದ್ದಾರೆ.
ಪ್ರತಿಕ್ರಿಯಿಸಿರುವ ಸ್ಥಳೀಯ ಭಕ್ತರಾದ ದೀಪಕ್ ಶೆಣೈ ಹಾಗೂ ಸಂತೋಷ್, "ಇಡಗುಂಜಿಯ ಅತಿ ಅಪರೂಪದ ದ್ವಿಭುಜ ಗಣಪತಿಗೆ ಸಾವಿರಾರು ವರ್ಷಗಳ ಪೌರಾಣಿಕ ಇತಿಹಾಸವಿದೆ. ಇದು ಅರ್ಚಕರ ಸ್ವಂತ ಮನೆಯ ದೇವಾಲಯವಲ್ಲ, ಇಡೀ ದೇಶದ ಸಾರ್ವಜನಿಕರ ಪವಿತ್ರ ಕ್ಷೇತ್ರ. ಕೇವಲ ಹಣ, ತಟ್ಟೆಕಾಸು ಮತ್ತು ಕಮಿಷನ್‌ಗಾಗಿ ದೇವರನ್ನೇ ಪೂಜೆಯಿಲ್ಲದೆ ಇಡುವ ಇಂತಹ ಅರ್ಚಕರು ನಮಗೆ ಬೇಕಿಲ್ಲ. ತಕ್ಷಣವೇ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ನ್ಯಾಯಾಧೀಶರು ಪರ್ಯಾಯ ಅರ್ಚಕರನ್ನು ನೇಮಿಸಿ ಕ್ಷೇತ್ರಕ್ಕಾಗುತ್ತಿರುವ ಅಪಮಾನವನ್ನು ತಡೆಯಬೇಕು" ಎಂದು ಕಟುವಾಗಿ ಆಗ್ರಹಿಸಿದ್ದಾರೆ. ಪುಣ್ಯಕ್ಷೇತ್ರದಲ್ಲಿ ಅರ್ಚಕರ ಕೌಟುಂಬಿಕ ಕಲಹ ಬೀದಿಗೆ ಬಿದ್ದು ಪೂಜಾ ಬಹಿಷ್ಕಾರದವರೆಗೆ ತಲುಪಿರುವುದು ನಿಜಕ್ಕೂ ಧಾರ್ಮಿಕ ಲೋಕಕ್ಕಾದ ಭಾರಿ ಹಿನ್ನಡೆಯಾಗಿದೆ.