ಮಧ್ಯಾಹ್ನದೊಳಗೆ ಹೊರ ಬೀಳಲಿದೆ ಹುಣಸೂರು ಬೈಎಲೆಕ್ಷನ್ ಫಲಿತಾಂಶ

By Kannadaprabha News  |  First Published Dec 8, 2019, 9:15 AM IST

ಹುಣಸೂರು ಉಪಚುನಾವಣಾ ಫಲಿತಾಂಶ ಮಧ್ಯಾಹ್ನ 12.30ಕ್ಕೆ ಫಲಿತಾಂಶ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ತಿಳಿಸಿದ್ದಾರೆ. ಎಣಿಕೆ ಕೇಂದ್ರದಲ್ಲಿ ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಅಗ್ನಿಶಾಮಕ ಸೇವ, ವೈದ್ಯಕೀಯ ಸೇವೆ ಒದಗಿಸಲಾಗಿದೆ.


ಮೈಸೂರು(ಡಿ.8): ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಡಿ. 9ರಂದು ಬೆಳಗ್ಗೆ 8ಗಂಟೆಗೆ ಅಲ್ಲಿನ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಫಲಿತಾಂಶ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ತಿಳಿಸಿದ್ದಾರೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಡಿ. 11ರಂದು ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಇರುವುದರಿಂದ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಬಾರಿ ಶೇ. 80.59 ಮತದಾನವಾಗಿದ್ದು, ಪುರುಷರಿಂದ ಶೇ. 81.30, ಮಹಿಳೆಯರು ಶೇ. 79.88 ಹಾಗೂ ಇತರರು ಶೇ. 16.67 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

Tap to resize

Latest Videos

ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ ಎಂದ್ರು ಶಾಸಕ ರಾಮದಾಸ್‌

ಮೊಹರಾದ ವಿದ್ಯುನ್ಮಾನ ಮತಯಂತ್ರ, ಚುನಾವಣಾ ಕಾಗದ ಪತ್ರವನ್ನು ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಭದ್ರತಾ ಕೊಠಡಿಗೆ 1ನೇ ಸುತ್ತಿನ ಭದ್ರತೆಯನ್ನು ಸಿಎಪಿಎಫ್‌ ತುಕಡಿಯಿಂದ, 2ನೇ ಸುತ್ತಿನಲ್ಲಿ ಸಶಸ್ತ್ರ ಮೀಸಲು ಪಡೆ ಮತ್ತು 3ನೇ ಹಂತದಲ್ಲಿ ಸ್ಥಳೀಯ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಅಲ್ಲದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಹಾಗೂ ಭದ್ರತಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಲಾಗ್‌ಬುಕ್‌ನಲ್ಲಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಸಿಸಿ ಕ್ಯಾಮೆರಾ ಅಳವಡಿಕೆ:

14 ಕೌಟಿಂಗ್‌ ಟೇಬಲ್‌ ಸ್ಥಾಪಿಸಲಾಗಿದ್ದು, ಪ್ರತಿ ಟೇಬಲ್‌ಗೆ 1 ಮೈಕ್ರೋ ಅಬ್ಸರ್ವರ್‌, 1 ಸೂಪರ್‌ ವೈಸರ್‌, 1 ಸಹಾಯಕರನ್ನು ನಿಯೋಜಿಸಲಾಗಿದೆ. ಅವರಿಗೆ ಅಗತ್ಯ ತರಬೇತಿ ನೀಡಲಾಗಿದೆ. ಟ್ಯಾಬುಲೇಷನ್‌ ಹಾಗೂ ಇತರೆ ಎಣಿಕೆ ಕಾರ್ಯಕ್ಕೆ ಅಧಿಕಾರಿ, ಸಿಬ್ಬಂದಿ ನೇಮಿಸಲಾಗಿದ್ದು, ಅವರಿಗೂ ತರಬೇತಿ ನೀಡಲಾಗಿದೆ. ಎಣಿಕೆ ಕೇಂದ್ರದಲ್ಲಿ ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಅಗ್ನಿಶಾಮಕ ಸೇವ, ವೈದ್ಯಕೀಯ ಸೇವೆ ಒದಗಿಸಲಾಗಿದೆ. ಮತ ಎಣಿಕೆಯಲ್ಲಿ ಪಾಲ್ಗೊಳ್ಳುವ ಕೌಂಟಿಂಗ್‌ ಏಜೆಂಟರಿಗೆ ಕೌಟಿಂಗ್‌ ಹಾಲ್‌ನಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುವುದು. ಡಿ. 8ರ ಮಧ್ಯರಾತ್ರಿಯಿಂದ 9ರ ಮಧ್ಯರಾತ್ರಿವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತು ಅದರ ಪರಿಧಿಯಿಂದ ಹೊರಗೆ 5 ಕಿ.ಮೀವರೆಗೆ ಒಣ ದಿನ ಎಂದು ಘೋಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮತ ಎಣಿಕೆ ಹಿನ್ನೆಲೆ ಸಂಚಾರಿ ವಾಹನಗಳ ಮಾರ್ಗ ಬದಲಾವಣೆ

ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಭ್ಯರ್ಥಿಗಳು, ಚುನಾವಣಾ ಏಜೆಂಟರು, ಕೌಂಟಿಂಗ್‌ ಏಜೆಂಟರು, ಮಾಧ್ಯಮ ಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ತಮಗೆ ವಿತರಿಸಿರುವ ಪಾಸ್‌, ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕು ಮತ್ತು ಬೆಳಗ್ಗೆ 7.30 ರೊಳಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್‌ ಫೋನ್‌ ತರಲು ನಿಷೇಧವಿದೆ.

ಸ್ಫೋಟಕ ನಿರ್ಬಂಧ:

ಅಭ್ಯರ್ಥಿಗಳು, ಕೌಂಟಿಂಗ್‌ ಏಜೆಂಟರು, ಕರ್ತವ್ಯನಿರತ ಅಧಿಕಾರಿ, ಸಿಬ್ಬಂದಿ ತಮ್ಮ ಮೊಬೈಲ್‌ ಫನ್‌ ಸ್ವಿಚ್‌ ಆಫ್‌ ಮಾಡಿ ಇರಿಸಬೇಕು, ಮಾಧ್ಯಮ ಪ್ರತಿನಿಧಿಗಳು, ಮತ ಎಣಿಕೆ ಕೇಂದ್ರದ ಬಳಿ ಸ್ಥಾಪಿಸಿರುವ ಮಾಧ್ಯಮ ಕೊಠಡಿಯವರೆಗೆ ಮೊಬೈಲ್‌ ಫೋನ್‌ ತರಲು ಅವಕಾಶ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಬೀಡಿ, ಸಿಗರೇಟು, ತಂಬಾಕು, ಬೆಂಕಿಪೊಟ್ಟಣ, ಸ್ಫೋಟಕ ವಸ್ತು ಹಾಗೂ ಇತರೆ ನಿರ್ಬಂಧಿತ ವಸ್ತುಗಳನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ.

ಬೈ ಎಲೆಕ್ಷನ್‌ ಮುಗಿಯುತ್ತಿದ್ದಂತೆಯೇ ಬಿರುಗಾಳಿ ಎಬ್ಬಿಸಿದ ಡಿಕೆಶಿ: BSYಗೆ ವಾರ್ನ್

ಮತ ಎಣಿಕೆ ಪ್ರಾರಂಭವಾಗುವ ಬೆಳಗ್ಗೆ 8 ಗಂಟೆಯೊಳಗೆ ಸ್ವೀಕೃತವಾಗುವ ಅಂಚೆ ಮತಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗುವುದು. ಬಳಿಕ ಬಂದ ಮತಪತ್ರಗಳನ್ನು ಪರಿಗಣಿಸಲಾಗುವುದಿಲ್ಲ. ಒಟ್ಟು 87 ಮಂದಿ ಅಂಚೆ ಮತದಾರರ ಪೈಕಿ 25 ಮಾತ್ರ ಬಂದಿದೆ. ಅಂತೆಯೇ 254 ಮಂದಿ ವೆಬ್‌ಕಾಸ್ಟ್‌ ಮತದಾರರ ಪೈಕಿ 60 ಮಂದಿ ಹಕ್ಕು ಮತಪತ್ರ ಕಳುಹಿಸಿದ್ದಾರೆ. ಒಟ್ಟಾರೆ 20 ಸುತ್ತಿನಲ್ಲಿ ಎಣಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಲಭ್ಯವಾದರೂ, ವಿವಿ ಪ್ಯಾಟ್‌ ಎಣಿಕೆ ಪೂರ್ಣಗೊಳ್ಳುವವರೆಗೆ ಅಧಿಕೃತವಾಗಿ ಯಾರು ಗೆದ್ದರು ಎಂಬುದನ್ನು ಘೋಷಿಸುವುದಿಲ್ಲ ಎಂದು ಅವರು ತಿಳಿಸಿದರು.

ಭದ್ರತೆಗೆ ನಿಯೋಜನೆ:

ಮೂವರು ಡಿಎಸ್‌ಪಿ, 9 ಮಂದಿ ಸಿಪಿಐ, 27 ಮಂದಿ ಎಸ್‌ಐ, 44 ಮಂದಿ ಎಎಸ್‌ಐ, 93 ಮಂದಿ ಮುಖ್ಯಪೇದೆ, 184 ಮಂದಿ ಪೇದೆಗಳು ಮತ್ತು 100 ಮಂದಿ ಹೋಂ ಗಾರ್ಡ್‌ನ್ನು ಮತ ಎಣಿಕೆ ಕೇಂದ್ರಕ್ಕೆ ನಿಯೋಜಿಸಲಾಗಿದೆ. ಇದಲ್ಲದೆ ಕೆಎಸ್‌ಆರ್‌ಪಿಯ 5 ತುಕಡಿ ಮತ್ತು ಡಿಎಆರ್‌ನ 9 ತುಕಡಿ ಇರುತ್ತದೆ. ಈವರೆಗೆ ಚುನಾವಣೆ ಸಂಬಂಧ 11 ಪ್ರಕರಣ ದಾಖಲಿಸಲಾಗಿದೆ. ಹೊಸ ರಾಮನಹಳ್ಳಿ ಪ್ರಕರಣವೂ ಇದರಲ್ಲಿ ಸೇರಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಇನ್ನು ಹಣ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಧ್ಯಮಗಳಿಗೆ ನೇರವಾಗಿ ಪತ್ರ ಬರೆದು ವೀಡಿಯೋ ತುಣುಕುಗಳನ್ನು ಪಡೆಯಲಾಗುತ್ತಿದೆ ಎಂದು ಎಸ್ಪಿ ರಿಷ್ಯಂತ್‌ ವಿವರಿಸಿದರು.

click me!