ಪದವಿ ಪರೀಕ್ಷೆ ಹಾಲ್ ಟಿಕೆಟ್‌ ಕೊಡಲು ಹಣ ವಸೂಲಿ; ಕಾಲೇಜು ಅಕ್ರಮ ಬಯಲು ಮಾಡಿದ ವಿದ್ಯಾರ್ಥಿಗಳು!

Published : Jan 01, 2026, 06:32 PM IST
Haveri College

ಸಾರಾಂಶ

ಹಾವೇರಿಯ ಜಾಬಿನ್ ಕಾಲೇಜಿನಲ್ಲಿ ಹಾಲ್ ಟಿಕೆಟ್‌ಗೆ ₹1000 ಲಂಚ? ಹಾಜರಾತಿ ಕೊರತೆಯ ನೆಪದಲ್ಲಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್. ಪೂರ್ಣ ಸತ್ಯ ತಿಳಿಯಲು ಇಲ್ಲಿ ಓದಿ.

ಹಾವೇರಿ (ಜ.01): ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ವಿದ್ಯಾ ದೇಗುಲವೊಂದು ಈಗ ಹಣ ವಸೂಲಿ ಕೇಂದ್ರವಾಗಿ ಬದಲಾಗಿದೆಯೇ ಎಂಬ ಅನುಮಾನ ಮೂಡಿಸಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿ ಆಲೂರು ಪಟ್ಟಣದ ಕೆ.ಟಿ.ಇ ಸೊಸೈಟಿಯ S B ಜಾಬಿನ್ ಕಾಲೇಜಿನಲ್ಲಿ ಪರೀಕ್ಷಾ ಪ್ರವೇಶ ಪತ್ರ (Hall Ticket) ನೀಡಲು ವಿದ್ಯಾರ್ಥಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ಹಾಜರಾತಿ ಕೊರತೆಯ ನೆಪ

ಪದವಿ ಪರೀಕ್ಷೆಗಳು ಹತ್ತಿರ ಬರುತ್ತಿರುವ ಬೆನ್ನಲ್ಲೇ, ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಕಾಲೇಜಿನ ಪ್ರಾಂಶುಪಾಲ ಬಸವರಾಜ ಮ್ಯಾಗಳಮನಿ ಹಾಗೂ ಸಿಬ್ಬಂದಿಗಳು 'ನಿಮಗೆ ಹಾಜರಾತಿ (Attendance) ಕೊರತೆ ಇದೆ' ಎಂಬ ತಾಂತ್ರಿಕ ಕಾರಣ ನೀಡುತ್ತಿದ್ದಾರೆ. ಈ ಕೊರತೆಯನ್ನು ಸರಿಪಡಿಸಿ ಹಾಲ್ ಟಿಕೆಟ್ ನೀಡಬೇಕಾದರೆ ತಲಾ 1,000 ರೂಪಾಯಿ ನೀಡಲೇಬೇಕು ಎಂದು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ವಿಡಿಯೋದಲ್ಲಿ ಬಯಲಾದ ಅಕ್ರಮ

ಹಾವೇರಿ ವಿಶ್ವವಿದ್ಯಾಲಯದಿಂದ ಈಗಾಗಲೇ ಹಾಲ್ ಟಿಕೆಟ್ ನೀಡಲಾಗಿದ್ದರೂ, ಕಾಲೇಜು ಸಿಬ್ಬಂದಿ ಮಾತ್ರ ಹಣಕ್ಕಾಗಿ ಹಠ ಹಿಡಿದಿದ್ದಾರೆ. ಕಾಲೇಜು ಸಿಬ್ಬಂದಿಯೊಬ್ಬರು ವಿದ್ಯಾರ್ಥಿಗಳ ಬಳಿ ಹಣಕ್ಕೆ ಬೇಡಿಕೆ ಇಡುತ್ತಿರುವ ದೃಶ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿ ರಹಸ್ಯವಾಗಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜವಾಬ್ದಾರಿಯಿಂದ ನುಣುಚಿಕೊಂಡ ಸಿಬ್ಬಂದಿ

ಹಣ ಪಡೆದ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನಿಸಿದಾಗ, "ನಾವು ಏನೂ ಮಾಡಲಾಗದು, ಈ ಬಗ್ಗೆ ನಮ್ಮ ಮ್ಯಾನೇಜ್‌ಮೆಂಟ್‌ನವರನ್ನು ಹೋಗಿ ಕೇಳಿ" ಎಂದು ಸಿಬ್ಬಂದಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಂದ ವಿನಾಕಾರಣ ಹಣ ವಸೂಲಿ ಮಾಡುತ್ತಿರುವ ಈ ಪ್ರವೃತ್ತಿ ಶಿಕ್ಷಣ ಕ್ಷೇತ್ರದ ಮೌಲ್ಯಕ್ಕೆ ಧಕ್ಕೆ ತಂದಿದೆ. ಕೂಡಲೇ ಉನ್ನತ ಶಿಕ್ಷಣ ಇಲಾಖೆ ಹಾಗೂ ಹಾವೇರಿ ವಿಶ್ವವಿದ್ಯಾಲಯದ ಅಧಿಕಾರಿಗಳು ಈ ಕಾಲೇಜಿನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಮರ್ಯಾದಾ ಹತ್ಯೆ ಪ್ರಕರಣಕ್ಕೆ ತ್ವರಿತ ನ್ಯಾಯಾಲಯ ರಚನೆಗೆ ಚಿಂತನೆ, ಕಾನೂನು ಲೋಪ-ದೋಷಗಳಿದ್ದರೆ ತಿದ್ದುಪಡಿ
ಬೆಂಗಳೂರು ನಗರ ವಿವಿಯಲ್ಲಿ ಬಿಕಾಂ ಪ್ರಶ್ನೆಪತ್ರಿಕೆ ಲೀಕ್; ಪರೀಕ್ಷೆಗೂ ಮೊದಲೇ ವಾಟ್ಸಾಪ್‌ನಲ್ಲಿ ಹರಿದಾಡಿತು ಉತ್ತರ!