
ಬೆಂಗಳೂರು (ಫೆ.28): ವಿದ್ಯಾರಣ್ಯಪುರದಲ್ಲಿ ಶುಕ್ರವಾರ ನಡೆದಿದ್ದ ಪೊಲೀಸ್ ಮಹಜರ್ ವೇಳೆ ವಂಚನೆ ಕೃತ್ಯದ ಆರೋಪಿ ಸಿದ್ದಲಿಂಗಸ್ವಾಮಿ (63) ಆತ್ಮಹತ್ಯೆ ಪ್ರಕರಣ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇರೆಗೆ ಹನುಮಂತನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಕಟ್ಟಿಮನಿ ಅವರನ್ನು ಅಮಾನತು ಮಾಡಲಾಗಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ವಿವೇಕ ನಗರ ಠಾಣೆಯಲ್ಲಿ ಶನಿವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಕಮಲ್ ಪಂತ್ ಅವರು, ಪೊಲೀಸ್ ವಶದಲ್ಲಿದ್ದಾಗ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಪೊಲೀಸರ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಂಡು ಬಂದಿದೆ. ನಾಲ್ವರು ಸಿಬ್ಬಂದಿ ಇದ್ದರೂ ದುರಂತ ನಡೆದಿರುವುದು ಇದಕ್ಕೆ ಪುರಾವೆಯಾಗಿದೆ. ತನಿಖಾ ತಂಡದ ನೇತೃತ್ವ ವಹಿಸಿದ್ದ ಪಿಎಸ್‌ಐ ಕಟ್ಟಿಮನಿ ಅವರನ್ನು ಅಮಾನತುಗೊಳಿಸಲಾಗಿದೆ. ಇನ್ನುಳಿದ ಸಿಬ್ಬಂದಿ ಪಾತ್ರದ ಬಗ್ಗೆ ಇಲಾಖಾ ವಿಚಾರಣೆ ನಡೆದಿದೆ ಎಂದರು.
ಈ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಲಾಗಿದ್ದು, ಈಗಾಗಲೇ ಸಿಐಡಿಗೆ ಪ್ರಕರಣದ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಇನ್ನು ಘಟನೆ ಸಂಬಂಧ ನ್ಯಾಯಾಂಗ ತನಿಖೆಯಾಗಲಿದೆ ಎಂದು ಆಯುಕ್ತರು ತಿಳಿಸಿದರು.
ಕೋರ್ಟ್ ಆವರಣದಲ್ಲಿ ವಕೀಲನ ಭೀಕರ ಕೊಲೆ ..
ಘಟನೆಯಲ್ಲಿ ಹೆಡ್ ಕಾನ್‌ಸ್ಟೇಬಲ್‌ಗಳಾದ ರವಿಕುಮಾರ್, ಮೃತ್ಯುಂಜಯ ಹಾಗೂ ಕಾನ್‌ಸ್ಟೇಬಲ್ ಉಮೇಶ್ ಅವರ ನಿರ್ಲಕ್ಷ್ಯತನದ ಬಗ್ಗೆ ಇಲಾಖಾ ಮಟ್ಟದ ವಿಚಾರಣೆ ನಡೆಸಿ ವರದಿ ನೀಡುವಂತೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಡಿಎ ನಿವೇಶನ ಕೊಡಿಸುವುದಾಗಿ ಜನರಿಗೆ ವಂಚಿಸಿದ ಆರೋಪ ಹೊತ್ತಿದ್ದ ರಿಯಲ್ ಎಸ್ಟೇಟ್ ಏಜೆಂಟ್ ವಿದ್ಯಾರಣ್ಯಪುರ ನಿವಾಸಿ ಸಿದ್ದಲಿಂಗಸ್ವಾಮಿಯನ್ನು (63) ತನಿಖೆಯ ಸಲುವಾಗಿ ಆತನ ಮನೆಗೆ ಶುಕ್ರವಾರ ಹನುಮಂತನಗರ ಪಿಎಸ್‌ಐ ಮಂಜುನಾಥ್ ಕಟ್ಟಿಮನಿ ನೇತೃತ್ವದ ತಂಡ ಕರೆದುಕೊಂಡು ಹೋಗಿತ್ತು. ಆಗ ನೀರು ಕುಡಿಯುವ ನೆಪದಲ್ಲಿ ಅಡುಗೆ ಮನೆಗೆ ತೆರಳಿದ ಸಿದ್ದಲಿಂಗಸ್ವಾಮಿ, ಬಳಿಕ ಪೊಲೀಸರನ್ನು ದೂಡಿ ಅಡುಗೆ ಮನೆಯ ಬಾಗಿಲು ತೆಗೆದು ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.