ಭಕ್ತರು ದಾಸೋಹಕ್ಕೆಂದು ಅಕ್ಕಿ ಕೊಟ್ಟರೆ, ಮೂಟೆ ಕಟ್ಟಿ ಮಾರಾಟಕ್ಕೆ ಕಳಿಸಿದ ಆಡಳಿತ ಮಂಡಳಿ!

Published : Nov 15, 2026, 10:43 PM IST
haveri devaragudda malatesha temple dasoha rice sale

ಸಾರಾಂಶ

ದೇವಸ್ಥಾನದಲ್ಲಿ ಭಕ್ತರು ದಾಸೋಹಕ್ಕೆ ನೀಡಿದ ಅಕ್ಕಿಯನ್ನು ಆಡಳಿತ ಮಂಡಳಿಯವರು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇದನ್ನು ಪ್ರಶ್ನಿಸಿದ ಸ್ಥಳೀಯ ವ್ಯಕ್ತಿಯ ಮೇಲೆ ಆಡಳಿತ ಮಂಡಳಿ ಸದಸ್ಯರು ಹಲ್ಲೆ ನಡೆಸಿದ್ದಾರೆ.

ಹಾವೇರಿ: ಭಕ್ತರು ಶ್ರದ್ಧಾ-ಭಕ್ತಿಯಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಅನ್ನದಾಸೋಹಕ್ಕಾಗಿ ನೀಡಿದ ಅಕ್ಕಿಯನ್ನು, ದೇವಸ್ಥಾನದ ಆಡಳಿತ ಮಂಡಳಿಯವರೇ ಅಕ್ರಮವಾಗಿ ಮಾರಾಟ ಮಾಡಲು ಹೊರಟು ಸಿಕ್ಕಿಬಿದ್ದಿರುವ ನಾಚಿಕೆಗೇಡಿನ ಘಟನೆ ಹಾವೇರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಈ ಅಕ್ರಮವನ್ನು ಪ್ರಶ್ನಿಸಿದ ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ಆಡಳಿತ ಮಂಡಳಿಯ ಸದಸ್ಯರು ಹಾಡಹಗಲೇ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ.

ದೇವರಗುಡ್ಡ ಮಾಲತೇಶ ಸನ್ನಿಧಿಯಲ್ಲಿ ಜಟಾಪಟಿ:

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದೇವರಗುಡ್ಡ ಗ್ರಾಮದ ಶ್ರೀ ಮಾಲತೇಶ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನಕ್ಕೆ ರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತರು, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಹರಕೆಯ ರೂಪದಲ್ಲಿ ನಿತ್ಯ ದಾಸೋಹಕ್ಕಾಗಿ ನೂರಾರು ಕ್ವಿಂಟಾಲ್ ಅಕ್ಕಿಯನ್ನು ದಾನವಾಗಿ ನೀಡುತ್ತಾರೆ. ಆದರೆ, ಭಕ್ತರು ನೀಡಿದ ಅನ್ನದ ಅಕ್ಕಿಯನ್ನು ಆಡಳಿತ ಮಂಡಳಿಯ ಕೆಲವರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

40 ಕ್ವಿಂಟಾಲ್ ಅಕ್ಕಿ ಸಾಗಾಟ – ಪ್ರಶ್ನಿಸಿದ ಪ್ರಕಾಶ್ ಮೇಲೆ ಹಲ್ಲೆ:

ದೇವಸ್ಥಾನದ ಆವರಣದಿಂದ ಬರೋಬ್ಬರಿ 40 ಕ್ವಿಂಟಾಲ್ ದಾಸೋಹದ ಅಕ್ಕಿಯನ್ನು ವಾಹನದಲ್ಲಿ ತುಂಬಿ ಬೇರೆಡೆ ಮಾರಾಟ ಮಾಡಲು ಆಡಳಿತ ಮಂಡಳಿ ಸಿದ್ಧತೆ ನಡೆಸಿತ್ತು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ಪ್ರಕಾಶ್ ಎಂಬುವವರು, "ಭಕ್ತರು ದಾಸೋಹಕ್ಕೆ ಕೊಟ್ಟ ಅಕ್ಕಿಯನ್ನು ನೀವು ಯಾಕೆ ಮಾರಾಟ ಮಾಡುತ್ತಿದ್ದೀರಿ?" ಎಂದು ನೇರವಾಗಿ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ.

ಇದರಿಂದ ತೀವ್ರ ಕೆರಳಿದ ಆಡಳಿತ ಮಂಡಳಿಯ ಸದಸ್ಯ ಸುರೇಶ್ ಎಂಬಾತ, "ಅದನ್ನು ಕೇಳಲು ನೀನ್ಯಾರು? ಅದು ನಿನಗೆ ಸಂಬಂಧವಿಲ್ಲದ ವಿಚಾರ" ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಾತಿಗೆ ಮಾತು ಬೆಳೆದು, ಸುರೇಶ್ ಏಕಾಏಕಿ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಇಬ್ಬರ ನಡುವೆ ನಡುರಸ್ತೆಯಲ್ಲೇ ಕೈ-ಕೈ ಮಿಲಾಯಿಸಿ 'ಡಿಶುಂ ಡಿಶುಂ' ಜಗಳ ನಡೆದಿದ್ದು, ಸ್ಥಳದಲ್ಲಿದ್ದ ಇತರ ಸ್ಥಳೀಯರು ಹಾಗೂ ಭಕ್ತರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ.

ಆಡಳಿತ ಮಂಡಳಿಯ ವಿಚಿತ್ರ ಸಮರ್ಥನೆ – ಸ್ಥಳೀಯರ ಆಕ್ರೋಶ:

ಅಕ್ಕಿ ಮಾರಾಟದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಆಡಳಿತ ಮಂಡಳಿ, "ಭಕ್ತರು ನೀಡಿದ್ದ ಅಕ್ಕಿ ಹಾಳಾಗಿತ್ತು, ಹುಳು ಬಿದ್ದಿತ್ತು. ಹಾಗಾಗಿ ಈ ಹಳೆಯ ಅಕ್ಕಿಯನ್ನು ಮಾರಿ, ಬಂದ ಹಣದಿಂದ ಹೊಸ ಅಕ್ಕಿ ತಂದು ದಾಸೋಹ ನಡೆಸಲು ನಿರ್ಧರಿಸಿದ್ದೆವು" ಎಂದು ಸಮರ್ಥನೆ ನೀಡಿದೆ.

ಆದರೆ ಆಡಳಿತ ಮಂಡಳಿಯ ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಸ್ಥಳೀಯರು, "ಕಳೆದ ಆರು ತಿಂಗಳ ಹಿಂದೆಯೂ ಇದೇ ರೀತಿ ಬರೋಬ್ಬರಿ 60 ಕ್ವಿಂಟಾಲ್ ದಾಸೋಹದ ಅಕ್ಕಿಯನ್ನು ಮಾರಾಟ ಮಾಡಲಾಗಿತ್ತು. ಅದಕ್ಕೆ ಯಾವುದೇ ಲೆಕ್ಕಪತ್ರವೂ ಇಲ್ಲ, ಮಾಹಿತಿಯೂ ಇಲ್ಲ. ಅಕ್ಕಿ ಹಾಳಾಗಿದ್ದರೆ ಅದನ್ನು ಸ್ವಚ್ಛಗೊಳಿಸಿ ಅನ್ನದಾಸೋಹಕ್ಕೆ ಬಳಸಬೇಕಿತ್ತು. ಅದನ್ನು ಬಿಟ್ಟು ಗುಟ್ಟಾಗಿ ಮಾರಾಟ ಮಾಡಿ ಭ್ರಷ್ಟಾಚಾರ ಮಾಡುತ್ತಿದ್ದಾರೆ" ಎಂದು ನೇರವಾಗಿ ಆರೋಪಿಸಿದ್ದಾರೆ.

ಪ್ರಸ್ತುತ ಈ ಘಟನೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ದಾಸೋಹದ ಅಕ್ಕಿ ಮಾರಾಟ ಹಾಗೂ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರಿನಿಂದ 'ಪ್ರೇಮದ ಊರಲಿ' ಶೂಟಿಂಗ್ ಸ್ಪಾಟ್ ಸೀಗೆಗುಡ್ಡಕ್ಕೆ ಕೇವಲ 4 ಗಂಟೆ ಜರ್ನಿ; ಇಲ್ಲಿದೆ ಟ್ರಾವೆಲ್ ಗೈಡ್
ಬಿತ್ತನೆ ಮಾಡದೇ ಬರುತ್ತೆ ರಾಶಿ ರಾಶಿ ಬೆಳೆ: ವಿಜ್ಞಾನ ಲೋಕಕ್ಕೇ ಸವಾಲಾದ ಕಲಬುರ್ಗಿಯ ಸುವರ್ಣಗಿರಿ- ಜಡ್ಜ್​ ಪ್ರಸ್ತಾಪ