ಅತಿವೃಷ್ಟಿ ಬೆಳೆನಾಶ: ಮೆಕ್ಕೆ ಜೋಳ ಹರಗಿದ ರೈತ

By Kannadaprabha NewsFirst Published Oct 29, 2022, 2:34 PM IST
Highlights
  • ಅತಿವೃಷ್ಟಿಗೆ ಹಾನಿ: ಮೆಕ್ಕೆಜೋಳ ಹರಗಿದ ರೈತರು
  • ಸಾವಿರಾರು ರು. ಖರ್ಚು ಮಾಡಿ ಬಿತ್ತಿದ ಬೆಳೆಯೂ ಹಾಳು
  • ಸಾವಿರಾರು ಹೆಕ್ಟರ್‌ನಲ್ಲಿ ಬಿತ್ತಿದ ಬೆಳೆಗಳು ಮಳೆಗೆ ಆಹುತಿ

ಎಸ್‌.ಜಿ. ತೆಗ್ಗನಮನಿ

ನರಗುಂದ (ಅ.29) : ಅತಿಯಾದ ಮಳೆಯಾಗಿ ಬಿತ್ತನೆ ಮಾಡಿದ ಮೆಕ್ಕೆಜೋಳಕ್ಕೆ ತೇವಾಂಶ ಹೆಚ್ಚಾಗಿ ಬೆಳೆ ಕುಂಟಿತವಾಗಿದ್ದು, ಮನನೊಂದ ರೈತರು ಹೊಲದಲ್ಲಿದ್ದ ಬೆಳೆಯನ್ನೇ ಹರಗಲು ಮುಂದಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನ ರೈತ ಸಮುದಾಯ ವಾಣಿಜ್ಯ ಬೆಳೆಯಾದ ಮೆಕ್ಕೆಜೋಳ ಬಿತ್ತನೆ ಮಾಡಿ ಉತ್ತಮ ಬೆಳೆ ತಗೆಯಬೇಕೆಂದು ಹಿಂಗಾರು ಹಂಗಾಮಿನಲ್ಲಿ ಈ ವರ್ಷ ಮಾರುಕಟ್ಟೆಯಲ್ಲಿ ಈ ಬೆಳೆಗೆ ಬಂಪರ್‌ ಬೆಲೆ ಸಿಗುವ ನಿರೀಕ್ಷೆಯನ್ನು ಇಟ್ಟುಕೊಂಡು ಪ್ರತಿ 1 ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಲು .15ರಿಂದ 20 ಸಾವಿರ ಹಣ ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಆದರೆ, ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಈ ಭಾಗದಲ್ಲಿ ಸುರಿದ ಕಂಭದ್ರೋಣ ಮಳೆಯ ಅಬ್ಬರದಿಂದ ಬಿತ್ತನೆ ಮಾಡಿದ ಬೆಳೆಗೆ ತೇವಾಂಶ ಹೆಚ್ಚಾಗಿ ಸಂಪೂರ್ಣವಾಗಿ ಕೊಳೆತು ಹೋಯಿತು.

ಹಂದಿ ಹಾವಳಿಯಿಂದ ಬೆಳೆನಾಶ; ಹಂದಿಗಳನ್ನು ನಿಯಂತ್ರಿಸಿ, ಇಲ್ಲ ವಿಷ ಕೊಡಿ ಎಂದು ರೈತರ ಆಕ್ರೋಶ

ಕಷ್ಟಕ್ಕೆ ಸಿಲುಕಿದ ರೈತರು:

ಈ ವರ್ಷ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತಕ್ಷಣವೇ ಈ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದರಿಂದ ಮೊಳಕೆಯೊಡೆಯುವ ಪೂರ್ವದಲ್ಲಿಯೇ ಬೆಳೆ ಹಾಳಾಯಿತು. ಮತ್ತೇ ರೈತ ಬಿತ್ತನೆ ಮಾಡಿದ್ದು, ಅತಿಯಾದ ತೇವಾಂಶದಿಂದ ಈ ಬೆಳೆಯೂ ಹಾಳಾಗುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ಸಿಗದ ಪರಿಹಾರ:

ಈ ವರ್ಷ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು, ಮೆಕ್ಕೆಜೋಳ, ಬಿ.ಟಿ. ಹತ್ತಿ, ಶೇಂಗಾ, ತೊಗರಿ, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ಆದರೆ, ಸರ್ಕಾರ ಹೆಸರು ಬೆಳೆಗೆ ಮಾತ್ರ ಬೆಳೆಹಾನಿಯನ್ನು ಅದೂ ಅಲ್ಪಸ್ವಲ್ಪ ನೀಡಿ ಕೈತೊಳೆದುಕೊಂಡಿದೆ. ಉಳಿದ ಬೆಳೆಗಳು ಕೂಡ ಹಾನಿಯಾದರೂ ಸಹ ಸರ್ಕಾರ ರೈತನಿಗೆ ಪರಿಹಾರ ನೀಡದೆ ರೈತರನ್ನು ಮತ್ತಷ್ಟುಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಬಿತ್ತನೆ ವಿವರ:

ಪ್ರತಿ ವರ್ಷ ಈ ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ ಪ್ರತಿ 1 ಎಕರೆಗೆ 20 ರಿಂದ 25 ಕ್ವಿಂಟಲ್‌ ಬೆಳೆ ತಗೆಯುತ್ತಿದ್ದರು. ಆದರೆ, ಈ ವರ್ಷ ಜೂನ್‌ ತಿಂಗಳಲ್ಲಿ 8 ಸಾವಿರ ಹೆಕ್ಟರ್‌ ಬಿತ್ತನೆ ಮಾಡಿದರೆ, ತದ ನಂತರ ಜುಲೈ ಮತ್ತು ಆಗಸ್ಟ್‌ನಲ್ಲಿ 5550 ಹೆಕ್ಟರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಮಳೆಗೆ ಆಹುತಿಯಾಗಿದೆ. ಹಾಗಾಗಿ ಬಿತ್ತಿದ ಬೆಳೆ ಸಹ ಬಾರದಂತಹ ಪರಿಸ್ಥಿತಿ ಉಂಟಾಗಿದೆ.

ಗದಗ: ತುಂಗಭದ್ರಾ ಅಬ್ಬರಕ್ಕೆ ಸಾವಿರಾರು ಹೆಕ್ಟೇರ್‌ ಬೆಳೆ ಜಲಾವೃತ

ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆಗೆ ಮಾತ್ರ ಸರ್ಕಾರ ಬೆಳೆಹಾನಿ ಪರಿಹಾರ ನೀಡಿ ಕೈ ತೊಳೆದುಕೊಂಡಿದೆ. ಉಳಿದ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಮನವಿ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

- ಬಸವರಾಜ ಸಾಬಳೆ, ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ

ಮೆಕ್ಕೆಜೋಳ, ಬಿಟಿ ಹತ್ತಿ, ಶೇಂಗಾ, ಸೂರ್ಯಕಾಂತಿ ಬೆಳೆಹಾನಿ ಪರಶೀಲನೆ ಮಾಡಲಾಗಿದೆ. ಈ ಬೆಳೆಗಳಿಗೂ ಕೂಡ ಈ ವಾರದಲ್ಲಿ ರೈತರ ಬ್ಯಾಂಕ್‌ ಖಾತೆಗೆ ಪರಿಹಾರ ವಿತರಣೆ ಮಾಡಲಾಗುವುದು.

- ಎ.ಡಿ. ಅಮರವಾದಗಿ, ತಹಸೀಲ್ದಾರ್‌

click me!