
ಹಾಸನ (ನ.04): ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಐತಿಹಾಸಿಕ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಗಣ್ಯಾತಿಗಣ್ಯರ ದಂಡೇ ಹರಿದು ಬರುತ್ತಿದ್ದು, ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರ ಆಕಾಶ್ ಶಿವಕುಮಾರ್ ಕೆಂಪೇಗೌಡ ಅವರು ತಾಯಿ ಹಾಸನಾಂಬೆಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಕುಟುಂಬದೊಂದಿಗೆ ಹಾಸನಕ್ಕೆ ಆಗಮಿಸಿದ ಆಕಾಶ್ ಅವರಿಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಅದ್ಧೂರಿ ಸ್ವಾಗತ ದೊರೆಯಿತು. ಹಾಸನದ ಪ್ರವಾಸಿ ಮಂದಿರಕ್ಕೆ (IB) ತಲುಪಿದ ಆಕಾಶ್ ಅವರನ್ನು ಹಾಸನ ಸಂಸದ ಶ್ರೇಯಸ್ ಪಟೇಲ್ ಅವರು ಖುದ್ದು ಸರ್ಕಾರಿ ಪ್ರೊಟೋಕಾಲ್ ವಾಹನದಲ್ಲೇ ದೇವಾಲಯದ ಆವರಣಕ್ಕೆ ಕರೆದುಕೊಂಡು ಬಂದಿದ್ದು ಸಾರ್ವಜನಿಕರ ಗಮನ ಸೆಳೆಯಿತು.
ದೇವಾಲಯಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಪುತ್ರ ಹಾಗೂ ಶಾಸಕರ ಕುಟುಂಬಕ್ಕೆ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಆತ್ಮೀಯವಾಗಿ ಸ್ವಾಗತ ಕೋರಿದರು. ಬಳಿಕ ಗರ್ಭಗುಡಿಯಲ್ಲಿ ಹಾಸನಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ರಾಜ್ಯದ ಸಮೃದ್ಧಿಗಾಗಿ ಹಾಗೂ ಕುಟುಂಬದ ಒಳಿತಿಗಾಗಿ ಆಕಾಶ್ ಪ್ರಾರ್ಥಿಸಿದರು. ಸಿಎಂ ಪುತ್ರನ ಆಗಮನದ ಹಿನ್ನೆಲೆಯಲ್ಲಿ ದೇಗುಲದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.