
ಬೆಂಗಳೂರು(ಡಿ.10): ನಗರದ ಕೆ.ಜೆ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಮಾಜಿ ಮೇಯರ್ ಕೆ. ಸಂಪತ್ ರಾಜ್ ಸಲ್ಲಿಸಿರುವ ಜಾಮೀನು ಅರ್ಜಿ ಸಂಬಂಧ ಸಿಸಿಬಿಯ ಭಯೋತ್ಪಾದನೆ ನಿಗ್ರಹ ಘಟಕ ಮತ್ತು ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಜಾಮೀನು ಕೋರಿ ಸಂಪತ್‌ರಾಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಡಿಕೆಶಿ ನಮ್ಮ ಬೆನ್ನಿಗೆ ನಿಂತು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಅಖಂಡ ಶ್ರೀನಿವಾಸಮೂರ್ತಿ
ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಂಪತ್‌ರಾಜ್ ಪರಾರಿ ಆಗಿದ್ದರು. ನ.16ರಂದು ಸಿಸಿಬಿ ಪೊಲೀಸರು ಸಂಪತ್ ರಾಜ್ ಅವರನ್ನು ಬಂಧಿಸಿದ್ದರು. ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದ ವಿಚಾರಣಾ ನ್ಯಾಯಾಲಯ, ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 67ನೇ ಸಿಟಿ ಸಿವಿಲ್ ಕೋರ್ಟ್ ಡಿ.1ರಂದು ತಿರಸ್ಕರಿಸಿತ್ತು. ಇದರಿಂದ ಜಾಮೀನು ಕೋರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.