
ವಿಜಯನಗರ (ಆ.31): ವಿಜಯನಗರ ಜಿಲ್ಲೆಯ ಕೇಂದ್ರವಾಗಿರುವ ಹೊಸಪೇಟೆ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಯುವಕನೊಬ್ಬ ಹುಚ್ಚಾಟದಿಂದಾಗಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಪಟಾಕಿ ಬಾಕ್ಸ್ ಅನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ಸಿಡಿಸಿದ ವ್ಯಕ್ತಿಯ ವಿರುದ್ಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ನಡೆದ ಸ್ಥಳ:
ಹೊಸಪೇಟೆ ನಗರದ ಜಾಮಿಯಾ ಮಸೀದಿ ಬಳಿ ಮೂರನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಮೆರವಣಿಗೆಯಲ್ಲಿದ್ದ ತಿರುಮಲನಾಯ್ಕ್ (40) ಎಂಬ ವ್ಯಕ್ತಿ, ಪಟಾಕಿ ಬಾಕ್ಸ್ ಒಂದನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ಸಿಡಿಸಲು ಮುಂದಾಗಿದ್ದಾನೆ. ಈ ಅಪಾಯಕಾರಿ ಕೃತ್ಯವು ಅಲ್ಲಿದ್ದ ಜನರಲ್ಲಿ ಆತಂಕ ಸೃಷ್ಟಿಸಿತು.
ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ:
ಯುವಕನ ಈ ಹುಚ್ಚಾಟವನ್ನು ಗಮನಿಸಿದ ಹೊಸಪೇಟೆ ಪಟ್ಟಣ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಸ್.ಪಿ. ನಾಯಕ್ ತಕ್ಷಣ ಕಾರ್ಯಪ್ರವೃತ್ತರಾದರು. ತಮ್ಮ ಸಮಯಪ್ರಜ್ಞೆಯಿಂದ ಅವರು ಮೆರವಣಿಗೆಯಲ್ಲಿ ನುಗ್ಗಿ ತಲೆಯ ಮೇಲಿದ್ದ ಪಟಾಕಿ ಬಾಕ್ಸ್ ಅನ್ನು ತಕ್ಷಣವೇ ಕಿತ್ತುಹಾಕಿದರು. ಇದರಿಂದ ದೊಡ್ಡ ಮಟ್ಟದ ಅನಾಹುತ ಸಂಭವಿಸುವುದು ತಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಕರಣ ದಾಖಲು:
ಪೊಲೀಸರ ಈ ಸಮಯೋಚಿತ ಕ್ರಮದಿಂದ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿ ತಪ್ಪಿದರೂ, ಪೊಲೀಸರು ಈ ನಿರ್ಲಕ್ಷ್ಯದ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತಿರುಮಲನಾಯ್ಕ್ ಅವರ ವಿರುದ್ಧ ಹೊಸಪೇಟೆ ನಗರ ಠಾಣೆಯಲ್ಲಿ ಪ್ರಿವೆನ್ಸನ್ ಆಕ್ಟ್ 126 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ರೀತಿಯ ಅಪಾಯಕಾರಿ ಕೃತ್ಯಗಳನ್ನು ಮೆರವಣಿಗೆಗಳಲ್ಲಿ ನಡೆಸದಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.