'ಈಶ್ವರಪ್ಪಗೆ ಮುಖ್ಯಮಂತ್ರಿ ಸ್ಥಾನ ನೀಡಿ'

By Kannadaprabha NewsFirst Published Jul 24, 2021, 7:50 AM IST
Highlights

* ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪ ಅವರಷ್ಟೇ ಶ್ರಮ ಈಶ್ವರಪ್ಪ ಪಟ್ಟಿದ್ದಾರೆ
* ಕಾರ್ಯಕರ್ತರಿಗೂ, ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಬೇಕು
* ಜನಸಂಘದ ಕಾಲದಿಂದ ಪಕ್ಷನಿಷ್ಠೆ ತೋರಿದವರು ಈಶ್ವರಪ್ಪನವರು

ಕೊಪ್ಪಳ(ಜು.24): ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಹಿಂದುಳಿದ ವರ್ಗಗಳ ನಾಯಕ ಕೆ.ಎಸ್‌. ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಪಕ್ಷ ನಿಷ್ಠ ಕಾರ್ಯಕರ್ತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಬೇಕು ಎಂದು ಕೊಪ್ಪಳ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೆ.ಎಸ್‌. ಈಶ್ವರಪ್ಪ ಜನಸಂಘದ ಕಾಲದಿಂದ ಪಕ್ಷನಿಷ್ಠೆ ತೋರಿದವರು. ದಕ್ಷಿಣ ಭಾರತದಲ್ಲಿ ಮೊತ್ತಮೊದಲ ಬಾರಿಗೆ 2008ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರಷ್ಟೇ ಶ್ರಮವನ್ನು ಕೆ.ಎಸ್‌. ಈಶ್ವರಪ್ಪ ಪಟ್ಟಿದ್ದಾರೆ. ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಶೇ. 55 ರಷ್ಟಿರುವ ಹಿಂದುಳಿದ ವರ್ಗಗಳ ನಾಯಕರಾಗಿ ಆ ವರ್ಗಗಳ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2008-2013ರ ಅವಧಿಯಲ್ಲಿ ಬಿ.ಎಸ್‌. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದಾರೆ. 2019ರಲ್ಲಿ ಮತ್ತೊಮ್ಮೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ.

ರಾಜೀನಾಮೆಗೆ ಸಿದ್ಧರಾದ್ರಾ ಯಡಿಯೂರಪ್ಪ?: ಸಚಿವ ಈಶ್ವರಪ್ಪ ಪ್ರತಿಕ್ರಿಯೆ

ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ಬಿಜೆಪಿಯಿಂದ ಈಗಾಗಲೇ ಮೂರು ಬಾರಿ ಲಿಂಗಾಯತ ಸಮುದಾಯ, ಒಂದು ಬಾರಿ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಕಲ್ಪಿಸಿದ್ದು, ಈ ಬಾರಿ ಹಿಂದುಳಿದ ವರ್ಗಗಳ ನಾಯಕ ಮತ್ತು ರಾಜ್ಯದ ದೊಡ್ಡ ಸಮುದಾಯದಲ್ಲಿ ಒಂದಾದ ಕುರುಬ ಸಮಾಜದ ನಾಯಕರಾಗಿರುವ ಕೆ.ಎಸ್‌. ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಕಲ್ಪಿಸಿಕೊಟ್ಟು, ನಿಷ್ಠಾವಂತ ಕಾರ್ಯಕರ್ತರಿಗೂ, ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಬೇಕು ಎಂದು ಹಾಲುಮತ ಮಹಾಸಭಾ ಮನವಿ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.

ತಾಲೂಕು ಅಧ್ಯಕ್ಷ ಹನುಮಂತಪ್ಪ ಪೂಜಾರ, ಗೌರವ ಅಧ್ಯಕ್ಷ ದ್ಯಾಮಣ್ಣ ಕರಿಗಾರ, ಜಿಲ್ಲಾ ಸಮಿತಿ ಸದಸ್ಯರಾದ ಶಿವಾನಂದ ಯಲ್ಲಮ್ಮನವರ, ಬಸವರಾಜ ಗುರಿಕಾರ, ಮಹಿಳಾ ಜಿಲ್ಲಾ ಸದಸ್ಯೆ ಜಯಶ್ರೀ ರಮೇಶ, ಪರಶುರಾಮ ಅಣ್ಣಗೇರಿ, ಮಲ್ಲೇಶ ಹದ್ದಿನ, ನಿಂಗರಾಜ ಮೂಗಿನ ಮುಂತಾದವರು ಹೇಳಿಕೆಯನ್ನು ಬೆಂಬಲಿಸಿದ್ದಾರೆ.
 

click me!