24 ಗಂಟೆಯಲ್ಲಿ 9 ಜಿಲ್ಲೆಗಳಲ್ಲಿ ಭಾರೀ ಮಳೆ

Published : Aug 19, 2019, 09:46 AM IST
24 ಗಂಟೆಯಲ್ಲಿ 9 ಜಿಲ್ಲೆಗಳಲ್ಲಿ ಭಾರೀ ಮಳೆ

ಸಾರಾಂಶ

ರಾಜ್ಯದಲ್ಲಿ ಕೆಲ ದಿನಗಳ ಹಿಂದೆ ಅವಾಂತರ ಸೃಷ್ಟಿಸಿದ್ದ ಮಳೆ ಮತ್ತೆ ಕೆಲವು ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಬೆಂಗಳೂರು [ಆ.19]:  ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ದಕ್ಷಿಣ ಕರ್ನಾಟಕದ ಒಂಬತ್ತು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡು ಭಾಗದಲ್ಲಿ ಉಂಟಾಗಿದ್ದ ಮೇಲ್ಮೈಸುಳಿಗಾಳಿ ಪ್ರಭಾವದಿಂದ ದಕ್ಷಿಣ ಕರ್ನಾಟಕ ಹಾಗೂ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವಡೆ ಭಾರೀ ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕರ್ನಾಟಕದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳಲ್ಲಿ 65 ಮಿ.ಮೀ ನಿಂದ 115 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಭಾಗದ ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉಳಿದಂತೆ ಉತ್ತರ ಒಳನಾಡು, ಕರಾವಳಿ ಹಾಗೂ ಮಳೆನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಕೂಡಿದ ಹಗುರ ಮಳೆಯಾಗಲಿದೆ. ಕೆಲವಡೆ ಭಾರೀ ಮಳೆಯಾಗುವ ಸಾಧ್ಯತೆಯೂ ಇದೆ. ಮಳೆ ಮಾರುತದ ಪ್ರಭಾವದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದು, ಗರಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನಿನ್ನೆ ಅತಿ ಹೆಚ್ಚು ಮಳೆ: ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡದ ಧರ್ಮಸ್ಥಳ, ಮಂಡ್ಯದ ಶ್ರೀರಂಗಪಟ್ಟಣದಲ್ಲಿ ತಲಾ 3 ಸೆಂ.ಮೀ. ಮಳೆಯಾದ ವರದಿಯಾಗಿದೆ. ಉಳಿದಂತೆ ಉತ್ತರ ಕನ್ನಡದ ಗೋಕರ್ಣ, ಕದ್ರಾ, ಬೆಂಗಳೂರು ನಗರದಲ್ಲಿ ತಲಾ 2, ಉತ್ತರ ಕನ್ನಡದ ಮಂಕಿ, ಕುಮಟಾ, ಶಿರಾಲಿ, ಉಡುಪಿಯ ಕಾರ್ಕಳ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ಹಲವಡೆ ತಲಾ 1 ಸೆಂ.ಮೀ. ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!