ಶ್ರೀರಂಗ ಏತ ನೀರಾವರಿ ಯೋಜನೆಯಡಿ ಮಾಗಡಿ ತಾಲೂಕಿನ 83 ಕೆರೆಗಳಿಗೆ ನೀರು ತುಂಬಿಸಲು ಎಕ್ಸ್‌ಪ್ರೆಸ್ ಕೆನಾಲ್ ನಿರ್ಮಾಣ ಅಗತ್ಯವಾಗಿದ್ದು, ತುಮಕೂರು ಜನಪ್ರತಿನಿಧಿಗಳ ವಿರೋಧದ ನಡುವೆ ಯೋಜನೆ ಭವಿಷ್ಯದ ಬಗ್ಗೆ ಅನಿಶ್ಚಿತತೆ.
ಎಸ್ ಆರ್ ಮಾದೇಶ್
ಮಾಗಡಿ (ಆ.19): ಶ್ರೀರಂಗ ಏತ ನೀರಾವರಿ ಯೋಜನೆ ಮೂಲಕ ಮಾಗಡಿ ತಾಲೂಕಿನ 83 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಗತ್ಯವಿರುವ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮತ್ತೆ ಆರಂಭಿಸಲು ಈಗ ಸೂಕ್ತ ಸಮಯವಾಗಿದ್ದು, ಸಮಸ್ಯೆ ಬಗೆಹರಿಸಿ ಕೂಡಲೇ ನೀರು ಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಹೇಮಾವತಿ ಜಲಾಶಯ ತುಂಬಿದರೂ ಶ್ರೀರಂಗ ಏತ ನೀರಾವರಿ ಪಂಪ್‌ಹೌಸ್ ಬಳಿಗೆ ತಾಲೂಕಿಗೆ ಮೀಸಲಾದ ನೀರಿನ ಪಾಲು ಹರಿದಿಲ್ಲ. ಇದಕ್ಕೆ ಎಕ್ಸ್ ಪ್ರೆಸ್ ಕೆನಾಲ್ ನಿರ್ಮಾಣವಾಗದಿರುವುದೇ ಕಾರಣ. ಆದ್ದರಿಂದ ತಾಲೂಕಿನ 83 ಕೆರೆಗಳಿಗೆ ನೀರು ತುಂಬಿಸಲು ಮುಕ್ಕಾಲು ಟಿಎಂಸಿ ನೀರಿನ ಪಾಲು ಚಾನೆಲ್ ಮೂಲಕ ಹರಿದು ಬಂದಿಲ್ಲ.
ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸಲು ತಾಲೂಕಿನ ಜನಪ್ರತಿನಿಧಿಗಳು, ರೈತ ಸಂಘ ಹಾಗೂ ವಿವಿಧ ಸಂಘಟನೆ ಮುಖಂಡರು ಸರ್ಕಾರದ ಗಮನಕ್ಕೆ ತರುವ ಅಗತ್ಯವಿದೆ. ಕೆನಾಲ್ ಕಾಮಗಾರಿಗೆ ತುಮಕೂರಿನ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೇಮಾವತಿ ಜಲಾಶಯ ತುಂಬಿ ಕಾಲುವೆ ಮೂಲಕ ನೀರನ್ನು ಹರಿಸಲಾಗುತ್ತಿದೆ. ಆದರೆ, ಕೆನಾಲ್ ಭಾಗದ ಕಲ್ಲನಾಯಕನಹಳ್ಳಿ - ಹಿರೇಕೆರೆಗೆ ನೀರು ಬರದೇ ಇರೋದೇ ಎಕ್ಸ್‌ಪ್ರೆಸ್ ಕೆನಾಲ್ ಅನಿವಾರ್ಯ. ಈ ಬಗ್ಗೆ ಜಲಸಂಪನ್ಮೂಲ ಸಚಿವರ ಜೊತೆ ಸ್ಥಳೀಯ ಜನಪ್ರತಿನಿಧಿಗಳು ಚರ್ಚಿಸಿ ವಾಸ್ತವ ಚಿತ್ರಣವನ್ನು ತುಮಕೂರಿನ ಜನಪ್ರತಿನಿಧಿಗಳಿಗೆ ಸಾಕ್ಷಿ ಸಮೇತ ವಿವರಿಸಲು ಇದು ಸರಿಯಾದ ಸಮಯವಾಗಿದೆ.
83 ಕೆರೆ ತುಂಬಲು 170 ಕ್ಯುಸೆಕ್ ನೀರು: ಮಾಗಡಿ ಮತ್ತು ಕುಣಿಗಲ್ ತಾಲೂಕಿನ 83 ಕೆರೆಗಳಿಗೆ ನೀರು ತುಂಬಿಸಲು ಸತತ ಎರಡು ತಿಂಗಳ ಕಾಲ 170 ಕ್ಯುಸೆಕ್ ನೀರು ಹರಿಯಬೇಕು, ಆದರೆ, ಈಗ ಚಾನೆಲ್ ಮೂಲಕ ಕೇವಲ 30 ಕ್ಯುಸೆಕ್ ನೀರು ಬರುತ್ತಿದೆ. ಈ ನೀರಿನಿಂದ 83 ಕೆರೆಗಳಿಗೆ ಪಂಪ್ ಮಾಡಲು ಸಾಧ್ಯವಿಲ್ಲ. ಕುಣಿಗಲ್ ಕೆರೆಗೆ ಈಗ ಅರ್ಧದಷ್ಟು ಮಾತ್ರ ನೀರು ತುಂಬಿದೆ. ಕುಣಿಗಲ್ ಕೆರೆಗೆ ಕೆನಾಲ್ ಮೂಲಕ 30 ಕ್ಯುಸೆಕ್ ನೀರು ಬರುತ್ತಿದೆ. ಈ ಕೆರೆ ತುಂಬಿ ನಂತರ ನಮ್ಮ ಪಂಪ್‌ಹೌಸ್ ಕೆರೆಗೆ ನೀರು ಬರಬೇಕಾಗಿದೆ. ಎಕ್ಸ್‌ಪ್ರೆಸ್ ಕೆನಾಲ್ ಮಾಡದಿದ್ದರೆ ಹೇಮಾವತಿ ನೀರು ತುಂಬಿ ಹರಿದರು 83 ಕೆರೆಗಳಿಗೆ ನೀರು ತುಂಬಿಸುವಷ್ಟು ಕಾಲುವೆಯಲ್ಲಿ ನೀರು ಬರುವುದಿಲ್ಲ.
165 ಕಿ.ಮೀ ಎಕ್ಸ್‌ಪ್ರೆಸ್ ಕೆನಾಲ್ ಅಗತ್ಯ: ಹೇಮಾವತಿ ಕಾಲುವೆಯ 70ನೇ ಕಿ.ಮೀ.ನಿಂದ 165 ನೇ ಕಿ.ಮೀ. ಹೊರಗಿನ 33 ಕಿಲೋ ಮೀಟರ್‌ವರೆಗೆ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸಲು ಸರ್ಕಾರ ಒಂದು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸುವ ವೇಳೆ ತುಮಕೂರಿನ ಜನಪ್ರತಿನಿಧಿಗಳು ಎಕ್ಸ್ ಪ್ರೆಸ್ ಕೆನಾಲ್ ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶ್ರೀರಂಗ ಏತ ನೀರಾವರಿ ಯೋಜನೆಯ ಪಂಪ್ ಹೌಸ್‌ಗೆ 195 ಕಿ.ಮೀ. ಆಗಲಿದೆ. ಕಾಲುವೆ ಮೂಲಕ ಮಾಗಡಿ ತಾಲೂಕಿಗೆ ಮಂಜೂರಾಗಿರುವ ಮುಕ್ಕಾಲು ಟಿಎಂಸಿ ನೀರು ಬರುತ್ತಿಲ್ಲ. ಹೇಮಾವತಿ ನೀರು ನಮಗೆ ಬರಬೇಕಾದ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಅಗತ್ಯವಾಗಿದೆ. ನಿಲ್ಲಿಸಿರುವ ಕೆನಾಲ್ ಕಾಮಗಾರಿಯನ್ನು ಆರಂಭಿಸಲು ಸರ್ಕಾರ ಸೂಚನೆ ನೀಡಬೇಕು. ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸಲು ಟೆಕ್ನಿಕಲ್ ಕಮಿಟಿ ರಚನೆ ಮಾಡಿದ್ದು ಟೆಕ್ನಿಕಲ್ ಕಮಿಟಿ ಸ್ಥಳ ಪರಿಶೀಲನೆ ವಾಸ್ತವ ಸತ್ಯವನ್ನು ಸರ್ಕಾರದ ಗಮನಕ್ಕೆ ತರಬೇಕಿದೆ.
ರೈಸಿಂಗ್ ಮೈನ್ ಕಾಮಗಾರಿ ಪೂರ್ಣಗೊಳಿಸಿ: ಶ್ರೀರಂಗ ಏತ ನೀರಾವರಿ ಕಾಮಗಾರಿಯ ಪಂಪ್ ಹೌಸ್ ಬಳಿಯಿಂದ ರೈಸಿಂಗ್ ಮೈನ್ ಕಾಮಗಾರಿ ಪೂರ್ಣವಾಗಲು ಒಟ್ಟು 37 ಕಿ.ಮೀ. ಕಾಮಗಾರಿಯಲ್ಲಿ ಈಗ 34 ಕಿ.ಮೀ. ಪೈಪ್ ಲೈನ್ ಕಾಮಗಾರಿ ಮುಗಿದಿದೆ. ಇನ್ನುಳಿದ ಮೂರು ಕಿಲೋಮೀಟರ್ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿದಾಗ ಮಾತ್ರ ಕಲ್ಲನಾಯಕನಹಳ್ಳಿ ಹಿರೇಕೆರೆ ತುಂಬಿದರೆ ರೈಸಿಂಗ್ ಮೈನ್ ಮೂಲಕ ಕೆಲವು ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಬಹುದು. 83 ಕೆರೆಗಳಿಗೆ ನೀರು ತುಂಬಿಸಲು ಇನ್ನೂ 250 ಕಿ.ಮೀ. ಲಿಂಕ್ ಪೈಪ್ ಅಳವಡಿಕೆ ಬಾಕಿ ಉಳಿದಿದ್ದು ಪಂಪ್ ಹೌಸ್ ಬಳಿ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಮಳೆಗಾಲದಲ್ಲಿ ಕೆರೆಗಳಿಗೆ ನೀರು ತುಂಬಿಸುವಷ್ಟು ನಮ್ಮ ಪಾಲಿನ ಹೇಮಾವತಿ ನೀರು ಬರುತ್ತಿಲ್ಲ. ಇದನ್ನು ಜನಪ್ರತಿನಿಧಿಗಳು ಗಮನಿಸಿ ಕೂಡಲೇ ಜಲ ಸಂಪನ್ಮೂಲ ಸಚಿವರ ಬಳಿ ನಿಯೋಗವನ್ನು ಕರೆದುಕೊಂಡು ಹೋಗಿ ಈಗಿನ ಪರಿಸ್ಥಿತಿ ವಿವರಿಸಬೇಕು. ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸಲು ತುಮಕೂರಿನ ಜನಪ್ರತಿನಿಧಿಗಳಿಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸೂಚನೆ ನೀಡಿ ಮುಂದಿನ ವರ್ಷವಾದರೂ ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ತುಂಬಿಸಬೇಕು.
-ಹೊಸಪಾಳ್ಯ ಲೋಕೇಶ್, ತಾಲೂಕು ಅಧ್ಯಕ್ಷ, ರೈತ ಸಂಘ