ನಸುಕಿನ ಜಾವ 3.30ರವರೆಗೆ ನಡೆದ ಸಂಧಾನ ಸಭೆ; ಕಬ್ಬು ಬೆಳೆಗಾರರು ನೀಡಿದ ಎಚ್ಚರಿಕೆ ಏನು?

Published : Oct 20, 2026, 07:20 AM IST
Sugarcane Farmers

ಸಾರಾಂಶ

ಕಬ್ಬು ಬೆಳೆಗಾರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿದ್ದ ಹೋರಾಟವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ನವೆಂಬರ್ 26ರೊಳಗೆ ಬೇಡಿಕೆ ಈಡೇರದಿದ್ದರೆ, ನವೆಂಬರ್ 27ರಂದು ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ: ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಕಬ್ಬು ಬೆಳೆಗಾರರು ನಡೆಸುತ್ತಿದ್ದ ಹೋರಾಟಕ್ಕೆ ಸದ್ಯ ಬ್ರೇಕ್‌ ಬಿದ್ದಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಸೋಮವಾರ ನಸುಕಿನ ಜಾವ 3.30ರವರೆಗೂ ನಡೆದ ಸಭೆಯು ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಈ ನಡುವೆ ಸದ್ಯಕ್ಕೆ ಹೋರಾಟವನ್ನು ಹಿಂಪಡೆದಿರುವ ಕಬ್ಬು ಬೆಳೆಗಾರರು ಬೇಡಿಕೆ ಈಡೇರಿಸಲು ನ.26ರವರೆಗೆ ಗಡವು ನೀಡಿದ್ದಾರೆ. ಅಷ್ಟರೊಳಗೆ ಬೇಡಿಕೆ ಈಡೇರದಿದ್ದಲ್ಲಿ ನ.27ರಂದು ಹುಬ್ಬಳ್ಳಿಯಲ್ಲಿ 1 ಕೋಟಿ ರೈತರೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಬ್ಬಿಗೆ ದರ ಹೆಚ್ಚಳ ಮಾಡಬೇಕು. ಪ್ರತಿಟನ್‌ಗೆ ಕನಿಷ್ಠ 5500 ರು. ದರ ನಿಗದಿ ಪಡಿಸಬೇಕು. ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸು ಜಾರಿ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅ.13ರಂದು ಬರೋಬ್ಬರಿ 36 ಗಂಟೆ ರಾಜ್ಯದ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ತಡೆಯನ್ನು ರೈತರು ನಡೆಸಿದ್ದರು. ಬಳಿಕ ಅ.14ರಿಂದ ಬೆಳಗಾವಿಯಿಂದ ಹುಬ್ಬಳ್ಳಿ ಚಲೋ ಪಾದಯಾತ್ರೆ ಆರಂಭಿಸಿದ್ದರು. ಹುಬ್ಬಳ್ಳಿಗೆ ಆಗಮಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸದ ಎದುರು ಪ್ರತಿಭಟನೆ ನಡೆಸುವುದಾಗಿ ಪಾದಯಾತ್ರೆ ನಡೆಸುತ್ತಿದ್ದರು.

ಸಂಧಾನ ಸಭೆ:

ಈ ನಡುವೆ ಯರಿಕೊಪ್ಪದ ಬಳಿ ಬೆಳಗಾವಿ, ಧಾರವಾಡ ಜಿಲ್ಲಾಧಿಕಾರಿಗಳು ರೈತರೊಂದಿಗೆ ಭಾನುವಾರ ಸಭೆ ನಡೆಸಿದ್ದರು. ಆದರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಭೆ ನಡೆಸಿ ಭರವಸೆ ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದರು. ಅದರಂತೆ ಕೇಂದ್ರ ಸಚಿವ ಜೋಶಿ ನೇತೃತ್ವದಲ್ಲಿ ಭಾನುವಾರ ತಡರಾತ್ರಿ 1ರ ಸುಮಾರಿಗೆ ಹುಬ್ಬಳ್ಳಿ ಸರ್ಕೀಟ್‌ ಹೌಸ್‌ನಲ್ಲಿ ಸಭೆ ಆರಂಭವಾಯಿತು.

ಕಬ್ಬು ಬೆಳೆಗಾರರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ ಸಚಿವ ಜೋಶಿ ಅವರು, ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿ ಕೇಂದ್ರಕ್ಕೆ ವರದಿ ಕೊಡಲು ಸಮಿತಿ ರಚಿಸಿಯಾಗಿದೆ. ಅದು ಶೀಘ್ರದಲ್ಲೇ ರಾಜ್ಯಕ್ಕೆ ಬರಲಿದೆ. ಜತೆಗೆ ಕಬ್ಬು ಬೆಳೆಯುವ ಎಲ್ಲ ರಾಜ್ಯಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದೆ. ಬಳಿಕ ರೈತರ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಯಾವಾಗಲೂ ರೈತರ ಪರವಾಗಿಯೇ ಇದೆ ಎಂದು ಭರವಸೆ ನೀಡಿದರು.

ಇದಕ್ಕೆ ಒಪ್ಪಿಕೊಂಡ ಕಬ್ಬು ಬೆಳೆಗಾರರು, ಈ ಬಗ್ಗೆ ರೈತರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದರು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌, ಶಾಸಕ ಸಿ.ಸಿ.ಪಾಟೀಲ, ಮಹೇಶ ಟೆಂಗಿನಕಾಯಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ, ಶಶಿಕಾಂತ ಗುರೂಜಿ, ರಾಜೇಂದ್ರ ಗಡದರಿ, ನಿತಿನ್ ಮ್ಯಾಗೇರಿ, ಪ್ರೇಮ್ ಚೌಗುಲಾ, ಮಹಾಲಿಂಗಪ್ಪ ತೇಲಿ, ಮಲ್ಲಪ್ಪ ಅಂಗಡಿ ಹಾಗೂ ಕಿಶನ್ ನಂದಿ ಮತ್ತಿತರರು ಇದ್ದರು.

ಸರ್ಕಾರಕ್ಕೆ ಗಡುವು

ಈ ನಡುವೆ ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿರುವ ಧಾರವಾಡ ತಾಲೂಕಿನ ಯರಿಕೊಪ್ಪದ ಬಳಿ ಮತ್ತೆ ಸೋಮವಾರ ಬೆಳಿಗ್ಗೆ 11ರ ಸುಮಾರಿಗೆ ರೈತರು ಸಭೆ ನಡೆಸಿದರು. ಎಂಎಸ್‌ಪಿ ಘೋಷಣೆಗೆ ಕೇಂದ್ರ ಸಚಿವರು ಕಾಲಾವಕಾಶ ಕೇಳಿದ್ದಾರೆ. ಅವರ ಮಾತಿಗೆ ಬೆಲೆಕೊಟ್ಟು ಸದ್ಯಕ್ಕೆ ಪ್ರತಿಭಟನೆ ಹಿಂಪಡೆಯೋಣ. ನ.26ರವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಗಡುವು ನೀಡೋಣ ಎಂದು ರೈತ ಮುಖಂಡರು ತಿಳಿಸಿದರು.

ಇದರೊಂದಿಗೆ ಬೆಳಗಾವಿಯಲ್ಲಿ ನಾಲ್ಕೈದು ದಿನಗಳಲ್ಲಿ ಕಾರ್ಖಾನೆಯ ಮಾಲೀಕರ ಹಾಗೂ ರೈತರ ಮುಖಂಡರ ಸಭೆ ನಡೆಸಬೇಕು. ಸಕ್ಕರೆ ಕಾರ್ಖಾನೆಯಿಂದ ಯಾವುದೇ ಕಾರಣಕ್ಕೂ ಸಕ್ಕರೆ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು. ನ.26ರೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ನ.27ರಂದು 1 ಕೋಟಿ ರೈತರನ್ನು ಸೇರಿಸಿ ಹುಬ್ಬಳ್ಳಿಯಲ್ಲಿ ಮತ್ತೆ ಹೋರಾಟ ಆರಂಭಿಸೋಣ ಎಂದು ಎಚ್ಚರಿಕೆಯನ್ನು ರೈತರ ಸಭೆಯಲ್ಲಿ ನೀಡಲಾಯಿತು.

ಅದರಂತೆ ಇದೀಗ ನ.26ರವರೆಗೆ ಗಡವು ನೀಡಿರುವ ರೈತರು, ಅಲ್ಲಿವರೆಗೂ ಕೇಂದ್ರ ನೇಮಿಸಿರುವ ಸಮಿತಿ ಬರಬೇಕು. ಅದು ತನ್ನ ವರದಿಯನ್ನೂ ನೀಡಬೇಕು. ಜತೆಗೆ ಕೇಂದ್ರ ಸರ್ಕಾರ ಕೂಡ ದರ ಏರಿಕೆ ಘೋಷಣೆಯನ್ನು ಅಷ್ಟರೊಳಗೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಶೀಘ್ರದಲ್ಲಿ ಸಮಿತಿ ಭೇಟಿ

ರೈತ ಮುಖಂಡರ ಜೊತೆ ಸೌಹಾರ್ದಯುತವಾಗಿ ಸಭೆ ನಡೆದಿದೆ. ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿದ್ದು, ಅದು ರಾಜ್ಯಕ್ಕೆ ಭೇಟಿ ನೀಡಬೇಕೆಂದರೆ ಹೋರಾಟ ನಿಲ್ಲಿಸಬೇಕು ಎನ್ನುವ ಕುರಿತು ತಿಳಿಸಲಾಗಿದೆ. ಅದಕ್ಕೆ ರೈತ ಮುಖಂಡರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲೇ ಸಮಿತಿ ಬಂದು ರೈತರ ಸಮಸ್ಯೆ ಆಲಿಸಲಿದೆ.

- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

1 ಕೋಟಿ ರೈತರಿಂದ ಹೋರಾಟ

ಎಂಎಸ್‌ಪಿ ಘೋಷಣೆ ಸೇರಿದಂತೆ ವಿವಿಧ ಸಮಸ್ಯೆ ಬಗೆಹರಿಸಲು ಕೇಂದ್ರ ಸಚಿವರು ಸಮಯ ಕೇಳಿದ್ದಾರೆ. ಅದರಂತೆ ಸದ್ಯಕ್ಕೆ ಹೋರಾಟ ಹಿಂಪಡೆದಿದ್ದೇವೆ. ನಮ್ಮ ಬೇಡಿಕೆ ಈಡೇರಿಸಲು ನ.26ರವರೆಗೆ ಗಡುವು ನೀಡಲಾಗಿದೆ. ಅಷ್ಟರಲ್ಲೇ ನಮ್ಮ ಬೇಡಿಕೆ ಈಡೇರಿಸಬೇಕು. ಬೇಡಿಕೆ ಈಡೇರದಿದ್ದಲ್ಲಿ ನ.27ರಂದು 1 ಕೋಟಿ ರೈತರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ.

- ಚೂನಪ್ಪ ಪೂಜಾರಿ, ಕಬ್ಬು ಹೋರಾಟಗಾರ

ಏನೇನಾಯ್ತು?

- ಕಬ್ಬು ಬೆಳೆಗಾರರ ಮುಖಂಡರ ಜತೆ ಧಾರವಾಡ, ಬೆಳಗಾವಿ ಜಿಲ್ಲಾಧಿಕಾರಿಗಳಿಂದ ಭಾನುವಾರ ಸಭೆ

- ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೇ ಸಭೆ ನಡೆಸಿ ಭರವಸೆ ನೀಡಬೇಕು ಎಂದು ರೈತರ ಬಿಗಿಪಟ್ಟು

- ಅದರಂತೆ ಭಾನುವಾರ ತಡ ರಾತ್ರಿ 1ಕ್ಕೆ ಹುಬ್ಬಳ್ಳಿ ಸರ್ಕೀಟ್‌ ಹೌಸ್‌ನಲ್ಲಿ ರೈತರು- ಜೋಶಿ ಮಧ್ಯೆ

- ರೈತರ ಬೇಡಿಕೆಗಳನ್ನು ಸುದೀರ್ಘವಾಗಿ ಆಲಿಸಿದ ಜೋಶಿ ಹಾಗೂ ಬಿಜೆಪಿ ಇತರೆ ಜನಪ್ರತಿನಿಧಿಗಳು

- ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ಸಮಿತಿ ರಚಿಸಲಾಗಿದೆ. ಅದು ವರದಿ ಕೊಡಲಿ ಎಂದ ಜೋಶಿ

- ಮೋದಿ ಸರ್ಕಾರ ರೈತರ ಪರವಾಗಿದ್ದು, ವರದಿ ಬಳಿಕ ಬೇಡಿಕೆ ಈಡೇರಿಕೆಗೆ ಕ್ರಮ ಎಂದು ಆಶ್ವಾಸನೆ

- ಹೋರಾಟ ಹಿಂಪಡೆಯುವ ಕುರಿತು ರೈತರ ಜತೆ ಚರ್ಚಿಸುವುದಾಗಿ ಹೇಳಿದ ರೈತ ಮುಖಂಡರು

- ಸೋಮವಾರ ಬೆಳಗ್ಗೆ 11ಕ್ಕೆ ರೈತರ ಸಭೆ. ನ.26ರವರೆಗೂ ಗಡುವು ನೀಡಲು ನಿರ್ಧರಿಸಿ ಹೋರಾಟ ಅಂತ್ಯ

ಬೇಗ ಮಧ್ಯಪ್ರವೇಶ ಮಾಡಿ: ಪ್ರಧಾನಿಗೆ ಡಿಕೆಶಿಯಿಂದ ಪತ್ರ

ಬೆಂಗಳೂರು: ರಾಜ್ಯಾದ್ಯಂತ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಸದ್ಯದಲ್ಲೇ ಕಬ್ಬು ಅರೆಯುವ ಋತು ಆರಂಭವಾಗಲಿದೆ. ಹೀಗಾಗಿ ರಾಜ್ಯ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆ, ಗೃಹ ಮತ್ತು ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ ಎಂಎಸ್ಪಿ ನಿಗದಿ, ಎಫ್ಆರ್‌ಪಿ ಮೂಲ ಇಳುವರಿಯನ್ನು ಶೇ. 9.50ಕ್ಕೆ ಮರುನಿಗದಿ ಮಾಡುವುದು. ಕಬ್ಬು ಆಧಾರಿತ ಎಥನಾಲ್ ಬೆಲೆಯನ್ನು ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ತುರ್ತಾಗಿ ಪರಿಗಣಿಸಿ ಈಡೇರಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ಎಐಬಿಇ ಎಕ್ಸಾಂ ಪಾಸಾಗದೆ ವಕೀಲಿಕೆ ನಡೆಸ್ತಿರೋರಿಗೆ ಬಿಗ್ ಶಾಕ್! ಹೈಕೋರ್ಟ್ ಮಹತ್ವದ ಆದೇಶವೇನು?
10 ದಿನಗಳ ದಸರಾ ಮುಕ್ತಾಯಕ್ಕೆ ಇನ್ನೊಂದೇ ದಿನ ಬಾಕಿ! ಮೈಸೂರಿನಲ್ಲಿ ನಾಳೆ ಹಲವು ಪ್ರಥಮಗಳ ಜಂಬೂ ಸವಾರಿ, ವಿಶೇಷತೆ ಏನು ಗೊತ್ತಾ?