ಕಾಫಿನಾಡು ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಇನ್ನು ಎನ್ ಆರ್ ಪುರದ ಇಂದಿರಾ ನಗರದಲ್ಲಿ 2 ಟನ್ ಒಣಕೊಬ್ಬರಿ ಮಳೆ ನೀರು ಮತ್ತು ಮಣ್ಣಿಗೆ ಸಂಪೂರ್ಣ ಹಾಳಾಗಿದ್ದು, ಲಕ್ಷಾಂತರ ರುಪಾಯಿ ನಷ್ಟಸಂಭವಿಸಿದೆ
ಚಿಕ್ಕಮಗಳೂರು(ಮೇ.09): ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ಧಾರಾಕಾರವಾಗಿ ಮಳೆ ಸುರಿಯಿತು. ಇನ್ನುಳಿದಂತೆ ಜಿಲ್ಲೆಯ ಇತರೇ ತಾಲೂಕುಗಳಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತಾದರೂ ಮಳೆ ಮಾತ್ರ ಬರಲಿಲ್ಲ.
ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ 6.30 ರವರೆಗೆ ಆಗಾಗ ಬಿಡುವು ಕೊಟ್ಟು ಸುರಿಯಿತು. ಸಂಜೆ 7 ಗಂಟೆ ನಂತರದಲ್ಲಿ ಲೌಕ್ ಡೌನ್ ಇದ್ದರಿಂದ ನಗರದಲ್ಲಿ ಒಂದೆಡೆ ಅಂಗಡಿ ಮುಗಟ್ಟು ಮುಚ್ಚಿದ್ದರೆ, ಇನ್ನೊಂದೆಡೆ ಸುರಿಯುವ ಮಳೆಯಲ್ಲಿಯೇ ಜನರು ಮನೆಗಳಿಗೆ ಹೋಗುತ್ತಿದ್ದರು. ಇನ್ನು ಕೆಲಸದ ನಿಮಿತ್ತ ಕಚೇರಿಗೆ ಹೋಗಿದ್ದ ಸಿಬ್ಬಂದಿ ಸಹ ಕೆಲ ಹೊತ್ತು ಕಚೇರಿಯಲ್ಲಿಯೇ ಇರಬೇಕಾಯಿತು. ತಗ್ಗಿನ ಪ್ರದೇಶಗಳಲ್ಲಿ ನೀರು ನಿಂತಿತ್ತು. ಆರಂಭದಲ್ಲಿ ಮಳೆ ಗುಡುಗಿತಾದರೂ ನಂತರದಲ್ಲಿ ಮುಂಗಾರು ಮಳೆಯಂತೆ ಸುರಿಯಿತು.
ಎನ್.ಆರ್.ಪುರ ವರದಿ:
ಗುರುವಾರ ರಾತ್ರಿ ಎನ್.ಆರ್.ಪುರ ಪಟ್ಟಣ ಸೇರಿದಂತೆ ಸುತ್ತಮುತ್ತ ಸುರಿದ ಮಳೆಗೆ ಇಂದಿರಾ ನಗರದಲ್ಲಿ 2 ಟನ್ ಒಣಕೊಬ್ಬರಿ ಮಳೆ ನೀರು ಮತ್ತು ಮಣ್ಣಿಗೆ ಸಂಪೂರ್ಣ ಹಾಳಾಗಿದ್ದು, ಲಕ್ಷಾಂತರ ರುಪಾಯಿ ನಷ್ಟಸಂಭವಿಸಿದೆ. ಖಾಸಗಿ ವ್ಯಕ್ತಿಯೊಬ್ಬರು ಜಮೀನು ಖರೀದಿಸಿ ಲೇಔಟ್ ಮಾಡಿದ್ದರು. ಇದಕ್ಕಾಗಿ ಬೇರೆ ಕಡೆಯಿಂದ ಮಣ್ಣು ತಂದು ಸಮತಟ್ಟು ಮಾಡಿದ್ದರು. ಒಂದು ಬದಿಯಲ್ಲಿ ಇನ್ನೂ ರಿವಿಟ್‌ಮೆಂಟ್ ಕಟ್ಟಿಸಿರಲಿಲ್ಲ. ಗುರುವಾರ ರಾತ್ರಿ 1.30 ರಿಂದ 2.30 ರವರೆಗೆ ಸುರಿದ ಮಳೆಗೆ ಹಾಕಿದ ಮಣ್ಣು, ನೀರು ಸೇರಿ ಕೆಳಭಾಗದಲ್ಲಿದ್ದ ಸಯ್ಯದ್ ಅಹಮ್ಮದ್ ರಫಿ ಎಂಬವರ ಮನೆ ಕಡೆ ನುಗ್ಗಿದೆ. ಇದರಿಂದ ಮನೆಯಂಗಳದಲ್ಲಿ ಒಣಗಿಸಲು ಹಾಕಿದ್ದ 2 ಟನ್ ಒಣ ಕೊಬ್ಬರಿ ತೊಳೆದುಕೊಂಡು ಹೋಗಿ ಚರಂಡಿ ಪಾಲಾಗಿದೆ. ಸ್ಥಳಕ್ಕೆ ತಾಲೂಕು ಕಾರ್ಯನಿರ್ವಾಹಕಾಧಿಕಾರಿ ನಯನ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಕೋಸ್, ನಾಗಲಾಪುರ ಗ್ರಾಮ ಪಂಚಾಯಿತಿ ಪಿಡಿಓ ಮನೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಂಕೆ ಕೊಂದು ತಿಂದ ಇಬ್ಬರ ಬಂಧನ..!
ಕೊಪ್ಪ ವರದಿ:
ತಾಲೂಕಿನ ಹರಿಹರಪುರ, ಕೊರಡಿಹಿತ್ಲು, ನುಗ್ಗಿ, ನಾರ್ವೆ, ಜಯಪುರ, ಕೊಗ್ರೆ, ಬಸರೀಕಟ್ಟೆಭಾಗದಲ್ಲಿ ಗುರುವಾರ ರಾತ್ರಿ 1.30 ರಿಂದ ಬೆಳಗಿನ ಜಾವ 3.30ರವರೆಗೆ ಉತ್ತಮ ಮಳೆಯಾಗಿದೆ. ಇತ್ತೀಚೆಗೆ ಮಳೆ ಗಾಳಿಯಿಂದ ತಾಲೂಕಿನಾದ್ಯಾಂತ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಇದರಿಂದಾಗಿ 6 ದಿನಗಳಲ್ಲಿಂದ ಕೊಪ್ಪ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.
ಶೃಂಗೇರಿ ವರದಿ:
ತಾಲೂಕಿನ ಹಲವೆಡೆ ಶುಕ್ರವಾರ ಬೆಳಗಿನ ಜಾವ ಗಾಳಿ, ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ. ತಾಲೂಕಿನ ಮರ್ಕಲ್ ಪಂಚಾಯಿತಿ, ಕೆರೆ, ನೆಮ್ಮಾರು ಪಂಚಾಯಿತಿ ಸೇರಿದಂತೆ ಕೆಲವೆಡೆ ಗುಡುಗು ಸಿಡಿಲಿನ ಆರ್ಭಟ ಆರಂಭಗೊಂಡಿತು. ನಂತರ ಭಾರಿ ಗಾಳಿ ಬೀಸಲಾರಂಭಿಸಿತು.ಬೆಳಗಿನವರೆಗೂ ಧಾರಾಕಾರವಾಗಿ ಮಳೆ ಸುರಿಯಿತು. ಮಳೆಗಿಂತ ಗುಡುಗು ಸಿಡಿಲಿನ ಆರ್ಭಟವೇ ಹೆಚ್ಚಾಗಿತ್ತು. ಗುರುವಾರ ಸಂಜೆ ವೇಳೆ ಮೋಡ ಕವಿದು, ಗುಡುಗು ಸಿಡಿಲು ಆರ್ಭಟಿಸಿದರೂ ಮಳೆ ಬಿದ್ದಿರಲಿಲ್ಲ. ತಾಲೂಕಿನ ಕೆಲ ಭಾಗಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಗುಡುಗು ಸಿಡಿಲು ಆರ್ಭಟಿಸುತ್ತಿದ್ದರೂ ಇದುವರೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಶುಕ್ರವಾರ ಮಧ್ಯಾಹ್ನ, ಸಂಜೆಯವರೆಗೆ ಮೋಡಕವಿದ ವಾತಾವರಣವಿತ್ತು.