ಬೆಂಗಳೂರು ಚಿತ್ರಸಂತೆಗೆ ಜನಸಾಗರ : ₹3.50 ಲಕ್ಷಕ್ಕೆ ಮಾರಾಟವಾದ 104 ವ್ಯಕ್ತಿಗಳಿರುವ ಚಿತ್ರ

Kannadaprabha News   | Kannada Prabha
Published : Jan 05, 2026, 06:27 AM IST
Chitrasante

ಸಾರಾಂಶ

ಸದಾ ವಾಹನಗಳ ಸಂಚಾರದಿಂದ ಗಿಜಿಗುಡುವ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ಅಕ್ಷರಶಃ ಕಲಾಕೃತಿಗಳ ಜಾತ್ರೆ ಕಳೆಗಟ್ಟಿತ್ತು. ಹತ್ತಾರು ಬಗೆಯ ಮನಸೂರೆಗೊಳ್ಳುವ ಸಾವಿರಾರು ಕೃತಿಗಳು ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡಿತು.

ಬೆಂಗಳೂರು : ಸದಾ ವಾಹನಗಳ ಸಂಚಾರದಿಂದ ಗಿಜಿಗುಡುವ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ಅಕ್ಷರಶಃ ಕಲಾಕೃತಿಗಳ ಜಾತ್ರೆ ಕಳೆಗಟ್ಟಿತ್ತು. ಹತ್ತಾರು ಬಗೆಯ ಮನಸೂರೆಗೊಳ್ಳುವ ಸಾವಿರಾರು ಕೃತಿಗಳು ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡಿತು.

ಕಲಾಕೃತಿಗಳನ್ನು ವೀಕ್ಷಿಸಲು, ಖರೀದಿಸಲು ಕಲಾರಸಿಕರು, ಕಲಾಪ್ರೇಮಿಗಳು ಸೇರಿದಂತೆ ಜನಸಾಗರವೇ ಹರಿದು ಬಂದಿತ್ತು. ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ನಡೆದ ಚಿತ್ರಸಂತೆಗೆ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ₹3 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ.

ಕುಮಾರಕೃಪಾ ರಸ್ತೆ, ಕ್ರೆಸೆಂಟ್‌ ರಸ್ತೆ, ಚಿತ್ರಕಲಾ ಪರಿಷತ್ತು ಮತ್ತು ಸೇವಾ ದಳದ ಆವರಣ ಕಲಾವಿದರು, ಕಲಾಸಕ್ತರು, ಕಲಾರಸಿಕರಿಂದ ಆವರಿಸಿತ್ತು. ಎಲ್ಲೆಲ್ಲೂ ವಿವಿಧ ಕಲಾಕೃತಿಗಳ ಸೊಬಗಿಗೆ ನೋಡುಗರು ಮೈಮರೆತಿದ್ದರು. ಪರಿಸರ ವಿಷಯಾಧಾರಿತ ಚಿತ್ರಸಂತೆಯಲ್ಲಿ ಕಲಾವಿದರ ಕುಂಚದೊಳಗೆ ಮೂಡಿಬಂದ ಬಣ್ಣ ಬಣ್ಣದ ಕಲಾಕೃತಿಗಳು ಕಲಾರಸಿಕರನ್ನು ಮಂತ್ರಮಗ್ನರನ್ನಾಗಿಸಿತ್ತು.ಪರಿಷತ್ತಿನ ಆವರಣದೊಳಗೆ ಜೇನುಗೂಡು, ವೃಕ್ಷ ಸಂಪತ್ತಿನ ಪರಿಕಲ್ಪನೆಯ ಚಿತ್ರಗಳ ಸಂಭ್ರಮ ವಿಶೇಷವಾಗಿತ್ತು.

ರಸ್ತೆ ಮಧ್ಯೆ, ರಸ್ತೆಯ ಇಕ್ಕೆಗಳಲ್ಲಿ ಮಾತ್ರವಲ್ಲದೆ ಮರದ ರೆಂಬೆ-ಕೊಂಬೆಗಳ ಮೇಲೆ ಹೀಗೆ ಕಣ್ಣು ಹಾಯಿಸಿದಷ್ಟು ದೂರ ಕಲಾಕೃತಿಗಳದ್ದೇ ಸಾಮ್ರಾಜ್ಯ. ಕಲಾಪ್ರೇಮಿಗಳು ತಮ್ಮ ಮೊಬೈಲ್ ಮತ್ತು ಕ್ಯಾಮರಾದಲ್ಲಿ ಕಲಾಕೃತಿಗಳನ್ನು ಸೆರೆಹಿಡಿಯುತ್ತಾ, ಆ ಕಲಾಕೃತಿಗಳ ದರ, ಕಲಾವಿದರ ಹೆಸರು ಇತ್ಯಾದಿಗಳ ಮಾಹಿತಿ ಸಂಗ್ರಹಿಸುತ್ತಿದ್ದ ದೃಶ್ಯ ಕಂಡು ಬಂತು.

ಕೈಗೆ, ಮುಖಕ್ಕೆ ಟ್ಯಾಟೋ

ಕಲಾಕೃತಿಗಳನ್ನು ಖರೀದಿಸುವ ಮುನ್ನ ಚೌಕಾಸಿಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತ್ತೊಂದೆಡೆ ಪೋರ್ಟೆಟ್ (ವ್ಯಕ್ತಿಚಿತ್ರ) ರಚಿಸುವ ಕಲಾವಿದರು ರಸ್ತೆ ಮಧ್ಯದಲ್ಲೇ ಕೂತು ಆಸಕ್ತರಿಗೆ ತಮ್ಮ ವ್ಯಕ್ತಿ ಚಿತ್ರ ಬಿಡಿಸಿಕೊಡುತ್ತಿದ್ದರು. ಇದರೊಂದಿಗೆ ಕೈಗೆ, ಮುಖಕ್ಕೆ ಬಣ್ಣದ ಟ್ಯಾಟು ಹಾಕಿಸಿಕೊಳ್ಳುವ ಕಲಾವಿದರು ಕೂಡ ಗಮನ ಸೆಳೆಯುತ್ತಿದ್ದರು.

ಕುಂಚದಲ್ಲಿ ಅರಳಿದ ಹೆಣ್ಣಿನ ಭಾವ

ಹೆಣ್ಣಿನ ಭಾವ-ಭಂಗಿಗಳು ಕಲಾಕುಂಚದಲ್ಲಿ ಅರಳಿದರೆ, ಗ್ರಾಮೀಣ ಬದುಕು, ನಿಸರ್ಗ, ಕಾಡು ಪ್ರಾಣಿಗಳ ಚಿತ್ರಗಳು, ಸಾಂಪ್ರದಾಯಿಕ, ವಾಸ್ತು ಶಾಸ್ತ್ರ ಹಾಗೂ ಪುರಾಣದ ಬಹುತೇಕ ಪಾತ್ರಗಳೂ ಕಲೆಯಲ್ಲಿ ಜೀವ ತಳೆದು ನಿಂತಂತೆ ಭಾಸವಾಯಿತು. ಆಧುನಿಕ ಜೀವನ ಶೈಲಿಯಲ್ಲಿ ಮನುಷ್ಯನ ಹಲವು ಬಗೆಯ ತೊಳಲಾಟ ಕೂಡ ಕಲಾಕೃತಿಯಲ್ಲಿ ಮೂಡಿಬಂದಿದ್ದು ವಿಶೇಷವಾಗಿತ್ತು. ಕಲಾವಿದರು ವಾಸ್ತವದ ಕುಂಚಕ್ಕೆ ಕಲ್ಪನೆಯ ಬಣ್ಣ ತುಂಬಿ, ಅರ್ಥಗರ್ಭಿತ ಸಂದೇಶ ಸಾರಿದರು.

ಕಣ್ಮನ ಸೆಳೆದ ವಿವಿಧ

ರೀತಿಯ ಕಲಾಕೃತಿಗಳು

ಮಧುಬನಿ, ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಗಳು, ಮ್ಯೂರಲ್ ಆರ್ಟ್‌ನ ಕಂಚಿನ ವಿಗ್ರಹಗಳು, ಮರ, ಸೆರಾಮಿಕ್, ಹಳೆಯ ವಸ್ತುಗಳು, ಗಾಜು, ಬಟ್ಟೆ, ಒಣ ಹೂವು ಹಾಗೂ ಉಲ್ಲನ್ ಬಳಸಿದ ಕಾಂತಾರಾದ ವಿನ್ಯಾಸ ಹೀಗೆ ಬಗೆ ಬಗೆಯ ಕಲಾಕೃತಿಗಳಿದ್ದವು. ಎಲ್ಲೆಡೆ ಪರಿಷತ್ತಿನ ಸ್ವಯಂ ಸೇವಕರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಸಂತೆಗೆ ಸಾಥ್ ನೀಡುತ್ತಿದ್ದರು. ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ದಿನವಿಡೀ ಆಗಾಗ್ಗೆ ಬರುವ ಗಣ್ಯರನ್ನು ಚಿತ್ರಸಂತೆ ತೋರಿಸುತ್ತಾ, ವೇದಿಕೆಗೆ ಕರೆತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸ್ವ- ಅಭಿರುಚಿಯಿಂದ ಕಲಿತ ಯುವ ಕಲಾವಿದರು ಚಿತ್ರಸಂತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಇಡೀ ದಿನ ಸಂತೆಗೆ ಜನಸಾಗರವೇ ಹರಿದು ಬಂದಿತ್ತು. ಹಲವರು ತಮ್ಮಿಷ್ಟದ ಚಿತ್ರಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು.

₹3.50 ಲಕ್ಷಕ್ಕೆ ಮಾರಾಟವಾದ ಪ್ರಸಿದ್ಧ 104 ವ್ಯಕ್ತಿಗಳಿರುವ ಚಿತ್ರ

ತಮಿಳುನಾಡಿನ ಕಲಾವಿದ ಎ.ಮಣಿ ಅವರು ವಿವಿಧ ಕ್ಷೇತ್ರಗಳ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ಪೈಕಿ ಆಯ್ದ 104 ಮಂದಿಯ ಚಿತ್ರಗಳನ್ನು ವಿಶಿಷ್ಟವಾಗಿ ಬಿಡಿಸಿದ್ದ 3 ಲಕ್ಷ ರು. ಮೌಲ್ಯದ ತೈಲ ಚಿತ್ರ ನೋಡುಗರ ಗಮನ ಸೆಳೆಯಿತು. ಈ ಪೆಂಟಿಂಗ್ ಮಧ್ಯಾಹ್ನದ ವೇಳೆಗೆ ಮಾರಾಟವಾಗಿತ್ತು . ಆದರೂ ಸೋಲ್ಡ್ ಔಟ್ ಎಂಬ ಬರಹದೊಂದಿಗೂ ಈ ಚಿತ್ರ ನೋಡುಗರನ್ನು ಸೆಳೆಯುತ್ತಿತ್ತು.

ಸೆಂಟೆಡ್ ಕ್ಯಾಂಡಲ್‌ ಕಲಾಕೃತಿ

ಶಿವಮೊಗ್ಗದ ಕಲಾವಿದ ಕುಶಾಲ್ ಅವರು ಸೆಂಟೆಡ್ ಕ್ಯಾಂಡಲ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಸಂತೆಗೆ ತಂದಿದ್ದರು. ಕಾಫಿ, ಚಾಕೊಲೇಟ್ ಫ್ಲೇವರ್‌ನ ನಾನಾ ವಿನ್ಯಾಸದ ಕ್ಯಾಂಡಲ್‌ಗಳು ಗ್ರಾಹಕರನ್ನು ಸೆಳೆಯುತ್ತಿದ್ದವು. 50 ರು.ನಿಂದ 500 ರುವರೆಗಿನ ಕ್ಯಾಂಡಲ್‌ಗಳಿದ್ದವು. ಕ್ಯಾಂಡಲ್ ತಯಾರಿಸುವುದು ಕೂಡ ಒಂದು ಕಲೆ. ಇದು ಪರಿಮಳ ಬೀರುವುದರ ಜತೆಗೆ ಮನೆಯಲ್ಲಿ ಆಕರ್ಷಕವಾಗಿ ಕಾಣುತ್ತದೆ ಎಂದು ಕುಶಾಲ್ ತಿಳಿಸಿದರು.

ಫೀಡರ್ ಬಸ್‌ ಸೌಲಭ್ಯ

ಚಿತ್ರಸಂತೆ ಆಗಮಿಸಲು ಅನುಕೂಲವಾಗುವಂತೆ ಮೆಜೆಸ್ಟಿಕ್, ವಿಧಾನಸೌಧ, ಮಂತ್ರಿ ಮಾಲ್‌ನಿಂದ ಶಿವಾನಂದ ವೃತ್ತ ಹಾಗೂ ಶಿವಾನಂದ ವೃತ್ತದಿಂದ ವಿಧಾನಸೌಧ-ಮೆಜೆಸ್ಟಿಕ್ ಭಾಗಗಳಿಗೆ ಬಿಎಂಟಿಸಿ ಫೀಡರ್ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಜನರು ಎಂದಿನಂತೆ ಟಿಕೆಟ್ ಪಡೆದು ಸಂಚರಿಸಿದರು.

PREV
Read more Articles on
click me!

Recommended Stories

ಬಳ್ಳಾರಿ ಗನ್‌ಮ್ಯಾನ್‌ ಸೇರಿ ಕೈ, ಬಿಜೆಪಿಯ 26 ಜನ ಸೆರೆ
ಬೆಂಗಳೂರಿನ ಚಿತ್ರಮಂದಿರದ ಲೇಡಿಸ್ ಟಾಯ್ಲೆಟ್‌ನಲ್ಲಿ ಗುಪ್ತ ಕ್ಯಾಮರಾ; ಕಾಮುಕನಿಗೆ ಬಿತ್ತು ಧರ್ಮದೇಟು!