ಬಿಜೆಪಿ ಅವಧಿಯ ರಾಬರಿ, ಕಳ್ಳತನದ ಪಟ್ಟಿ ಬಹಿರಂಗ ಮಾಡುತ್ತೇನೆ: ಡಾ.ಪರಮೇಶ್ವರ್

Published : Jan 24, 2025, 07:37 AM IST
ಬಿಜೆಪಿ ಅವಧಿಯ ರಾಬರಿ, ಕಳ್ಳತನದ ಪಟ್ಟಿ ಬಹಿರಂಗ ಮಾಡುತ್ತೇನೆ: ಡಾ.ಪರಮೇಶ್ವರ್

ಸಾರಾಂಶ

ಬಿಜೆಪಿ ಆಡಳಿತದಲ್ಲಿ ಎಷ್ಟು ದರೋಡೆಯಾಗಿತ್ತು? ಎಷ್ಟು ಬ್ಯಾಂಕ್ ರಾಬರಿಯಾಗಿತ್ತು ? ಎಷ್ಟು ಎಟಿಎಂ ಕಳ್ಳತನ ಆಗಿತ್ತು ? ಎಲ್ಲಾ ಮಾಹಿತಿ ಇದೆ, ಸಂದರ್ಭ ಬಂದಾಗ ಕೊಡುತ್ತೇನೆ ಎಂದ ಗೃಹ ಸಚಿವ ಡಾ.ಪರಮೇಶ್ವರ್

ಉಡುಪಿ(ಜ.24):  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಡಾ.ಪರಮೇಶ್ವರ್ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನೇನಾಗಿತ್ತು ಎಂಬ ಮಾಹಿತಿ ನನ್ನ ಬಳಿ ಇದೆ, ಸಮಯ ಬಂದಾಗ ಬಹಿರಂಗ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. 

ಗುರುವಾರ ಉಡುಪಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದೇವೆ, ಯಾವುದೇ ದೊಡ್ಡ ಗಲಾಟೆ ಕೋಮು ಗಲಭೆಗಳು ಆಗಿಲ್ಲ, ಕಳ್ಳತನ ದರೋಡೆ ಇವೆಲ್ಲವನ್ನು ಕೂಡ ಹತ್ತಿಕ್ಕುವ ಕೆಲಸ ಮಾಡುತ್ತಿದ್ದೇವೆ. ಆದರೆ ಬಿಜೆಪಿ ಆಡಳಿತದಲ್ಲಿ ಎಷ್ಟು ದರೋಡೆಯಾಗಿತ್ತು? ಎಷ್ಟು ಬ್ಯಾಂಕ್ ರಾಬರಿಯಾಗಿತ್ತು ? ಎಷ್ಟು ಎಟಿಎಂ ಕಳ್ಳತನ ಆಗಿತ್ತು ? ಎಲ್ಲಾ ಮಾಹಿತಿ ಇದೆ, ಸಂದರ್ಭ ಬಂದಾಗ ಕೊಡುತ್ತೇನೆ ಎಂದಿದ್ದಾರೆ. 

ಮಲ್ಲಿಕಾರ್ಜುನ ಖರ್ಗೆಯ ತ್ಯಾಗದ ಮಾತು ಅರ್ಥ ಆಗಿಲ್ಲ: ಗೃಹ ಸಚಿವ ಪರಮೇಶ್ವರ್

ಖರ್ಗೆ ಹೇಳಿದ್ದು ತಪ್ಪಾ?: 

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾರು ಯಾರು ತ್ಯಾಗ ಮಾಡುತ್ತಾರೆ ನನಗೆ ಗೊತ್ತಿಲ್ಲ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿ ಅವರು ಮಾಡಿದ ತ್ಯಾಗದ ಬಗ್ಗೆ ಸಭೆಯೊಂದರಲ್ಲಿ ಮಾತನಾಡಿದ್ದಾರೆ. ಅವರ ಹೇಳಿಕೆಯಲ್ಲಿ ಏನು ತಪ್ಪಿದೆ ? ಎಂದು ಪತ್ರಕರ್ತರಿಗೆ ಮರು ಪ್ರಶ್ನಿಸಿದರು. 

ಬಿಜೆಪಿಗೆಷ್ಟು ಬಾಗಿಲು?: 

ಬಿಜೆಪಿಯವರು ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಗುಂಪುಗಳಿವೆ. ನಾಲ್ಕು ಬಾಗಿಲುಗಳಿವೆ, ಒಡೆದು ಹೋಗಿದೆ ಚೂರುಚೂರು ಆಗಿದೆ ಟೀಕಿಸುತ್ತಿದ್ದರು. ಆದರೆ ಈಗನಾವು ಕೂಡ ಅವರನ್ನು ಕೇಳಬಹುದಲ್ವಾ? ಏನಪ್ಪಾ ನಿಮ್ಮ ಬಿಜೆಪಿ ಪಕ್ಷ ಹೇಗಿದೆ ? ಎಷ್ಟು ಚೂರಾಗಿದೆ ? ಬಿಜೆಪಿಯಲ್ಲಿ ಎಷ್ಟು ಬಾಗಿಲುಗಳಿವೆ ಎಂದು ಕೇಳಬಹುದಲ್ವಾ? ಆದರೆ ಅವರ ಆಂತರಿಕ ವಿಚಾರದ ಬಗ್ಗೆ ನಾನು ಟೀಕೆ ಟಿಪ್ಪಣಿ ಮಾಡಲು ಹೋಗುವುದಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 
ಶ್ರೀರಾಮುಲು ಅವರು ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಹೇಳಿಕೆ ನೀಡುವುದಿಲ್ಲ ಎಂದರು. 

ಪದೇ ಪದೇ ಗೋವುಗಳ ಮೇಲೆ ವಿಕೃತಿಗೆ ಸ್ವತಃ ಗೃಹ ಸಚಿವ ಪರಮೇಶ್ವರ್‌ ಕಳವಳ

ಪಾರ್ಲರ್‌ಗೆ ದಾಳಿ ಮಾಡಿದವರನ್ನು ಬಂಧಿಸಲು ಸೂಚನೆ: 

ಮಂಗಳೂರಿನಲ್ಲಿ ಮಸಾಜ್ ಪಾರ್ಲರಿಗೆ ಯಾವ ಉದ್ದೇಶದಿಂದ ದಾಳಿ ಮಾಡಿದ್ದಾರೋ ಗೊತ್ತಿಲ್ಲ, ದಾಳಿ ಮಾಡಿದವರನ್ನು ತಕ್ಷಣ ಬಂಧಿಸಲು ಸೂಚಿಸಿದ್ದೇನೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ. 

ಯಾರಿಗೂ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಅಡ್ಡಿಪಡಿಸಬಾರದು, ವ್ಯಾಪಾರ ಮಾಡುವವರಿಗೆ ಕಾರ್ಪೊರೇಷನ್ ಅವರು ಟ್ರೇಡ್ ಲೈಸೆನ್ಸ್ ಕೊಟ್ಟಿರುತ್ತಾರೆ, ಆಗ ಯಾವ ಷರತ್ತು ಹಾಕಿ ಕೊಟ್ಟಿರುತ್ತಾರೆ ಅದನ್ನು ಪಾಲಿಸದಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ. ಈ ಪಾರ್ಲ‌ರ್ನನಲ್ಲಿ ಅನೈತಿಕ ಕಾರ್ಯ ನಡೆಯುತ್ತಿದ್ದರೆ ಪೊಲೀಸರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತಾರೆ. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಇಂತಹ ಕೃತ್ಯಗಳು ನಡೆಯಬಾರದು. ಆದ್ದರಿಂದ ಕಾನೂನು ಪ್ರಕಾರ ದಾಳಿನಡೆಸಿದವರನ್ನು ತಕ್ಷಣ ಬಂಧಿಸಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ