ಪಡಿತರ ವಿತರಣೆ ಅಕ್ಕಿ ಪ್ರಮಾಣ ಕಡಿತ

By Kannadaprabha NewsFirst Published Mar 29, 2021, 4:34 PM IST
Highlights

ಪಡಿತರ ವಿತರಣೆಯಲ್ಲಿ ಕಡಿತ ಮಾಡಲಾಗಿದೆ. ಓರ್ವ ವ್ಯಕ್ತಿಗೆ ನೀಡುತ್ತಿದ್ದ 5 ಕೆಜಿ ಅಕ್ಕಿಯ ಬದಲಿಗೆ 2 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. 

ಬಂಗಾರಪೇಟೆ (ಮಾ.29):  ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಡವರು ಮೂರೊತ್ತು ನೆಮ್ಮದಿಯಾಗಿ ಊಟ ಮಾಡಲೆಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ವ್ಯಕ್ತಿಗೆ 7 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಆದರೆ ಹಾಲಿ ಸರ್ಕಾರ ಅದನ್ನು ಕಡಿತಗೊಳಿಸಿ ಯುಗಾದಿ ಹಬ್ಬದ ಕಾಣಿಕೆಯಾಗಿ ಪಡಿತರದಾರರಿಗೆ ತಲಾ 2 ಕೆಜಿ ಅಕ್ಕಿ 3 ಕೆಜಿ ರಾಗಿ ನೀಡಲು ಮುಂದಾಗಿದೆ.

ಅನ್ನಭಾಗ್ಯ ಹೆಸರಲ್ಲಿ ಪ್ರತಿ ವ್ಯಕ್ತಿಗೆ 7ಕೆಜಿ ಅಕ್ಕಿ,ಗೋದಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ 7ಕೆಜಿ ಅಕ್ಕಿಯನ್ನು 5ಕೆಜಿಗೆ ಇಳಿಸಿತ್ತು. ಈಗ ಮತ್ತೆ ಅದನ್ನು 3ಕೆಜಿ ಕಡಿತಗೊಳಿಸಿ ಯುಗಾದಿ ಹಬ್ಬಕ್ಕೆ ಕಾಣಿಕೆಯಾಗಿ ವ್ಯಕ್ತಿಗೆ ತಲಾ 2ಕೆಜಿ ಅಕ್ಕಿ ಜೊತೆ 3ಕೆಜಿ ರಾಗಿ ನೀಡಲಿದೆ.

ಕಳೆದ ವರ್ಷ ಏಪ್ರಿಲ್‌ನಿಂದಲೇ 7 ಕೆಜಿಯಿದ್ದ ಅಕ್ಕಿಯನ್ನು 5 ಕೆಜಿಗೆ ಕಡಿತಗೊಳಿಸಿರುವುದಕ್ಕೆ ಗ್ರಾಮೀಣ ಭಾಗದಲ್ಲಿ ವ್ಯಾಪಕ ವಿರೋಧ ಉಂಟಾಗಿತ್ತು. ಈಗ ಮತ್ತೆ ಏಪ್ರಿಲ್‌ನಿಂದ ಅಕ್ಕಿ ಪ್ರಮಾಣ ಕಡಿತಗೊಳಿಸಿರುವುದು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ತಲೆ ನೋವು ತಂದಿದೆ.

ಬಿಪಿಎಲ್ ಕಾರ್ಡ್ : ಮತ್ತೊಂದು ಹೊಸ ನಿಯಮ ಗಮನಿಸಿ ..

ದಾಖಲೆ ಪ್ರಮಾಣದಲ್ಲಿ ರೈತರಿಂದ ರಾಗಿಯನ್ನು ಸರ್ಕಾರ ಬೆಂಬಲ ಬೆಲೆಗೆ ಖರೀದಿ ಮಾಡಿರುವುದರಿಂದ ಅದನ್ನು ಮತ್ತೆ ರೈತರಿಗೇ ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಹಂಚಲು ಮುಂದಾಗಿದೆ. ಕಳೆದ ವರ್ಷ ಮಾರುಕಟ್ಟೆದರಕಿಂತಲೂ ಸರ್ಕಾರ ಕಡಿಮೆ ಬೆಲೆಗೆ ರಾಗಿ ಖರೀದಿಸಿದ್ದರಿಂದ ರೈತರು ಸರ್ಕಾರಕ್ಕೆ ರಾಗಿ ಕೊಡಲು ಹಿಂದೇಟು ಹಾಕಿದ್ದರು. ಆದರೆ ಈ ವರ್ಷ ಕ್ವಿಂಟಾಲ್‌ಗೆ 3295 ನಿಗದಿಪಡಿಸಿರುವುದರಿಂದ ದಾಖಲೆ ಪ್ರಮಾಣದಲ್ಲಿ ರೈತರು ರಾಗಿ ಮಾರಾಟ ಮಾಡಿದ್ದಾರೆ.

ಕಳೆದ ವರ್ಷ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರಾಗಿ ಬೆಳೆ ಸಹ ಉತ್ತಮವಾಗಿ ಬಂದಿದ್ದು,ಇಲ್ಲಿಯವರೆಗೂ 2608 ರೈತರು 49800 ಕ್ವಿಂಟಾಲ್‌ ರಾಗಿ ಮಾರಾಟಕ್ಕೆ ನೋಂದಾಯಿಸಿಕೊಂಡಿದ್ದರು.2448 ರೈತರು 42381 ಕ್ವಿಂಟಾಲ್‌ ರಾಗಿ ಮಾರಾಟ ಮಾಡಿದ್ದಾರೆ. ರಾಗಿ ಖರೀದಿಗೆ ಮಾ.15ಕೊನೆದಿನವಾಗಿತ್ತು. ಸರ್ಕಾರ ಮತ್ತೆ ಮಾ.31ರವರೆಗೂ ವಿಸ್ತರಿಸಿರುವುದರಿಂದ ಉಳಿದಿರುವ ರೈತರು ಮತ್ತೆ ಮುಗಿಬಿದ್ದು ಮಾರಾಟ ಮಾಡುತ್ತಿದ್ದಾರೆ.

ರೈತರಿಂದ ತಾಲೂಕಿನಲ್ಲಿ ದಾಖಲೆ ಪ್ರಮಾಣದಲ್ಲಿ ರಾಗಿ ಖರೀದಿಸಿರುವುದನ್ನು ಏಪ್ರಿಲ್‌ ಪಡಿತರ ಅಂಗಡಿಗಳ ಮೂಲಕ ಮತ್ತೆ ರೈತರಿಗೇ ಹಂಚಲು ಸರ್ಕಾರ ಮುಂದಾಗಿರುವುದರಿಂದ ಅಕ್ಕಿ ವಿತರಣೆ ಪ್ರಮಾಣ ಕಡಿತಗೊಳಿಸಿದೆ.

click me!