ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ರಂಗು ಏರಿದೆ. ರಾಜಕೀಯ ಮುಖಂಡರು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಸುಮಲತಾ ಆಯ್ಕೆಗೆ ಮತ್ತೊಮ್ಮೆ ಅದೃಷ್ಟ ಒಲಿಯುವ ನಿರೀಕ್ಷೆಯಲ್ಲಿದ್ದಾರೆ.
ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಡಿ.11): ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಒಂದು ದಿನವಷ್ಟೇ ಬಾಕಿ ಉಳಿದಿದೆ. ನಾಮಪತ್ರ ಸಲ್ಲಿಸಿರುವ ಹಾಗೂ ಸಲ್ಲಿಸಲು ಸಿದ್ಧವಾಗಿರುವ ಆಕಾಂಕ್ಷಿಗಳು ಅದೃಷ್ಟದ ಚಿಹ್ನೆಗಳನ್ನು ಪಡೆಯಲು ಕಾತರರಾಗಿದ್ದಾರೆ.
ಈ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸಲು ಇಚ್ಛಿಸುತ್ತಿರುವ ಆಕಾಂಕ್ಷಿಗಳು ಸ್ಪರ್ಧೆಗೆ ಬಿರುಸಿನ ಸಿದ್ಧತೆ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಅಭ್ಯರ್ಥಿಗಳಾಗುವವರು ಅದೃಷ್ಟದ ಚಿಹ್ನೆಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಮತದಾರರು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಹೆಚ್ಚು ಪ್ರಸಿದ್ಧಿ ಪಡೆದಿರುವ ಚಿಹ್ನೆಗಳನ್ನೇ ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಗುರುತಿಸಿದ್ದಾರೆ. ಕಡೆ ದಿನವಾದ ನಾಳೆ ಉಮೇದುವಾರಿಕೆ ಸಲ್ಲಿಸಲಿರುವ ಆಕಾಂಕ್ಷಿಗಳು ಚಿಹ್ನೆಗಳನ್ನು ಆರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ.
ರಾಜ್ಯ ಚುನಾವಣಾ ಆಯೋಗ 194 ಮುಕ್ತ ಚಿಹ್ನೆಗಳ ಪಟ್ಟಿಪ್ರಕಟಿಸಿದೆ. ಇದರಲ್ಲಿ ಕಹಳೆ ಊದುತ್ತಿರುವ ಮನುಷ್ಯ ಚಿಹ್ನೆ, ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ , ಆಟೋ, ಟೀವಿ, ವಜ್ರ, ಕ್ಯಾಮೆರಾ, ಗ್ಯಾಸ್ ಒಲೆ, ಕರಣಿ, ಕುಕ್ಕರ್, ತೆಂಗಿನ ತೋಟ, ಬ್ಯಾಟರಿ, ಟೆಲಿಫೋನ್, ಉಂಗುರ ಸೇರಿದಂತೆ ಇನ್ನು ಕೆಲವು ಗುರುತುಗಳು ಹೆಚ್ಚು ಪ್ರಚಲಿತದಲ್ಲಿವೆ. ಗ್ರಾಮ ಪಂಚಾಯಿತಿ ಚುನಾವಣೆ ರಾಜಕೀಯ ಪಕ್ಷದ ಬೆಂಬಲದ ಜೊತೆಗೆ ಸ್ಥಳೀಯವಾಗಿರುವ ಸಂಬಂಧ, ನೆಂಟಸ್ಥಿಕೆ, ಜನಪರತೆ ಆಧಾರದ ಮೇಲೆ ಸೋಲು ಗೆಲುವನ್ನು ನಿರ್ಧರಿಸುತ್ತದೆ. ಇದರೊಂದಿಗೆ ಚಿಹ್ನೆಯ ಪಾತ್ರವೂ ಅಷ್ಟೇ ಪ್ರಮುಖವಾಗಿದೆ.
ಗರಿಗೆದರಿದ ರಾಜಕೀಯ : ಸುಮಲತಾ ಆಯ್ಕೆಗೆ ಹೆಚ್ಚಿದ ಡಿಮ್ಯಾಂಡ್ ...
ಅಭ್ಯರ್ಥಿಗಳು ಆರಿಸಿಕೊಳ್ಳುವ ಚಿಹ್ನೆ ಜನಪ್ರಿಯತೆ ಮತ್ತು ಆಕರ್ಷಕವಾಗಿದ್ದರೆ ಗೆಲುವು ಇನ್ನಷ್ಟುಸುಲಭವಾಗಲಿದೆ ಎಂಬುದರ ಮೇಲೂ ಹಲವರಿಗೆ ನಂಬಿಕೆಯಿದೆ. ಹೀಗಾಗಿ ಮುಕ್ತ ಚಿಹ್ನೆಗಳೊಳಗೆ ಸೇರಿಕೊಂಡಿರುವ ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ, ಕಹಳೆ ಊದುತ್ತಿರುವ ಮನುಷ್ಯ ಚಿಹ್ನೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಬೆಂಬಲಿತರಿಂದ ಟ್ರ್ಯಾಕ್ಟರ್ ಗೆ ಬೇಡಿಕೆ:
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಸ್ಪರ್ಧೆ ಮಾಡುತ್ತಿರುವ ಬಹುತೇಕ ಸ್ಪರ್ಧಿಗಳು ಟ್ರ್ಯಾಕ್ಟರ್ ಓಡಿಸುತ್ತಿರುವ ರೈತನ ಚಿಹ್ನೆಗಾಗಿ ಬೇಡಿಕೆ ಇಡುತ್ತಿದ್ದಾರೆ. ಜೆಡಿಎಸ್ ತೆನೆ ಹೊತ್ತ ಮಹಿಳೆ ಚಿಹ್ನೆ ಹೊಂದಿರುವುರಿಂದ ಟ್ರ್ಯಾಕ್ಟರ್ ಓಡಿಸುತ್ತಿರುವ ರೈತನ ಸಿಂಬಲ್ ದೊರೆತರೆ ಮತದಾರರಿಗೆ ತಾನು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂಬುದನ್ನು ಸುಲಭವಾಗಿ ಮನವರಿಕೆ ಮಾಡಿಕೊಡಬಹುದು ಎಂದು ಭಾವಿಸಿದ್ದಾರೆ.
ಕಹಳೆ ಗುರುತಿಗೆ ಹೆಚ್ಚಿದ ಮಹತ್ವ:
ಮುಕ್ತ ಚಿಹ್ನೆಗಳ ಪಟ್ಟಿಯಲ್ಲಿರುವ ಕಹಳೆ ಊದುತ್ತಿರುವ ಮನುಷ್ಯನ ಚಿಹ್ನೆಯತ್ತಲೂ ಹೆಚ್ಚಿನವರು ಆಸಕ್ತಿ ತೋರುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಚಿತ್ರನಟಿ ಸುಮಲತಾ ಅವರು ಇದೇ ಚಿಹ್ನೆ ಇಟ್ಟುಕೊಂಡು ಸ್ಪರ್ಧಿಸಿದ್ದರು. ರೋಚಕತೆ ಸೃಷ್ಟಿಸಿ ಎಲ್ಲರ ಗಮನ ಸೆಳೆದಿದ್ದ ಆ ಚುನಾವಣೆಯಲ್ಲಿ ಸುಮಲತಾ ಅವರಿಗೆ ಕಹಳೆ ಊದುತ್ತಿರುವ ಮನುಷ್ಯನ ಚಿಹ್ನೆ ಗೆಲುವಿನ ಅದೃಷ್ಟತಂದುಕೊಟ್ಟಿತು. ಅದೇ ಗೆಲುವಿನ ಅದೃಷ್ಟವನ್ನು ತಮಗೂ ತಂದುಕೊಡಬಹುದೆಂಬ ನಂಬಿಕೆ ಅನೇಕ ಅಭ್ಯರ್ಥಿಗಳಲ್ಲಿದೆ. ಹಾಗಾಗಿ ಈ ಚಿಹ್ನೆಯಡಿ ಸ್ಪರ್ಧಿಸಲು ಹೆಚ್ಚಿನವರು ಆಸಕ್ತಿ ತೋರುತ್ತಿದ್ದಾರೆ.
ಅಭ್ಯರ್ಥಿಗಳಿಗೆ ನಿರಾಸೆ:
ಅನ್ಯ ರಾಜ್ಯಗಳ್ಲಲಿ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳು ಕಾರು, ಬೈಸಿಕಲ್, ಸೀಲಿಂಗ್ ಫ್ಯಾನ್, ಆನೆ, ತೆಂಗಿನ ಕಾಯಿ, ನೇಗಿಲು, ಬಿಲ್ಲು -ಬಾಣ, ಬಾಣ, ಕಿರೀಟ, ಏಣಿ, ತಕ್ಕಡಿ, ಉದಯಿಸುತ್ತಿರುವ ಸೂರ್ಯ, ಕೊಡೆ, ಎರಡು ಎಲೆಗಳು, ಕಾರುಸೇರಿದಂತೆ ಹಲವು ಗುರುತುಗಳನ್ನು ಹೊಂದಿವೆ.
ಇವು ಆಕರ್ಷಣೀಯ ಚಿಹ್ನೆಗಳಾಗಿದ್ದರೂ ಗ್ರಾಪಂ ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗುವವರಿಗೆ ನೀಡಲಾಗುವುದಿಲ್ಲ. ಇದು ಹಲವರಲ್ಲಿ ನಿರಾಸೆಯನ್ನೂ ಉಂಟು ಮಾಡಿದೆ. ಅಭ್ಯರ್ಥಿಗಳು ಮುಕ್ತ ಚಿಹ್ನೆಗಳಲ್ಲಿರುವ ಗುರುತುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಮಾನ್ಯತೆ ಪಡೆದ ಪಕ್ಷಗಳಿಗೆ ನೀಡಲಾಗಿರುವ ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಚುನಾವಣಾಧಿಕಾರಿಗಳು ‘ಕನ್ನಡಪ್ರಭ‘ಕ್ಕೆ ಪ್ರತಿಕ್ರಿಯೆ ನೀಡಿದರು.