ಸಿದ್ಧಗಂಗೆಗೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ದಂಪತಿ ಭೇಟಿ

By Kannadaprabha News  |  First Published Nov 22, 2023, 8:31 AM IST

ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ದಂಪತಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು.


  ತುಮಕೂರು :  ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ದಂಪತಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು.

ಕ್ಷೇತ್ರದ ಪ್ರವಾಸದಲ್ಲಿರುವ ಡಿ.ಟಿ.ಶ್ರೀನಿವಾಸ್ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ 45 ವಿಧಾನಸಭಾ ಕ್ಷೇತ್ರಗಳಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರ ಹರಡಿದೆ. ತುಮಕೂರು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು, ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೇವೆ. ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಾ ಶಿಕ್ಷಕರ ಕಷ್ಟ ಸುಖಗಳನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಕ್ಷೇತ್ರದ ಮತದಾರ ಬಂಧುಗಳಾದ ಶಿಕ್ಷಕರು ಸಹ ಬದಲಾವಣೆ ಬಯಸಿದ್ದು, ಸ್ವಾಮೀಜಿಗಳ ಆಶೀರ್ವಾದವೂ ದೊರೆತಿರುವುದು ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂದರು.

Tap to resize

Latest Videos

undefined

ಆಗ್ನೇಯ ಪದವೀಧರರ ಚುನಾವಣೆಯ ವೇಳೆ ನನಗೆ ಎರಡನೇ ಸ್ಥಾನ ಪಡೆಯಲು ಕ್ಷೇತ್ರದ ಮತದಾರರೇ ಕಾರಣ. ಎಲ್ಲಾ ಪದವೀಧರರು ಉದ್ಯೋಗದಲ್ಲಿರಲಿ, ಇಲ್ಲದಿರಲಿ ಮತ ಹಾಕುವ ಹಕ್ಕು ಪಡಯುತ್ತಾರೆ. ಆದರೆ, ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರು ಮಾತ್ರ ಮತದಾರರಾಗಿರುವ ಹಿನ್ನೆಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ ಕಡಿಮೆಯಿದೆ. ಕಳೆದ ಚುನಾವಣೆಯಲ್ಲಿ ಸೋಲು ಕಂಡಿರುವ ನನ್ನ ಮೇಲೆ ವಿಶೇಷ ಒಲವೂ ಇದೆ. ಎಲ್ಲಾ ಮತದಾರರನ್ನು ನೇರವಾಗಿ ಭೇಟಿಯಾಗಿ ಮತ ನೀಡುವಂತೆ ಮನವಿ ಮಾಡಲು ಅವಕಾಶ ಹೆಚ್ಚಿದ್ದು, ಅದು ನನಗೆ ಶ್ರೀರಕ್ಷೆಯಾಗಲಿದೆ. ಈ ಹಿನ್ನೆಲೆಯಲ್ಲಿಯೇ ಐದು ಜಿಲ್ಲೆಗಳ ಪ್ರವಾಸ ಆರಂಭಿಸಿರುವುದಾಗಿ ಡಿ.ಟಿ. ಶ್ರೀನಿವಾಸ್ ತಿಳಿಸಿದರು.

ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಹಿರಿಯೂರು ಶಾಸಕರಾಗಿದ್ದಾಗ ಕ್ಷೇತ್ರವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿ ಪಡಿಸಿದ್ದೇನೆ. ಆದರೆ, ಅಂತಿಮವಾಗಿ ಮತದಾರರ ತೀರ್ಪನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಕಳೆದ ಬಾರಿಯ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಅಲ್ಪ ಅಂತರದಲ್ಲಿ ಸೋತಿರುವ ಶ್ರೀನಿವಾಸ್ ಅವರ ಬಗ್ಗೆ ಕ್ಷೇತ್ರದ ಮತದಾರರಲ್ಲಿ ಈ ಬಾರಿ ಹೆಚ್ಚಿನ ಒಲವಿದೆ. ಆದ್ದರಿಂದ ನಮಗೆ ಗೆಲುವು ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದಗಂಗಾ ಮಠದ ಭೇಟಿ ನಂತರ, ಸಹಕಾರ ಸಚಿವ ಕೆ.ಎನ್. ರಾಜಣ್ಣನವರ ಮನೆಗೆ ಪೂರ್ಣೀಮ ಶ್ರೀನಿವಾಸ್ ದಂಪತಿ ಭೇಟಿ ನೀಡಿ ಸಹಕಾರ ಕೋರಿದರು. ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ಪಾಪಣ್ಣ, ಪ್ರವರ್ಗ ೧ರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶಪ್ಪ, ಮುಖಂಡರಾದ ಡಿ.ಎಂ. ಸತೀಶ್, ಸುರೇಶ್, ಕುಣಿಹಳ್ಳಿ ಮಂಜುನಾಥ್, ಅರುಣ್ ಕೃಷ್ಣಯ್ಯ, ಷಣ್ಮುಖಪ್ಪ, ಶ್ರೀನಿವಾಸ್, ಹುಚ್ಚಾಚಾರ್, ಲೋಕೇಶ್, ಗಂಗಾಧರ್, ಕೃಷ್ಣಕುಮಾರ್ ಇದ್ದರು.

click me!