Mandya: ಪ್ರೀತಿಗೆ ಅಡ್ಡಿ, ಅಜ್ಜಿಯನ್ನು ಲವರ್ ಜೊತೆಗೆ ಸೇರಿ ಕೊಂದ ಮೊಮ್ಮಗಳು

Published : Oct 13, 2026, 12:35 PM IST
Viral Love Story

ಸಾರಾಂಶ

ಮಂಡ್ಯದ ಬೂಕನಕೆರೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಅಜ್ಜಿಯನ್ನು ಅಪ್ರಾಪ್ತ ಮೊಮ್ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ್ದಾಳೆ. ಮತ್ತೊಂದೆಡೆ ದಾವಣಗೆರೆಯಲ್ಲಿ ಮದುವೆಯಾಗಬೇಕಿದ್ದ ಅಪ್ರಾಪ್ತೆಯನ್ನೇ ಯುವಕನೊಬ್ಬ ಗರ್ಭಿಣಿ ಮಾಡಿದ್ದು, ಪೋಕ್ಸೋ ಪ್ರಕರಣ ದಾಖಲಾಗಿದೆ.

ಮಂಡ್ಯ: ಪ್ರೀತಿಗೆ ಅಡ್ಡಿಯಾದ ಅಜ್ಜಿಯನ್ನು ಪ್ರಿಯಕರನ ಜೊತೆ ಸೇರಿ ಅಪ್ರಾಪ್ತೆ ಮೊಮ್ಮಗಳು ಹತ್ಯೆ ಮಾಡಿರುವ ಘಟನೆ ತಾಲೂಕಿನ ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಹದೇವಮ್ಮ(50) ಕೊಲೆಯಾದ ಅಜ್ಜಿ. ಪ್ರಥಮ ಪಿಯು ವಿದ್ಯಾರ್ಥಿನಿ (16), ಆಕೆಯ ಪ್ರಿಯಕರ ಆಕಾಶ್ (28) ಕೊಲೆ ಆರೋಪಿಗಳು.

ಬಾಲಕಿ ಮತ್ತು ಬೆಳತೂರು ಗ್ರಾಮದ ಆಕಾಶ್ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಅಜ್ಜಿ ಮಹದೇವಮ್ಮ ಅವರ ವಿರೋಧವಿತ್ತು. ಈ ಹಿಂದೆ ಆಕಾಶ್ ಮತ್ತು ಮಹದೇವಮ್ಮ ಅವರ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ. ಅಜ್ಜಿ ಮಹದೇವಮ್ಮ ಬೇರೊಂದು ಕಡೆ ಸಂಬಂಧ ಹುಡುಕುವ ಸಿದ್ಧತೆಯಲ್ಲಿದ್ದರು. ರಾತ್ರಿ ಬೂಕನಕೆರೆಯ ಅಜ್ಜಿ ಮನೆಗೆ ಮೊಮ್ಮಗಳು ಹಿಂತಿರುಗಿದ್ದಾಳೆ. ರಾತ್ರಿ ಆಕಾಶ್‌ಗೆ ಕರೆ ಮಾಡಿ ಮನೆಗೆ ಕರೆಯಿಸಿಕೊಂಡು ಆತನ ಜೊತೆ ಸೇರಿ ಅಜ್ಜಿಯನ್ನು ಹೊಡೆದು ಸಾಯಿಸಿದ್ದಾರೆ.

ಮದುವೆ ಆಗಬೇಕಿದ್ದ ಅಪ್ರಾಪ್ತೆಯನ್ನೇ ಗರ್ಭಿಣಿ ಮಾಡಿದ ಯುವಕ: ದೂರು

ದಾವಣಗೆರೆ: ಅಪ್ರಾಪ್ತೆಗೆ 18 ವರ್ಷ ತುಂಬಿದ ನಂತರ ಮದುವೆ ಮಾಡಲು ಎರಡೂ ಕುಟುಂಬಗಳ ಮಧ್ಯೆ ಮಾತಿನ ಒಪ್ಪಂದ ಆಗಿದ್ದರೂ, ಯುವಕನೊಬ್ಬ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಯುವಕನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.

ಯುವಕನ ಕುಟುಂಬದವರು ಹಾಗೂ ಅಪ್ರಾಪ್ತೆ ಕುಟುಂಬದವರು ಬಾಲಕಿಗೆ 18 ವರ್ಷವಾದ ಬಳಿಕ ಇಬ್ಬರಿಗೂ ಮದುವೆ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದರು. ಈ ಮಧ್ಯೆ ಯುವಕ ಆಗಾಗ ಅಪ್ರಾಪ್ತೆಯ ಮನೆಗೆ ಬಂದು ಹೋಗುತ್ತಿದ್ದ. ಇದರಿಂದ ಸಲುಗೆ ಬೆಳೆದಿತ್ತು ಎನ್ನಲಾಗಿದೆ.

ಯುವಕ ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ತೀವ್ರಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅಪ್ರಾಪ್ತೆಯನ್ನು ಪಾಲಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗರ್ಭಿಣಿ ಆಗಿರುವುದು ಬೆಳಕಿಗೆ ಬಂದಿದೆ. ಆ ಯುವಕನ ಜೊತೆಗೆ ಮದುವೆ ಮಾಡೋಣ ಎಂದರೆ ಹುಡುಗಿ ಇನ್ನೂ ಅಪ್ರಾಪ್ತೆ, 18 ವರ್ಷ ತುಂಬದೇ ಮದುವೆ ಮಾಡುವಂತಿಲ್ಲ ಎಂಬ ಚಿಂತೆ ಪೋಷಕರಲ್ಲಿ ಕಾಡತೊಡಗಿದೆ.

PREV
Read more Articles on
click me!

Recommended Stories

ಕೆಎಎಸ್‌ ಸೇರಿದಂತೆ ಸಾವಿರಾರು ಹುದ್ದೆಗಳ ಆಯ್ಕೆ ಪಟ್ಟಿಗೆ ಕಂಟಕ, ಶೇ. 56 ರ ಮೀಸಲಾತಿ ರದ್ದಿನ ಬೆನ್ನಲ್ಲೇ ಆತಂಕದಲ್ಲಿ ಅಭ್ಯರ್ಥಿಗಳು!
ದಸರಾ ಹಬ್ಬದ ವೇಳೆ 25 ಸಾವಿರ ರಾಗಿ ಬೆಳೆಗಾರರಿಗೆ ಗುಡ್‌ನ್ಯೂಸ್, 14 ಜಿಲ್ಲೆ ರೈತರ ಖಾತೆಗೆ ಬಂತು ₹265 ಕೋಟಿ