ಬೆಂಗಳೂರಲ್ಲಿ ವಾರದ ಹಿಂದೆ ಬಿಡುಗಡೆ ಆಗಿದ್ದ ರೌಡಿಯ ಅಟ್ಟಹಾಸ

By Kannadaprabha NewsFirst Published Sep 22, 2019, 8:44 AM IST
Highlights

ಬೆಂಗಳೂರಿನಲ್ಲಿ ವಾರದ ಹಿಂದೆ ಬಿಡುಗಡೆ ಹೊಂದಿದ್ದ ರೌಡಿ ಶೀಟರ್ ಅಟ್ಟಹಾಸ ಮೆರೆದಿದ್ದು, ಆತನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. 

ಬೆಂಗಳೂರು [ಸೆ.22]:  ಸಾರ್ವಜನಿಕರನ್ನು ಮಾರಕಾಸ್ತ್ರದಿಂದ ಬೆದರಿಸಿ ಸುಲಿಗೆ ಮಾಡುತ್ತಿದ್ದ ಕುಖ್ಯಾತ ರೌಡಿಶೀಟರ್‌ ಮಂಜ ಅಲಿಯಾಸ್‌ ಗನ್‌ ಮಂಜನಿಗೆ (40) ಸಿಸಿಬಿ ಸಿಸಿಬಿ ಪೊಲೀಸರು ಗುಂಡು ಹೊಡೆದು ಶನಿವಾರ ಬಂಧಿಸಿದ್ದಾರೆ.

ಆರೋಪಿಯ ಎಡಗಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸಿಸಿಬಿ ಹೆಡ್‌ ಕಾನ್‌ಸ್ಟೇಬಲ್‌ ಭೈರೇಶ್‌ ಅವರಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದರು.

ಗನ್‌ ಮಂಜ ಯಶವಂತಪುರ ಪೊಲೀಸ್‌ ಠಾಣೆಯ ರೌಡಿಶೀಟರ್‌ ಆಗಿದ್ದು, ಈತನ ಮೇಲೆ ಕೊಲೆ ಯತ್ನ, ದರೋಡೆ, ಸುಲಿಗೆ ಸೇರಿದಂತೆ ಹತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ. ಪ್ರಕರಣವೊಂದರಲ್ಲಿ ಆರೋಪಿ ಜೈಲು ಸೇರಿದ್ದ. ಒಂದು ವಾರದ ಹಿಂದೆಯಷ್ಟೇ ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ.

ಸೆ.16ರಂದು ಗನ್‌ ಮಂಜ ತನಗೆ ಪರಿಚಯವಿರುವ ಮತ್ತಿಕೆರೆಯಲ್ಲಿ ಮೊಬೈಲ್‌ ಅಂಗಡಿ ಇಟ್ಟುಕೊಂಡಿರುವ ಕೇಶವ ಎಂಬುವವರ ಬಳಿ ಹೋಗಿ ನನಗೆ ಜಾಮೀನು ಕೊಡಿಸದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಮಾರಕಾಸ್ತ್ರ ತೋರಿಸಿ ಬೆದರಿಸಿದ್ದ. ಈ ಸಂಬಂಧ ಕೇಶವ ಅವರು ಯಶವಂತಪುರ ಠಾಣೆಗೆ ದೂರು ನೀಡಿದ್ದರು. ಇತ್ತ ಆರೋಪಿ ಜೈಲಿನಿಂದ ಬಿಡುಗಡೆಯಾದ ಕೂಡಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದರು.

ಸಿಸಿಬಿ ಇನ್‌ಸ್ಪೆಕ್ಟರ್‌ ಪುನೀತ್‌ ನೇತೃತ್ವದ ತಂಡಕ್ಕೆ ಶನಿವಾರ 8ರ ಸುಮಾರಿಗೆ ಜಾಲಹಳ್ಳಿಯ ಎಚ್‌ಎಂಟಿ ಕಾರ್ಖಾನೆ ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ವೇಳೆ ಗನ್‌ ಮಂಜನ ಬೆನ್ನತ್ತಿ ಹಿಡಿಯಲು ಹೋಗಿದ್ದರು. ಹೆಡ್‌ ಕಾನ್ಸ್‌ಟೇಬಲ್‌ ಭೈರೇಶ್‌ ಮೇಲೆ ಡ್ಯಾಗರ್‌ನಿಂದ ಹಲ್ಲೆ ಮಾಡಿದ್ದ. ಕೂಡಲೇ ಎಚ್ಚೆತ್ತುಕೊಂಡ ಇನ್‌ಸ್ಪೆಕ್ಟರ್‌ ಪುನೀತ್‌ ಆತ್ಮರಕ್ಷಣೆಗಾಗಿ ಮಂಜನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದರು.

click me!