ಕೋಯಿಲೂರು ಗ್ರಾಮ ಜಲಾವೃತ| ಹಸುಗೂಸು, ವೃದ್ಧೆ ಸೇರಿದಂತೆ 20ಕ್ಕೂ ಹೆಚ್ಚು ಜನರ ರಕ್ಷಣೆ| ಹಲವೆಡೆ ಮನೆಗಳಿಗೆ ನುಗ್ಗಿದ ನೀರು| ಆಹಾರ ಧಾನ್ಯಗಳು ನೀರುಪಾಲು, ಬೆಳೆಹಾನಿ| ಮಳೆಯಬ್ಬರಕ್ಕೆ ಕುಸಿದ ಮನೆಗಳು, ಗ್ರಾಮೀಣ ಸಂಪರ್ಕ ರಸ್ತೆಗಳು ಕಡಿತ| ತುಂಬಿದ ಹಳ್ಳಕೊಳ್ಳಗಳು, ಹತ್ತಿಕುಣಿ ಜಲಾಶಯದಲ್ಲಿ ಭೋರ್ಗರೆದ ನೀರು|
ಯಾದಗಿರಿ(ಜು.24): ಜಿಲ್ಲೆಯಲ್ಲಿ ಮಳೆಯ ಅರ್ಭಟ ಮುಂದುವರೆದಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ ಮಳೆರಾಯನ ಅಬ್ಬರದಿಂದಾಗಿ ಜನಜೀವನ ಕಂಪಿಸಿದಂತಾಗಿದೆ. ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಳೆಯಿಂದಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾದಂತಿತ್ತು. ಹಳ್ಳಕೊಳ್ಳಗಳು ಭರ್ತಿಯಾದರೆ, ಕೆರೆ ಕಟ್ಟೆಗಳು ತುಂಬಿ ಹರಿದವು.
ಮನೆಗಳಿಗೆ ನುಗ್ಗಿದ ನೀರು:
undefined
ಗುರುವಾರ ಯಾದಗಿರಿ ಸಮೀಪದ ಕೊಯಿಲೂರು ಹಾಗೂ ಆಶನಾಳ ಗ್ರಾಮ ಜಲದಿಗ್ಬಂಧನಕ್ಕೆ ಕಾರಣವಾಗಿತ್ತು. ಈ ಗ್ರಾಮದ ಸುಮಾರು 80ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಸಂಕಷ್ಟಅನುಭವಿಸುವಂತಾಗಿತ್ತು. ಮಳೆ ನೀರಿನಿಂದಾಗಿ ಮನೆಯಲ್ಲಿ ಸಿಲುಕಿದ್ದ ಹಸುಗೂಸು ಸೇರಿದಂತೆ ವೃದ್ಧರ ರಕ್ಷಣೆಗೆ ನಿಂತ ಕೆಲವು ಗ್ರಾಮಸ್ಥರು, ಹಗ್ಗದ ಸಹಾಯದಿಂದ ಅನೇಕರನ್ನು ರಕ್ಷಿಸಿದರು.
ಗ್ರಾಮದ ಪಕ್ಕದ ಹಳ್ಳ ತುಂಬಿ ಭಾರಿ ಪ್ರಮಾಣದ ನೀರು ಇಡಿ ಗ್ರಾಮವನ್ನು ಆವರಿಸಿತ್ತು. ಗ್ರಾಮಕ್ಕೆ ಸಂಪರ್ಕ ಬೆಸೆಯುವ ಸೇತುವೆಗಳು ಹಾಗೂ ರಸ್ತೆ ಮಳೆ ನೀರಿನಿಂದಾಗಿ ಕಡಿತಗೊಂಡಿವೆ. ಆಶನಾಳ ಗ್ರಾಮದ ತಾಯಮಾಯಿ ಹಳ್ಳ ಭರ್ತಿಯಾಗಿದೆ. ಹೀಗಾಗಿ, ಇಲ್ಲಿಂದ ಯಾದಗಿರಿ ಸಂಪರ್ಕಿಸುವ ರಸ್ತೆ ಬಂದ್ ಆಗಿದೆ. ಸೈದಾಪೂರ ಭಾಗದಲ್ಲಿ ಭಾರಿ ಮಳೆಯಾಗಿದೆ.
ಯಾದಗಿರಿ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು, ಪ್ರವಾಹ ಭೀತಿ
ಹತ್ತಿಕುಣಿ ಹೋಬಳಿಯ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯ ಆರ್ಭಟಕ್ಕೆ ಕೆಲವರ ಮನೆಗಳ ಗೋಡೆ ಕುಸಿದಿವೆ. ಜಲಾವೃತಗೊಂಡಿದ್ದ ಹೊಲ ಗದ್ದೆಗಳಲ್ಲಿ ನೀರು ಉಕ್ಕಿ ಹರಿದು, ನದಿಯಂತೆ ಕಾಣುತ್ತಿತ್ತು. ಬೆಳೆಗಳು ಸಂಪೂರ್ಣ ನೀರುಪಾಲಾಗಿದ್ದವು. ಯಡ್ಡಳ್ಳಿ ಗ್ರಾಮದಲ್ಲಿ ಕೆರೆ ತುಂಬಿದೆ. ಇಲ್ಲಿನ ಸಾಬಣ್ಣ ಅನ್ನುವವರ ಮನೆ ಗೋಡೆ ಕುಸಿದಿದೆ. ಆಹಾರಧಾನ್ಯಗಳು ನೀರುಪಾಲಾಗಿವೆ. ಚಾಮನಾಳ ಗ್ರಾಮದ ಕೆರೆಯೂ ಸಹ ತುಂಬಿ ತುಳುಕುತ್ತಿತ್ತು. ಕಾನಳ್ಳಿ ಗ್ರಾಮದಲ್ಲಿ ಹೊಲಗದ್ದೆಗಳಲ್ಲಿ ನೀರು ನುಗ್ಗಿತ್ತು.
ಒಂದೇ ರಾತ್ರಿ 108.8 ಮಿ.ಮೀ. ಮಳೆ
ಓರುಂಚ ಗ್ರಾಮದಲ್ಲಿ ಜೋರಾದ ಮಳೆ ಸುರಿದು, ಗೋವಿಂದಪ್ಪ ಅನ್ನುವ ರೈತರ ಹೊಲದಲ್ಲಿ ನೀರು ನಿಂತು, 3 ಎಕರೆ ಪ್ರದೇಶದಲ್ಲಿನ ಹತ್ತಿ ಬೆಳೆ ಹಾಳಾಗಿದೆ. ಹತ್ತಿಕುಣಿ ಜಲಾಶಯದಲ್ಲಿ ನೀರು ಹರಿದು ಬರುತ್ತಿದೆ. ಸೈದಾಪೂರದಲ್ಲಿ ಒಂದೇ ರಾತ್ರಿ 108.8 ಮಿ.ಮೀ. ಮಳೆ ಸುರಿದು ತೆಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಕೊಡೇಕಲ್, ಸುರಪುರ, ಶಹಾಪುರ, ಹುಣಸಗಿ, ವಡಗೇರಾ, ಮುಂತಾದ ಭಾಗದಲ್ಲಿ ಜಿಟಿ ಜಿಟಿ ಮಳೆಯಾಗಿ, ಮೋಡದ ವಾತಾವರಣ ಮುಂದುವರೆದಿತ್ತು. ಸುರಪುರದಲ್ಲಿ 44.2 ಮಿ.ಮೀ., ಕಕ್ಕೇರಾದಲ್ಲಿ 44.6 ಮಿ. ಮೀ. ಮಳೆಯಾಗಿದೆ. ದೇವಾಪೂರ ಗ್ರಾಮದಿಂದ ಸುರಪುರದ ಕೆಲವು ಭಾಗಗಳಲ್ಲಿ ನಸುಕಿನ ಜಾವ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ.
ಯಾದಗಿರಿ ನಗರದಲ್ಲಿ ಬುಧವಾರ ನಸುಕಿನ ಜಾವ 3 ಗಂಟೆಯಿಂದ ಬೆಳಿಗೆ 8 ರವರೆಗೂ ಸುರಿಯುತ್ತಿದ್ದ ಮಳೆ, ಸಂಜೆವರೆಗೂ ಜಿಟಿ ಜಿಟಿಯಾಗಿತ್ತು. ಇಡೀ ದಿನ ಮೋಡದ ವಾತಾವರಣದಲ್ಲೇ ಕಳೆದಿತ್ತು. ಗುರುವಾರ ರಾತ್ರಿ ಮತ್ತೇ ಮಳೆಯಾಗುವ ಬಹುತೇಕ ಸಾಧ್ಯತೆಗಳಿದ್ದವು. ಯಾದಗಿರಿ ದೊಡ್ಡ ಹಳ್ಳ, ಲುಂಬಿನಿ ಬನದ ಕೆರೆ ನೀರು ತುಂಬಿ ಮತ್ತೇ ನಳನಳಿಸುತ್ತಿದ್ದವು. ಅನೇಕ ಕಡೆಗಳಲ್ಲಿ ಬತ್ತಿ ಹೋಗಿದ್ದ ಜಲಮೂಲಗಳು ಮತ್ತೇ ಚಿಗುರಿದ ಬಗ್ಗೆ ಹರ್ಷ ವ್ಯಕ್ತವಾಗಿತ್ತು.