
ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಭದ್ರಾಪುರದಲ್ಲಿ ಮಾತು ಬಾರದ ಮತ್ತು ಕಿವಿ ಕೇಳಿಸದ ಹಕ್ಕಿಪಿಕ್ಕಿ ಸಮುದಾಯದ ಅಪ್ರಾಪ್ತೆ 14 ವರ್ಷದ ಬಾಲಕಿ ಖುಷಿ ಅತ್ಯಾ*ಚಾರ ಮತ್ತು ಕೊ*ಲೆಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರು ನಗರದ ಐಜೂರು ವೃತ್ತದಿಂದ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಭದ್ರಾಪುರ ಹಕ್ಕಿಪಿಕ್ಕಿ ಕಾಲೋನಿ ಬಳಿಯ ರೈಲ್ವೆ ಹಳಿ ಬಳಿ 14 ವರ್ಷದ ಮೂಕ ಬಾಲಕಿ ಶವ ಸೋಮವಾರ ಅಂದರೆ ಮೇ 12ರಂದು ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿತ್ತು. ಹಂತಕರು ಬಾಲಕಿಯನ್ನು ಅಪಹರಿಸಿ ಕೊ*ಲೆಮಾಡಿ, ಬಳಿಕ ರೈಲು ಹಳಿ ಪಕ್ಕದಲ್ಲಿ ಶವ ಎಸೆದು ಹೋಗಿದ್ದರು. ಸ್ಥಳೀಯರು ಬೆಳಿಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು. ಮೇ14ರ ಬುಧವಾರ ಮಧ್ಯಾಹ್ನವಾದರೂ ಅಂತ್ಯಸಂಸ್ಕಾರಕ್ಕೆ ಕುಟುಂಬ ಸದಸ್ಯರು ಒಪ್ಪಲಿಲ್ಲ. ಮೃತದೇಹ ಡಿಕಂಪೋಸ್ ಆಗುತ್ತಿದ್ದರೂ ಪಟ್ಟುಹಿಡಿದು ಹೋರಾಟ ಮುಂದುವರೆಸಿದ್ದರು. ನಂತರ ಸ್ಥಳೀಯ ಮುಖಂಡರು, ಅಧಿಕಾರಿಗಳು, ಪೊಲೀಸರು ಕುಟುಂಬ ಸದಸ್ಯರ ಮನವೊಲಿಸಿ ಅಂತ್ಯಸಂಸ್ಕಾರಕ್ಕೆ ಒಪ್ಪಿಸಿದರು. ಪೊಲೀಸ್ ಬಂದೋಬಸ್ತ್ ನಲ್ಲಿ ಖುಷಿ ಅಂತ್ಯಸಂಸ್ಕಾರ ನೆರವೇರಿತು. ಮೂಕ ಬಾಲಕಿಯನ್ನು ಅತ್ಯಾ*ಚಾರ ಮಾಡಿ ಕೊ*ಲೆಮಾಡಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಭದ್ರಾಪುರ ಗ್ರಾಮದ ಅಪ್ರಾಪ್ತೆ ಖುಷಿ ಹತ್ಯೆಯ ವಿಚಾರದಲ್ಲಿ ಅವರ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಡಲಾಗುವುದು. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ರಾಮನಗರ ಜಿಲ್ಲೆ ಬಿಡದಿಯ ಭದ್ರಾಪುರದ ಖುಷಿ ಎನ್ನುವ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಬಾಲಕಿಯ ಶವ ರೈಲ್ವೆ ಹಳಿ ಬಳಿ ಪತ್ತೆಯಾಗಿತ್ತು. ಆಕೆಯ ಕುಟುಂಬ ಸದಸ್ಯರಿಗೆ ಬುಧವಾರ ಸಾಂತ್ವನ ಹೇಳಿ, ಜಿಲ್ಲಾಡಳಿತ ಪರವಾಗಿ 4,12,500 ರು. ಹಾಗೂ ಪಂಚಾಯ್ತಿ ವತಿಯಿಂದ 50 ಸಾವಿರ ರು. ಪರಿಹಾರ ಚೆಕ್ ವಿತರಿಸಿ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
ಈ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಯಾರ ಒತ್ತಡಕ್ಕೂ ಒಳಗಾಗದೆ ನ್ಯಾಯಪರ, ನಿಷ್ಠುರವಾಗಿ ತನಿಖೆ ನಡೆಯಲಿದೆ. ಯಾರ ಮೇಲಾದರೂ ಅನುಮಾನವಿದೆಯೇ ಎಂದು ಬಾಲಕಿಯ ಕುಟುಂಬಸ್ಥರ ಬಳಿ ಕೇಳಿದೆ. ಅವರು ಇಲ್ಲ ಎಂದು ಹೇಳುತ್ತಿದ್ದಾರೆ. ತನಿಖೆ ಮಾಡುವುದು ಪೊಲೀಸ್ ಇಲಾಖೆ ಕರ್ತವ್ಯ ಎಂದರು. ಬಾಲಕಿಯ ಮೇಲೆ ಅತ್ಯಾ*ಚಾರ ನಡೆಸಿ ಕೊ*ಲೆಮಾಡಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಎಲ್ಲಾ ಆಯಾಮದಲ್ಲಿಯೂ ಪೊಲೀಸರು ತನಿಖೆ ಮಾಡಲಿದ್ದಾರೆ. ದ್ವೇಷದಿಂದ ನಡೆದಿದೆಯೇ? ಅತ್ಯಾ*ಚಾರವಾಗಿದೆಯೇ? ಏನಾದರೂ ಬೇರೆ ಕಾರಣ ಇದೆಯೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ನಾವು ನ್ಯಾಯ ಒದಗಿಸುತ್ತೇವೆ ಎಂದು ಹೇಳಿದರು.
ಬಾಲಕಿಯು ಹಾಸ್ಟೆಲ್ ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿತ್ತು. ರಜೆಗೆಂದು ಊರಿಗೆ ಬಂದ ಸಂದರ್ಭದಲ್ಲಿ ಈ ಅನಾಹುತ ಘಟನೆ ನಡೆದಿದೆ. ಮಾತುಬಾರದ, ಕಿವಿ ಕೇಳದಿದ್ದರೂ ಚುರುಕಾಗಿದ್ದ ಬಾಲಕಿ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ತಿಳಿಸಿದರು. ಘಟನೆ ನಡೆದಿರುವ ಈ ಊರಿನಲ್ಲಿ ಮೂಲಸೌಕರ್ಯಗಳ ಕೊರತೆಯಿದೆ, ಬೀದಿ ದೀಪಗಳ ವ್ಯವಸ್ಥೆಯಿಲ್ಲ ಎನ್ನುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಈಗ ಈ ಪ್ರಕರಣದ ಜತೆಗೆ ಬೇರೆ ವಿಚಾರಗಳನ್ನು ಬೆರೆಸಲು ಹೋಗುವುದಿಲ್ಲ. ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗುವುದು ಎಂದು ಡಿಕೆಶಿ ಉತ್ತರಿಸಿದರು.