
ಉತ್ತರ ಕನ್ನಡ (ಜು.26): ರಾಜ್ಯ ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಿದೆ. ಆದರೆ, ಯೋಜನೆಯ ಹಣವನ್ನು ಮನೆಯ ಯಜಮಾನಿಯ ಖಾತೆಗೆ ಹಾಕಲಾಗುವುದಾಗಿ ಸರಕಾರ ಸೂಚನೆ ನೀಡಿದ್ದರಿಂದ ಇದೀಗ ಗೃಹಲಕ್ಷ್ಮೀಯರು ಹಾಗೂ ಪುರುಷರು ರೇಷನ್ ಕಾರ್ಡ್ ತಿದ್ದುಪಡಿಗೆ ಸರತಿ ಸಾಲಿನಲ್ಲಿ ನಿಲ್ಲಲಾರಂಭಿಸಿದ್ದಾರೆ. ಕಾರವಾರದ ತಹಶೀಲ್ದಾರ ಕಚೇರಿ ಮುಂದೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪುರುಷರು ಮಳೆಯಲ್ಲಿ ಒದ್ದೆಯಾಗ್ತಾ, ಇನ್ನು ಕೆಲವರು ಛತ್ರಿ, ರೈನ್ ಕೋಟ್ ಧರಿಸಿಕೊಂಡು ಸರತಿ ಸಾಲಿನಲ್ಲಿ ನಿಂತು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿದ್ದಾರೆ.
ಬೆಳಗ್ಗೆಯಿಂದ ನೂರಾರು ಜನರು ಬಂದು ಸಾಲಿನಲ್ಲಿ ನಿಂತಿದ್ದನ್ನು ನೋಡಿ ಸಿಬ್ಬಂದಿ ಸ್ಥಳಕ್ಕೆ ಬಂದು ಕೇವಲ 150 ಟೋಕನ್ ಮಾತ್ರ ನೀಡಿ ಹೆಚ್ಚಿನ ಜನರನ್ನು ವಾಪಾಸ್ ಕಳುಹಿಸಿದ್ದರು. ಆದರೂ, ಹಲವು ಜನರು ಬೆಳಗ್ಗೆಯಿಂದಲೂ ಉಪಹಾರ, ಮಧ್ಯಾಹ್ನ ಊಟ ಮಾಡದೆ ಸರತಿ ಸಾಲಿನಲ್ಲಿ ನಿಂತು ತಿದ್ದುಪಡಿ ಮಾಡಿಸಿಕೊಂಡಿದ್ದಾರೆ. ತಿದ್ದುಪಡಿಗೆ ಜನರು ಸಾಕಷ್ಟಿದ್ದರೂ ಅರ್ಜಿ ಸಲ್ಲಿಕೆಗೆ ಓರ್ವ ಸಿಬ್ಬಂದಿಯನ್ನು ಮಾತ್ರ ಇರಿಸಿ ತಾಲೂಕಾಡಳಿತ ನಿರ್ಲಕ್ಷ್ಯ ಮಾಡಿರುವುದು ಕೂಡಾ ಕಂಡುಬಂತು. ಇನ್ನು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವರಿಗೆ ರೇಷನ್ ಕಾರ್ಡ್ ಅಡ್ಡಿಯಾದ ಸಮಸ್ಯೆಯೂ ಕಂಡುಬಂತು. ತಹಶೀಲ್ದಾರ್ ಕಚೇರಿಯಲ್ಲಿ ರೇಷನ್ ಕಾರ್ಡ್ ಸರಿಯಿದೆ ಅಂದ್ರೂ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಎರರ್ ಕಾಟ ಎದುರಾಗಿದ್ದು, ಸಾಕಷ್ಟು ತಿರುಗಾಡಿ ಏನು ಮಾಡಬೇಕೆಂದು ತಿಳಿಯದೆ ಜನರು ಕಂಗಾಲು ಪ್ರಕರಣಗಳೂ ಕಂಡುಬಂತು.
Mandya: ಹೆದ್ದಾರಿಗೆ ಉರುಳುತ್ತಿರುವ ವಿದ್ಯುತ್ ಟವರ್‌ಗಳು: ಪ್ರಾಧಿಕಾರದವರ ಭಂಡತನ
ತಾಂತ್ರಿಕ ಸಮಸ್ಯೆಗಳ ಮಧ್ಯೆಯೂ ಗೃಹಲಕ್ಷ್ಮಿ ನೋಂದಣಿ: ತಾಂತ್ರಿಕ ಸಮಸ್ಯೆಗಳ ಮಧ್ಯೆಯೂ ತಾಲೂಕಿನಲ್ಲಿ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ ಜು. 24ರ ಸಂಜೆಯೊಳಗೆ 4,596 ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರ ನೋಂದಣಿಯಾಗಿದೆ. ಸರ್ವರ್ ಸಮಸ್ಯೆ, ಇಂಟರ್‌ನೆಟ್ ಕಡಿತ, ರೇಷನ್ ಕಾರ್ಡ್‌ನಲ್ಲಿ ಸರಿಯಾಗಿ ಮಾಹಿತಿ ಇಲ್ಲದೆ ಇರುವುದರ ಮಧ್ಯೆ ತಾಲೂಕಿನ 22ರಿಂದ 23 ಸಾವಿರ ಅರ್ಹ ರೇಷನ್ ಕಾರ್ಡ್‌ಗಳಲ್ಲಿ 4596 ಕಾರ್ಡ್‌ಗಳ ನೋಂದಣಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಿಡಿಪಿಒ ರಫಿಕಾ ಹಳ್ಳೂರು, ಕಳೆದ ಎರಡು ದಿನಗಳಿಂದ ಎಸ್‌ಎಂಎಸ್ ಮೂಲಕ ನೋಂದಣಿಯ ಸ್ಥಳ ಹಾಗೂ ವೇಳೆ ಗುರುತಿಸುವ ಕಾರ್ಯ ನಡೆದಿದೆ.
ಐದು ದಿನದಲ್ಲಿ ಕೆಆರ್‌ಎಸ್‌ಗೆ 10 ಅಡಿ ನೀರು: ರೈತರ ಮೊಗದಲ್ಲಿ ಮಂದಹಾಸ
ಹೀಗಾಗಿ ಅರ್ಹ ಫಲಾನುಭವಿಗಳು ನೇರವಾಗಿ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಈ ಸೇವಾ ಕೇಂದ್ರದಲ್ಲಿ ಸರ್ವರ್ ವೇಗವಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಮಹಿಳೆಯರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಒಮ್ಮೆ ಈ ಕೇಂದ್ರಗಳಿಗೆ ಐದಾರು ಜನ ತೆರಳಿ ನೋಂದಣಿ ಮಾಡಿಕೊಳ್ಳುವ ಮೂಲಕ ಅನಗತ್ಯವಾದ ನೂಕುನುಗಲು ತಪ್ಪಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಸರ್ಕಾರದ ಮಟ್ಟದಲ್ಲಿ ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯ ಸರ್ವರ್ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಕೆಲ ದಿನಗಳಲ್ಲಿ ಎಲ್ಲ ನೋಂದಣಿ ಕಾರ್ಯಗಳು ಅತಿ ವೇಗವಾಗಿ ನಡೆಯಲಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ತಾಳ್ಮೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.