ಮಡಿಕೇರಿಯ ಹೊಟೇಲ್, ಬೇಕರಿಗಳಲ್ಲಿ ರುಚಿ ಅಂತ ತಿಂದ್ರೆ ರೋಗ ಗ್ಯಾರಂಟಿ..!

By Girish Goudar  |  First Published Nov 16, 2023, 8:47 PM IST

ಹೊಟೇಲ್‌ಗಳ ಹೆಸರೇ ತುಂಬಾ ಅಟ್ರಾಕ್ಷನ್, ನೋಡೋಕೆ ಕಲರ್ಫುಲ್ ಹೊಟೇಲ್. ತಿಂದರೆ ನಾಲಿಗೆಗೆ ಅದೇನು ರುಚಿ ಅಂತೀರಾ. ಇಷ್ಟೆಲ್ಲಾ ರುಚಿ ರುಚಿಯಾಗಿ ಕೊಡುವ ಇವರು ಅದು ಹೇಗೆ ಸ್ವಚ್ಛತೆ ಕಾಪಾಡುತ್ತಿದ್ದಾರೆ. ಆಹಾರದ ಗುಣಮಟ್ಟ ಕಾಪಾಡುತ್ತಿದ್ದಾರೆ ಎಂದು ಪರಿಶೀಲನೆಗೆ ಹೋದ ಮಡಿಕೇರಿ ನಗರಸಭೆ ಆರೋಗ್ಯ ಅಧಿಕಾರಿಗಳು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರಿಗೆ ಅಚ್ಚರಿ ಕಾದಿತ್ತು.


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ನ.16): ಕೊಡಗು ಜಿಲ್ಲೆ ಎಂದರೆ ಅದು ದಕ್ಷಿಣ ಕಾಶ್ಮೀರ, ಕರ್ನಾಟಕದ ಸ್ವಿಡ್ಜರ್ ಲ್ಯಾಂಡ್ ಎಂದೆಲ್ಲಾ ಖ್ಯಾತಿ ಹೊಂದಿದೆ. ಈ ಪ್ರವಾಸಿ ಜಿಲ್ಲೆಯನ್ನು ನೋಡುವುದಕ್ಕೆ ಬರುವ ಪ್ರವಾಸಿಗರು ಅಂದ ಚಂದವಾಗಿ ಕಾಣುವ ಹೊಟೇಲ್‌ಗಳಲ್ಲಿ ರುಚಿ ರುಚಿಯಾಗಿ ಸಿಗುತ್ತೆ ಅಂತ ಖುಷಿ ಖುಷಿಯಾಗಿ ಊಟ, ತಿಂಡಿ, ಸ್ನಾಕ್ಸ್ ಗಳು ತಿನ್ನುತ್ತಾರೆ. ಕೆಲ ಹೊಟೇಲ್‌ಗಳಲ್ಲಿ ತಿಂದರೆ ರೋಗ ಬರುವುದು ಗ್ಯಾರೆಂಟಿ. 

Tap to resize

Latest Videos

undefined

ಹೊಟೇಲ್‌ಗಳ ಹೆಸರೇ ತುಂಬಾ ಅಟ್ರಾಕ್ಷನ್, ನೋಡೋಕೆ ಕಲರ್ಫುಲ್ ಹೊಟೇಲ್. ತಿಂದರೆ ನಾಲಿಗೆಗೆ ಅದೇನು ರುಚಿ ಅಂತೀರಾ. ಇಷ್ಟೆಲ್ಲಾ ರುಚಿ ರುಚಿಯಾಗಿ ಕೊಡುವ ಇವರು ಅದು ಹೇಗೆ ಸ್ವಚ್ಛತೆ ಕಾಪಾಡುತ್ತಿದ್ದಾರೆ. ಆಹಾರದ ಗುಣಮಟ್ಟ ಕಾಪಾಡುತ್ತಿದ್ದಾರೆ ಎಂದು ಪರಿಶೀಲನೆಗೆ ಹೋದ ಮಡಿಕೇರಿ ನಗರಸಭೆ ಆರೋಗ್ಯ ಅಧಿಕಾರಿಗಳು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರಿಗೆ ಅಚ್ಚರಿ ಕಾದಿತ್ತು.

ಮಡಿಕೇರಿ: ಕರುಳ ಬಳ್ಳಿಯ ತಾಯಿ ಜೊತೆ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ..!

ಆಹಾ ಎಂತಹ ರುಚಿ ಎಂದು ಚಪ್ಪರಿಸಿ ತಿನ್ನುವುದಕ್ಕೂ ಮೊದಲು ಒಮ್ಮೆ ಆ ಹೊಟೇಲ್ಗಳ ಅಡುಗೆ ಕೋಣೆ ನೋಡಿದರೆ ತಿಂದಿರುವುದನ್ನು ಕಕ್ಕಿಬಿಡ್ತೀರಾ ಜೋಕೆ. ಹೌದು ಹೊರಗೆ ಗರಿ ಗರಿಯಾಗಿರುವ ಕಬಾಬ್, ಗಮ್ಮ್ ಎನ್ನುವ ಬಿರಿಯಾನಿ. ಆದರೆ ಒಳಗಡೆ ಸೀನೇ ಬೇರೆ. ಅತ್ಯಂತ ಕಳಪೆಯಾದ ಚಿಕನ್, ಮಟನ್, ಗಲೀಜಾದ ಅಡುಗೆ ಮನೆ. ಕೊಳೆತು ನಾರುತ್ತಿರುವ ಸ್ಥಳ. ಆಹಾರ ಪದಾರ್ಥಗಳಿರುವ ಯಾವುದೇ ಪಾತ್ರೆಗಳನ್ನು ಮುಚ್ಚಿಡದೆ ಎಲ್ಲವನ್ನೂ ತೆರೆದೇ ಬಿಟ್ಟು, ಜೇನಿನ ಗೂಡಿಗೆ ಮುತ್ತಿಕೊಳ್ಳುವಂತೆ ಮುತ್ತುವ ನೊಣ. ಅದಕ್ಕೆ ಜಿರಳೆ ಬಿದ್ದರೂ ಬೀಳಬಹುದು. ಇನ್ನು ಬೇಕರಿಯಲ್ಲೋ ಅದೇನು ಸ್ವೀಟು, ಖರಿದ ತಿನಿಸುಗಳು ಅಂತೀರಾ. ಆದರೆ ಅವುಗಳನ್ನು ರೆಡಿ ಮಾಡುವ ಜಾಗ ಪಾತ್ರೆಗಳನ್ನು ನೋಡಿದರೆ ಮಾತ್ರ ರೋಗ ಖಚಿತ. ಹೀಗೆ ಅಶುಚ್ಚತ್ವದಿಂದ ಅಡುಗೆ ಮಾಡುತ್ತಿದ್ದೀರಲ್ಲ, ಇದನ್ನು ತಿಂದ ಜನರ ಆರೋಗ್ಯ ಏನಾಗಬಹುದು ಎಂದು ಪ್ರಶ್ನಿಸಿದ ನಗರಸಭೆ ಅಧಿಕಾರಿಗಳ ವಿರುದ್ಧ ಕೆಲ ಹೊಟೇಲ್ ಮಾಲೀಕರು ರೇಗಾಡಿದರು. ಇವರ ಸಿಟ್ಟಿಗೆಲ್ಲಾ ಸೊಪ್ಪು ಹಾಕದ ಅಧಿಕಾರಿಗಳು ಎರಡು ಮೂರು ಹೊಟೇಲ್‌ಗಳಿಗೆ ತಲಾ ಐದು ಸಾವಿರದಂತೆ ದಂಡ ಹಾಕಿ ಎಚ್ಚರಿಕೆ ನೀಡಿದ್ದೇವೆ ಎಂದಿದ್ದಾರೆ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್. 

ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ಮಂಜಿನ ನಗರಿಯೆಂದು ಖ್ಯಾತಿ ಪಡೆದುಕೊಂಡಿರುವ  ಮಡಿಕೇರಿ ನಗರದಲ್ಲಿ ಕೆಲವು ಹೊಟೇಲ್ ಮತ್ತು ಬೇಕರಿಗಳಲ್ಲಿ ಇಂತಹ ಅಶುಚಿತ್ವ ಕಂಡು ಬಂದಿರುವುದಕ್ಕೆ ಮಡಿಕೇರಿ ನಗರಸಭೆ ಆಡಳಿತ ಮಂಡಳಿ ಮತ್ತು ಆಯುಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. 

ಆದಿವಾಸಿ ಜನರ ಅಭಿವೃದ್ಧಿಗೆ ಶ್ರಮಿಸಿದ ಚೇತನ ಬಿರ್ಸಾ ಮುಂಡ: ಹೊನ್ನೇಗೌಡ

ಪ್ರವಾಸೋದ್ಯಮ ಜಿಲ್ಲೆಯಾಗಿರುವುದರಿಂದ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಮಡಿಕೇರಿಗೆ ಬರುತ್ತಾರೆ. ಇಂತಹ ಆಹಾರ ಸೇವಿಸಿ ಅವರ ಆರೋಗ್ಯದಲ್ಲಿ ಏರುಪೇರುಗಳಾದರೆ ಮಡಿಕೇರಿ ಅಷ್ಟೇ ಅಲ್ಲ, ಕೊಡಗಿನ ಪ್ರವಾಸೋದ್ಯಮಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಹೊಟೇಲ್ ಮತ್ತು ಬೇಕರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಮತ್ತೆ ಇದೇ ರೀತಿ ಅಶುಚಿತ್ವ ಕಂಡು ಬಂದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅವರಿಗೆ ಕೊಟ್ಟಿರುವ ವ್ಯಾಪಾರ ಉದ್ದಿಮೆಯ ಪರವಾನಗಿಯನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ನಗರಸಭೆ ಆಯುಕ್ತ ವಿಜಯ್ ಕುಮಾರ್ ಎಚ್ಚರಿಸಿದ್ದಾರೆ. 

ಒಟ್ಟಿನಲ್ಲಿ ಮೇಲೆಲ್ಲಾ ತಳುಕು, ಒಳಗೆಲ್ಲಾ ಹುಳುಕು ಎನ್ನುವಂತೆ ಮಂಜಿನ ನಗರಿ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಕೆಲವು ಹೊಟೇಲ್‌ಗಳು ಮತ್ತು ಬೇಕರಿಗಳು ಅಶುಚಿತ್ವದಿಂದ ಪ್ರವಾಸಿಗರಿಗೆ ಆಹಾರ ಪೂರೈಕೆ ಮಾಡುತ್ತಿವೆ ಎನ್ನುವುದು ಅಚ್ಚರಿಯ ವಿಷಯ. ನೀವು ಅವುಗಳನ್ನು ಸೇವಿಸುವ ಮುನ್ನ ಒಮ್ಮೆ ಯೋಚಿಸಿ.

click me!