* ಪೇಜಾವರ ಶ್ರೀಗಳಿಗೆ ಮುತಾಲಿಕ್ ಅಭಿನಂದನೆ
* ಮುಸ್ಲಿಂ ವ್ಯಾಪಾರಿಗಳ ಬಗ್ಗೆ ತಮ್ಮ ಖಡಕ್ ನಿಲುವು ಪ್ರಕಟಿಸಿದ್ದ ಶ್ರೀಗಳು
* ಮುಸ್ಲೀಮರೇ ವರ್ತನೆ ಸರಿಪಡಿಸಿಕೊಂಡು ಬನ್ನಿ ಎಂದಿದ್ದಕ್ಕೆ ಅಭಿನಂದನೆ
ಉಡುಪಿ, (ಏ.17): ಮುಸ್ಲಿಂ ವ್ಯಾಪಾರಿಗಳ ಬಗ್ಗೆ ತಮ್ಮ ಖಡಕ್ ನಿಲುವು ಪ್ರಕಟಿಸಿರುವ ಪೇಜಾವರ ಶ್ರೀಗಳನ್ನು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಭಿನಂದಿಸಿದ್ದಾರೆ.
ಇತ್ತೀಚೆಗೆ ಮೂರು ದಿನಗಳ ಕಾಲ ಮುತಾಲಿಕ್ ಉಡುಪಿ ಪ್ರವಾಸದಲ್ಲಿದ್ದರು. ಕೋಮುಸೂಕ್ಷ್ಮ ಪ್ರದೇಶ ಗಂಗೊಳ್ಳಿಯಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲು ಬಂದಿದ್ದರು. ಆದರೆ ಜಿಲ್ಲಾಡಳಿತ ಅವರ ಉಡುಪಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ನಿಷೇಧದ ಹೊರತಾಗಿಯೂ ಸೀಮಿತ ಅನುಮತಿಗಳನ್ನು ಪಡೆದು ಪೇಜಾವರ ಮಠಕ್ಕೆ ಭೇಟಿ ನೀಡಿದ್ದರು.
ರಾಜ್ಯಾದ್ಯಂತ ಧರ್ಮ ಸಂಘರ್ಷ ಉಂಟಾದಾಗ, ಉಡುಪಿಯ ದೇವಸ್ಥಾನಗಳಲ್ಲಿ ಜಾತ್ರಾ ವ್ಯಾಪಾರ ನಡೆಸುವ ಮುಸಲ್ಮಾನರಿಗೆ ನಿಷೇಧ ಹೇರಲಾಗಿತ್ತು. ತಮಗೆ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಿ ಎಂದು ಕೇಳಲು ಮುಸಲ್ಮಾನ ಸಮುದಾಯದ ಬೀದಿಬದಿ ಮತ್ತು ಜಾತ್ರಾ ವ್ಯಾಪಾರಿಗಳು ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದರು. ಈ ವೇಳೆ ಪೇಜಾವರ ಶ್ರೀಗಳು ತಮ್ಮ ವರ್ತನೆಗಳನ್ನು ಸರಿಪಡಿಸಿಕೊಂಡು ಬನ್ನಿ ಮತ್ತೆ ಮಾತನಾಡೋಣ ಎಂದಿದ್ದರು. ಈ ಬಗ್ಗೆ ವ್ಯಾಪಕ ಪರ ವಿರೋಧ ಚರ್ಚೆಗಳು ಕೂಡ ನಡೆದಿದ್ದವು.
ಆದರೆ ಪ್ರಮೋದ್ ಮುತಾಲಿಕ್ ಮುಸಲ್ಮಾನರಿಗೆ ನೀವು ಕೊಟ್ಟ ಉತ್ತರ ಅದ್ಭುತವಾಗಿತ್ತು ಎಂದು ಶ್ಲಾಘಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪೇಜಾವರಮಠದ ವಿಶ್ವಪ್ರಸನ್ನ ತೀರ್ಥರು, ನಾನು ಯಾವುದೇ ಉದ್ದೇಶವನ್ನು ಇಟ್ಟುಕೊಂಡು ಈ ಮಾತು ಹೇಳಿರಲಿಲ್ಲ. ಆದರೆ ವಾಸ್ತವಾಂಶ ಹೇಳಿದ್ದೇನೆ ಎಂದರು. ಈ ರೀತಿಯ ಘಟನೆಗಳು ಆದಾಗ ಮಾತ್ರ ಅವರನ್ನು ತಿದ್ದಲು ಸಾಧ್ಯ, ಸದಾಕಾಲ ಸೌಹಾರ್ದ ಅಸಾಧ್ಯ ಎಂದು ಮುತಾಲಿಕ್ ಉತ್ತರಿಸಿದರು.
ಕೆಲವು ಜನ ಮುಸಲ್ಮಾನರಿಗೆ ಸತ್ಯ ಒಪ್ಪಿಕೊಳ್ಳಲು ಬಿಡುತ್ತಿಲ್ಲ. ನಿಮ್ಮ ಜೊತೆ ನಾವಿದ್ದೇವೆ ಎಂದು ಬೆಂಬಲಿಸುತ್ತಾರೆ. ಈ ರೀತಿ ಬೆಂಬಲಿಸುವ ಮಂದಿ ಎಲ್ಲರನ್ನೂ ಬೆಂಬಲಿಸಬೇಕು. ಉಡುಪಿಯಲ್ಲಿ ಆರಂಭವಾದ ಒಂದು ಘಟನೆಯಿಂದ ಇಡೀ ರಾಜ್ಯ ಬಡಿದೆಬ್ಬಿಸಿ ದಂತಾಗಿದೆ. ಈ ಬೆಳವಣಿಗೆ ನಿಧಾನ ತಣ್ಣಗಾಗುತ್ತಾ ಹೋಗುವ ಸಾಧ್ಯತೆ ಇದೆ. ಆದ್ದರಿಂದ ನಾವು ಹಿಂದುಗಳಲ್ಲಿ ನಿರಂತರ ಜನಜಾಗೃತಿ ಮಾಡುತ್ತಿರಬೇಕು ಎಂದು ಮುತಾಲಿಕ್ ಹೇಳಿದರು.
ಹಲಾಲ್ ಜಾಗೃತಿಯಿಂದ ಬೆಂಗಳೂರಿನಲ್ಲಿ 40ಕ್ಕೂ ಅಧಿಕ ಮುಸಲ್ಮಾನರ ಅಂಗಡಿಗಳು ಮುಚ್ಚಲಾಯಿತು. ಕೋಟ್ಯಾಂತರ ರೂಪಾಯಿ ಮುಸಲ್ಮಾನರಿಗೆ ನಷ್ಟವಾಗಿದೆ. ವ್ಯಾಪಾರಕ್ಕೆ ಸಮಸ್ಯೆಯಾದರೆ ಸೌಹಾರ್ದತೆ ಎನ್ನುತ್ತಾರೆ. ಆದರೆ ಹಿಂದೂಗಳು ಕೊಲೆಯಾದರೆ ಯಾಕೆ ಸೌಹಾರ್ದತೆ ನೆನಪಿಗೆ ಬರುವುದಿಲ್ಲ ಎಂದು ಮುತಾಲಿಕ್ ಪ್ರಶ್ನಿಸಿದರು.
ಮಿತಿಮೀರುತ್ತಿರುವ ಗೋ ಕಳ್ಳತನ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಪೇಜಾವರ ಸ್ವಾಮೀಜಿ, ಗೋವಿನಲ್ಲಿ ಶ್ರೇಷ್ಟವೆನಿಸಿದ ಕಪಿಲೆ ಹಸುವನ್ನೇ ಕಳ್ಳರು ಕದ್ದೊಯ್ಯುತ್ತಿದ್ದಾರೆ ಎಂದು ನೊಂದುಕೊಂಡರು. ಕೆಲಕಾಲದ ಗಳ ಸಂಭಾಷಣೆಯ ಬಳಿಕ ಪೇಜಾವರ ಮಠದ ವತಿಯಿಂದ ಮುತಾಲಿಕ್ ಅವರನ್ನು ಗೌರವಿಸಲಾಯಿತು.
ಶ್ರೀಗಳು ಹೇಳಿದ್ದೇನು?
ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ಪ್ರಾರಂಭಗೊಂಡು ಮುಸ್ಲಿಮರೊಂದಿಗಿನ ವ್ಯಾಪಾರಗಳನ್ನು ನಿರ್ಬಂಧಿಸುವವರೆಗೆ ಸಮಾಜದಲ್ಲಿ ಉಂಟಾಗಿರುವ ಕಂದಕಕ್ಕೆ ಪರಿಹಾರ ಕಂಡುಕೊಳ್ಳಲು ಸಹಕರಿಸಬೇಕೆಂದು ಮುಸ್ಲಿಂ ನಿಯೋಗ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮನವಿ ಮಾಡಿತ್ತು.
ನಿಯೋಗವನ್ನು ಭೇಟಿ ಮಾಡಿದ ಶ್ರೀಗಳು, ಈಗ ಉಂಟಾಗಿರುವ ಪರಿಸ್ಥಿತಿಗೆ ಮೂಲ ಕಾರಣ ಯಾರು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಗ ಉಂಟಾಗಿರುವ ಸಮಸ್ಯೆಗಳ ಹಿಂದೆ ಅನೇಕ ವರ್ಷಗಳ ನೋವು ಇದೆ. ಅದಕ್ಕೆ ಕಾರಣ ಯಾರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ, ಸಮಾಜದಲ್ಲಿ ಕಾನೂನು ಶಾಂತಿ ನೆಮ್ಮದಿಗೆ ವಿರುದ್ಧವಾಗಿ ವರ್ತಿಸುತ್ತಿರುವ ರೀತಿಯನ್ನು ಸರಿಪಡಿಸಿಕೊಂಡು ಬನ್ನಿ ಮತ್ತೊಮ್ಮೆ ಮಾತನಾಡೋಣ ಎಂದು ಮುಸ್ಲಿಂ ನಿಯೋಗಕ್ಕೆ ಶ್ರೀಗಳು ಸ್ಪಷ್ಟ ಸಂದೇಶ ರವಾನೆ ಮಾಡಿದ್ದರು.