ಚಡ್ಡಿಯಲ್ಲಿ ಮೂತ್ರ ಮಾಡಿಕೊಂಡ ಬಾಲಕನಿಗೆ ಹೀಗ್ ಹೊಡೆಯೋದಾ!

By Web DeskFirst Published Oct 2, 2019, 7:53 AM IST
Highlights

ಹಾಸ್ಟೆಲ್‌ ವಿದ್ಯಾರ್ಥಿ ಹೊಟ್ಟೆಗೆ ಒದ್ದ ವಾರ್ಡನ್‌: ಬಾಲಕನ ಸ್ಥಿತಿ ಗಂಭೀರ| ಚಡ್ಡಿಯಲ್ಲಿ ಮೂತ್ರ ಮಾಡಿಕೊಂಡಿದ್ದಕ್ಕೆ ಅಮಾನುಷ ಥಳಿತ| ಹೊಟ್ಟೆಭಾಗಕ್ಕೆ ತೀವ್ರ ಪೆಟ್ಟು, 27 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಬಾಲಕ| ಬಾಲಕ ಹಾಸಿಗೆಯಲ್ಲೇ ಮೂತ್ರ ಮಾಡಿಕೊಂಡಿದ್ದರಿಂದ ಹಾಸ್ಟೆಲ್‌ ವಾರ್ಡನ್‌ ಹೊಟ್ಟೆಗೆ ಒದ್ದಿದ್ದಾನೆ| ಹೊಟ್ಟೆ ಭಾಗಕ್ಕೆ ರಭಸವಾಗಿ ಒದ್ದಿದ್ದರಿಂದ ಬಾಲಕ ಅನಾರೋಗ್ಯಕ್ಕೆ ಒಳಗಾಗಿದ್ದಾನೆ| 

ಹುಬ್ಬಳ್ಳಿ(ಅ.2): ಚಡ್ಡಿಯಲ್ಲಿ ಮೂತ್ರ ಮಾಡಿಕೊಂಡ ಹಾಸ್ಟೆಲ್‌ ವಿದ್ಯಾರ್ಥಿಯ ಹೊಟ್ಟೆಗೆ ವಾರ್ಡನ್‌ ಬಲವಾಗಿ ಒದ್ದ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗಾಯಾಳು ಬಾಲಕ ನಗರದ ಕಿಮ್ಸ್‌ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ.

ಇಲ್ಲಿನ ನೇಕಾರನಗರದ ನಿವಾಸಿ ವಿಜಯ ಮೃತ್ಯುಂಜಯ ಹಿರೇಮಠ (9) ಗಂಭೀರವಾಗಿ ಗಾಯಗೊಂಡ ಬಾಲಕ.

ಈತ ಹಾನಗಲ್‌ನ ನವೀನ್‌ ಎಂಬ ಖಾಸಗಿ ಸ್ಕೂಲ್‌ನಲ್ಲಿ ಓದುತ್ತಿದ್ದು, ಅಲ್ಲಿನ ಛಾತ್ರಾಲಯ ಎಂಬ ಖಾಸಗಿ ವಸತಿ ನಿಲಯದಲ್ಲಿ ವಾಸವಾಗಿದ್ದಾನೆ. ಓದುವ ಕನಸು ಕಂಡು ಹಾಸ್ಟೆಲ್‌ ಸೇರಿದ್ದ ಬಾಲಕ ಈಗ ವಾರ್ಡನ್‌ನ ಅಮಾನುಷ ಕೃತ್ಯದಿಂದಾಗಿ ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆ ಸೇರುವಂತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಕಳೆದ 27 ದಿನಗಳಿಂದ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನಿಗೆ ಮೂರು ದಿನಗಳ ಹಿಂದೆ ಒಂದು ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಇನ್ನೊಂದು ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಕಿಮ್ಸ್‌ ಹೊರ ಪೊಲೀಸ್‌ ಠಾಣೆಯವರು ಹಾನಗಲ್‌ ಪೊಲೀಸ್‌ ಠಾಣೆಯವರಿಗೆ ತಿಳಿಸಿದ್ದು, ಅಲ್ಲಿನ ಪೊಲೀಸರು ಬಂದು ಬಾಲಕನ ತಂದೆಯಿಂದ ಮಾಹಿತಿ ಪಡೆದು ತೆರಳಿದ್ದಾರೆ.

ಆಗಿದ್ದೇನು?

ಬಾಲಕ ವಿಜಯ, ಹಾಸಿಗೆಯಲ್ಲೇ ಮೂತ್ರ ಮಾಡಿಕೊಂಡಿದ್ದನಂತೆ. ಇದರಿಂದ ಕೋಪಿತನಾದ ಹಾಸ್ಟೆಲ್‌ ವಾರ್ಡನ್‌ ಶ್ರವಣಕುಮಾರ ಎಂಬಾತ ಹೊಟ್ಟೆಗೆ ಒದ್ದಿದ್ದಾನೆ. ಇದರಿಂದ ಗಾಬರಿಯಾದ ಬಾಲಕ ವಿಜಯ್‌ ಹಾಸಿಗೆಯಲ್ಲೇ ಮಲ ಮಾಡಿಕೊಂಡಿದ್ದಾನೆ. ಆಗ ಇನ್ನಷ್ಟು ಕೋಪಗೊಂಡ ವಾರ್ಡನ್‌ ಶ್ರವಣಕುಮಾರನನ್ನು ಮತ್ತೆ ಹಿಗ್ಗಾಮುಗ್ಗಾ ಥಳಿಸಿದ್ದಾನಂತೆ. ಹೊಟ್ಟೆ ಭಾಗಕ್ಕೆ ರಭಸವಾಗಿ ಒದ್ದಿದ್ದರಿಂದ ಬಾಲಕ ಅನಾರೋಗ್ಯಕ್ಕೆ ಒಳಗಾಗಿದ್ದಾನೆ. ಆದರೂ ಬಾಲಕನಿಗೆ ಸರಿಯಾದ ಚಿಕಿತ್ಸೆ ಕೊಡಿಸದೇ ಹಾಸ್ಟೆಲ್‌ನಲ್ಲಿ ಮಲಗಿಸಲಾಗಿದೆ. ಈ ಘಟನೆಯ ಕುರಿತಂತೆ ಫೋನ್‌ ಮಾಡಿ ಪಾಲಕರಿಗೆ ತಿಳಿಸಿದರೆ ಮತ್ತೆ ಥಳಿಸುವುದಾಗಿ ವಾರ್ಡನ್‌ ಬೆದರಿಕೆ ಹಾಕಿದ್ದನಂತೆ ವಾರ್ಡನ್‌.

ಒಂದೆರಡು ದಿನಗಳ ಬಳಿಕ ಬಾಲಕನ ತಂದೆ ಮೃತ್ಯುಂಜಯ ಹಾಸ್ಟೆಲ್‌ಗೆ ಫೋನ್‌ ಮಾಡಿದ್ದಾರೆ. ಆಗಲೂ ಬಾಲಕ ವಾರ್ಡನ್‌ ಹೊಡೆದಿರುವುದನ್ನು ಹೇಳಿಲ್ಲ. ಆದರೆ ಆತನ ಧ್ವನಿಯಿಂದ ಆತನ ಆರೋಗ್ಯ ಸರಿಯಿಲ್ಲ ಎಂಬುವುದನ್ನು ಅವರು ಗುರುತಿಸಿದ್ದಾರೆ. ಈ ಬಗ್ಗೆ ವಾರ್ಡನ್‌ಗೆ ಕೇಳಿದಾಗ ನಿಮ್ಮ ಮಗನಿಗೆ ಜ್ವರ ಬಂದಿದೆ, ಇಲ್ಲೇ ತೋರಿಸಿದ್ದೇವೆ. ನೀವು ಬರಬೇಡಿ ಎಂದು ಸುಳ್ಳು ಹೇಳಿದ್ದಾನೆ.

ಆದರೂ ಮಗನನ್ನು ನೋಡಬೇಕೆಂಬ ಆಸೆಯಿಂದ ತಂದೆ ಮೃತ್ಯುಂಜಯ ಹಾಗೂ ತಾಯಿ ಇಬ್ಬರು ಸೇರಿಕೊಂಡು ಹಾಸ್ಟೆಲ್‌ಗೆ ತೆರಳಿದ್ದಾರೆ. ಅಲ್ಲಿ ಮಗನ ಹೊಟ್ಟೆ ಊದಿಕೊಂಡಿತ್ತು. ಒಂದೇ ಸಮನೆ ಅಳುತ್ತಿದ್ದ. ಮಗನಿಗೆ ಚಿಕಿತ್ಸೆ ಕೊಡಿಸಿದರಾಯಿತೆಂದು ಆತನನ್ನು ಕರೆದು ತಂಡು ಕಿಮ್ಸ್‌ಗೆ ದಾಖಲಿಸಿದ್ದೇವೆ. ಹಾಸ್ಟೆಲ್‌ನಿಂದ ಹೊರಬಂದ ಬಳಿಕವಷ್ಟೇ ವಾರ್ಡನ್‌ ತನಗೆ ಹೊಡೆದಿರುವುದನ್ನು ಮಗ ನಮ್ಮೆದುರು ಹೇಳಿಕೊಂಡ ಎಂದು ತಾಯಿ ಸುಜಾತಾ ಕಣ್ಣೀರಾದರು.
ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹೀಗಾಗಿ ಮಕ್ಕಳನ್ನು ಹಾಸ್ಟೆಲ್‌ನಲ್ಲಿಟ್ಟು ಓದಿಸುತ್ತಿದ್ದೇವೆ. ಇನ್ನಿಬ್ಬರು ಕೂಡ ಬೇರೆ ಹಾಸ್ಟೆಲ್‌ನಲ್ಲಿ ಉಳಿದು ಓದುತ್ತಿದ್ದಾರೆ. ಮೂರನೆಯ ಮಗ ವಿಜಯನನ್ನು ಜುಲೈನಲ್ಲಿ ಹಾಸ್ಟೆಲ್‌ಗೆ ಸೇರಿಸಲಾಗಿತ್ತು. 15 ದಿನಗಳಿಗೊಮ್ಮೆ ಕರೆ ಮಾಡಿ ಮಾತನಾಡುತ್ತಿದ್ದೆವು. ಈಗ ನೋಡಿದರೆ ಮಗನನ್ನು ಈ ರೀತಿ ಮಾಡಿದ್ದಾರೆ ವಾರ್ಡನ್‌ ಎಂದು ತಾಯಿ ರೋದಿಸುತ್ತಾರೆ.

ಸದ್ಯ ವಿಜಯ್‌ಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೊಂದು ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿದ ಬಾಲಕನ ತಂದೆ ಮೃತ್ಯುಂಜಯ ಹಿರೇಮಠ ಅವರು, ನನ್ನ ಮಗ ವಿಜಯನಿಗೆ ವಾರ್ಡನ್‌ ಹೊಡೆದಿದ್ದಾನೆ. ಈ ವಿಷಯವನ್ನು ನನ್ನ ಮಗನೇ ಹೇಳಿದ್ದಾನೆ. ನಾವು ಬಡವರು. ಮನೆಯಲ್ಲಿದ್ದರೆ ಸರಿಯಾಗಿ ಓದಲ್ಲ ಎಂದು ಹಾಸ್ಟೆಲ್‌ಗೆ ಸೇರಿಸಿದರೆ ಅಲ್ಲಿ ವಾರ್ಡನ್‌ ಈ ರೀತಿ ಹೊಡೆದಿದ್ದಾರೆ. ಆಗಲೇ ಒಂದು ಶಸ್ತ್ರಚಿಕಿತ್ಸೆ ಆಗಿದೆ. ಇನ್ನೊಂದು ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. 

click me!